ಬೆಳ್ತಂಗಡಿ: ಕನ್ಯಾಡಿ ನಿತ್ಯಾನಂದ ನಗರ ಶ್ರೀರಾಮಕ್ಷೇತ್ರ ಮಹಾಸಂಸ್ಥಾನಮ್ ನಲ್ಲಿ ಬೆಂಗಳೂರಿನ ಆಗಮ ಪ್ರವೀಣ ಲಕ್ಷ್ಮೀಪತಿ ಗೋಪಾಲಾಚಾರ್ಯರ ನೇತೃತ್ವದಲ್ಲಿ ಅನ್ನಛತ್ರ ಶಿಲಾನ್ಯಾಸ ನಡೆಯಿತು.
ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ಅನ್ನಛತ್ರ ನಿರ್ಮಾಣಗೊಳ್ಳಲಿದ್ದು, ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಹರೀಶ್ ಕುಮಾರ್, ಮಾಜಿ ಶಾಸಕ ಮಾಂಕಾಳ್ ವೈದ್ಯ ಭಟ್ಕಳ, ಜಿ.ಪಂ. ಮಾಜಿ ಉಪಾಧ್ಯಕ್ಷ ತುಂಗಪ್ಪ ಬಂಗೇರ, ಬಿಲ್ಲವ ಮಹಾ ಮಂಡಲ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಉಪಾಧ್ಯಕ್ಷ ಪೀತಾಂಬರ ಹೆರಾಜೆ, ಉತ್ತರ ಕನ್ನಡ ಬಿಜೆಪಿ ಜಿಲ್ಲಾ ಪ್ರ.ಕಾರ್ಯದರ್ಶಿ ಗೋವಿಂದ ನಾಯ್ಕ್ ಭಟ್ಕಳ, ಕಾರ್ಯದರ್ಶಿ ಪ್ರಶಾಂತ್ ನಾಯ್ಕ್ ಕುಮುಟಾ, ದ.ಕ.ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೊರಗಪ್ಪ ನಾಯ್ಕ್, ಬ್ಲಾಕ್ ಕಾಂಗ್ರೇಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್,
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಉದ್ಯಮಿ ಸಂಜೀವ ಪೂಜಾರಿ ಬಿ.ಸಿ.ರೋಡ್, ಗುರುನಾರಾಯಣ ಸೇವಾ ಸಂಘದ ಮಾಜಿ ಅಧ್ಯಕ್ಷ ಪಿ.ಕೆ. ರಾಜು ಪೂಜಾರಿ, ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ, ಚಾತುರ್ಮಾಸ್ಯ ಸಮಿತಿ ಕಾರ್ಯಾಧ್ಯಕ್ಷ ಜಯಂತ್ ಕೋಟ್ಯಾನ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಇದೇ ವೇಳೆ ಜಗದ್ಗುರು ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ ವೃತಾರಂಭ ಕಾರ್ಯಕ್ರಮವೂ ದೇವರಗುಡ್ಡೆ ಗುರುದೇವ ಮಠದಲ್ಲಿ ಆರಂಭಗೊಂಡಿತು.
ಗುರುಪೂರ್ಣಿಮೆಯಂದು ಮೂಲ ಮಠ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಶ್ರೀ ಗುರುದೇವ ಮಠದಲ್ಲಿ ಬೆಳಗ್ಗೆ 7 ರಿಂದ 9 ಗಂಟೆಯವರೆಗೆ ಚಾತುರ್ಮಾಸ್ಯ ವೃತ ಸಂಕಲ್ಪ ವೈಧಿಕ ವಿಧಿ ವಿಧಾನಗಳು ನಡೆದವು. ಶಿಲಾನ್ಯಾಸದ ಬಳಿಕ ಶ್ರೀ ದೇವರಗುಡ್ಡೆ ಗುರುದೇವ ಮಠದ ಪುರಾತನ ದೇವಲಿಂಗೇಶ್ವರ ದೇವಾಲಯದಿಂದ ಶ್ರೀಗಳ ಪುರಪ್ರವೇಶ ಮೆರವಣಿಗೆ ಹಾಗೂ ಗುರುಪೂರ್ಣಿಮೆಯ ವ್ಯಾಸಪೀಠದ ಪೀಠಾರೋಹಣ, ಗುರುಪಾದುಕಾ ಪೂಜೆ, ಶ್ರೀಗಳ ಆಶೀರ್ವಚನ ನಡೆಯಿತು.
ಚಾತುರ್ಮಾಸ್ಯ ವೃತದ ಸಮಾಪ್ತಿಯು ಸೆ.2ರಂದು ಮುಕ್ತಾಯಗೊಂಡು, ಅದೇ ದಿನ ಬೆಳಗ್ಗೆ ಸೀಮೋಲ್ಲಂಘನ ನೇತ್ರಾವತಿ ಸ್ನಾನಘಟ್ಟದಲ್ಲಿ ನಡೆಯಲಿದೆ. ಸೆಪ್ಟಂಬರ್ 3 ರಂದು ಶ್ರೀ ಗುರುದೇವ ಮಠದಲ್ಲಿ ಪಟ್ಟಾಭಿಷೇಕದ ವರ್ಧಂತಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್ ಆಡಳಿತ ಸಮಿತಿ ಹಾಗೂ ಚಾತುರ್ಮಾಸ್ಯ ಸಮಿತಿ ಸದಸ್ಯರು ಹಾಜರಿದ್ದರು.