ದಿಡುಪೆ ವಿವಾಹ ನಿಶ್ಚಿತಾರ್ಥವಾಗಿದ್ದ ಯುವಕನ ಕೊಲೆ ಆರೋಪ ಸಾಬೀತು . ಯುವಕನನ್ನು ಕೊಲೆಗೈದು ಸುಟ್ಟು ಹಾಕಿದ ಪ್ರಕರಣ

 

ಬೆಳ್ತಂಗಡಿ : ಮದುವೆ ನಿಶ್ಚಿತಾರ್ಥವಾಗಿದ್ದ ಯುವಕನಿಗೆ ಆ ಯುವತಿಯೊಂದಿಗೆ ಮದುವೆಯಾಗಬಾರದೆಂದು ಆರು ಜನರ ತಂಡ ಒತ್ತಡ ಹೇರಿದ್ದಲ್ಲದೇ, ಅಪಹರಿಸಿ ಕೊಲೆಗೈದ ಪ್ರಕರಣ 1ನೇ ಜಿಲ್ಲಾ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಶಿಕ್ಷೆ  ಜು.28ಕ್ಕೆ ಪ್ರಕಟವಾಗಲಿದೆ.

ಬೆಳ್ತಂಗಡಿ ದಿಡುಪೆ ನಿವಾಸಿ ಸುರೇಶ್ ನಾಯ್ಕ (30) ಎಂಬವರು ಕೊಲೆಯಾದ ಯುವಕ. ಬೆಳ್ತಂಗಡಿ ನಾವರ ನಿವಾಸಿ ಆನಂದ ನಾಯ್ಕ (39), ಬೆಳ್ತಂಗಡಿ ಕಸಬಾ ನಿವಾಸಿ ಪ್ರವೀಣ್ ನಾಯ್ಕ (39), ಚಾರ್ಮಾಡಿ ನಿವಾಸಿ ವಿನಯ ಕುಮಾರ್ (34), ಮೂಡುಕೋಡಿ ನಿವಾಸಿ ಪ್ರಕಾಶ್ (35), ಬಂಟ್ವಾಳ ಪುದು ನಿವಾಸಿ ಲೋಕೇಶ್ (38), ಮೇಲಂತಬೆಟ್ಟು ನಿವಾಸಿ ನಾಗರಾಜ (43) ಪ್ರಕರಣದ ಅಪರಾಧಿಗಳು.

 

 

 

 

 

ಪ್ರಕರಣದ ವಿವರ: ಬೆಳ್ತಂಗಡಿ ತಾಲೂಕಿನ ನಾವರ ಎಂಬಲ್ಲಿನ ನಿವಾಸಿಯಾದ ಆರೋಪಿ ಆನಂದ ನಾಯ್ಕ ಎಂಬಾತನಿಗೆ ಮದುವೆಯಾಗಿ ಮಕ್ಕಳಿವೆ. ಆದರೂ ಆತ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಮದುವೆಯಾಗುವೆನೆಂದು ಆಕೆಯ ತಂದೆಯಲ್ಲಿ ವಿಷಯ ಪ್ರಸ್ತಾಪಿಸಿದ್ದ. ಆದರೆ ಯುವತಿ ಮನೆಯವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಕೆಲ ದಿನಗಳ ಬಳಿಕ ಆ ಯುವತಿಗೆ ದಿಡುಪೆ ನಿವಾಸಿ ಸುರೇಶ್ ನಾಯ್ಕ‌ ಎಂಬುವರ ಜತೆ ಮದುವೆ ನಿಗದಿಯಾಗಿ, 2017ರ ಏಪ್ರಿಲ್ 30ರಂದು ನಿಶ್ಚಿತಾರ್ಥವೂ ನಡೆದಿತ್ತು. ಈ ವಿಚಾರ ತಿಳಿದ ಆನಂದ ನಾಯ್ಕ, ಸುರೇಶ್ ನಾಯ್ಕನ ಮೊಬೈಲ್ ಸಂಖ್ಯೆ ಸಂಗ್ರಹಿಸಿ ‘ನೀನು ಮದುವೆಯಾಗುವ ಯುವತಿಯನ್ನು ನಾನು ಪ್ರೀತಿಸುತ್ತಿದ್ದು, ಈ ಸಂಬಂಧವನ್ನು ಬಿಟ್ಟುಬಿಡು’ ಎಂದು ಒತ್ತಾಯಿಸಿದ್ದಾನೆ.

ಇದಕ್ಕೆ ಒಪ್ಪದಿದ್ದಾಗ ಸುರೇಶ್ ನಾಯ್ಕಗೆ ಜೀವ ಬೆದರಿಕೆಯನ್ನೂ ಆರೋಪಿ ಹಾಕಿದ್ದ. ನಂತರ 2017 ಜುಲೈ 29ರಂದು ಎರಡನೇ ಆರೋಪಿ ಪ್ರವೀಣ್ ನಾಯ್ಕ ಎಂಬಾತ ಸುರೇಶ್ ನಾಯ್ಕಗೆ ಕರೆ ಮಾಡಿ ಆತ್ಮೀಯವಾಗಿ ಮಾತನಾಡಿ ‘ಗಂಗಾ ಕಲ್ಯಾಣ ಯೋಜನೆಯಡಿ ಹಣ ಸಿಗುವ ಬಗ್ಗೆ ಮಾಹಿತಿ ನೀಡಿದ್ದಲ್ಲದೆ, ಉಜಿರೆಗೆ ಬನ್ನಿ’ ಎಂದು ತಿಳಿಸಿದ್ದ. ಅದರಂತೆ ಸುರೇಶ್ ನಾಯ್ಕ ಉಜಿರೆಗೆ ಬಂದಾಗ ಆರೋಪಿಗಳಾದ ಪ್ರವೀಣ್ ನಾಯ್ಕ, ವಿನಯ್, ಪ್ರಕಾಶ್, ಲೋಕೇಶ್, ನಾಗರಾಜ್ ಒಟ್ಟು ಸೇರಿ ಮಾರುತಿ ಓಮ್ನಿಯಲ್ಲಿ ಸುರೇಶ್ ನಾಯ್ಕನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಈ ಸಂದರ್ಭ ಯುವಕ ಬಿಡುವಂತೆ ಒತ್ತಡ ಹಾಕಿದ್ದು, ಇದಕ್ಕೆ ಒಪ್ಪದಿದ್ದಾಗ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿದ್ದಾರೆ.

ಬಳಿಕ ಆನಂದ್ ನಾಯ್ಕನ ಜತೆಗೂಡಿ ಮೃತದೇಹವನ್ನು ಧರ್ಮಸ್ಥಳದ ಅವೆಕ್ಕಿ ಎಂಬಲ್ಲಿಗೆ ಕೊಂಡೊಯ್ದು ಪೆಟ್ರೋಲ್ ಹಾಕಿ ಗುರುತು ಸಿಗದಂತೆ ಸುಟ್ಟು ಹಾಕಿದ್ದಾರೆ. ಮೃತಪಟ್ಟ ವ್ಯಕ್ತಿಯ ಸೊತ್ತುಗಳನ್ನು ಕೊಯ್ಯೂರು ಕಟ್ಟ ಎಂಬಲ್ಲಿ ಮೋರಿಯ ಕೆಳಗೆ ಸುಟ್ಟು ಹಾಕಿದ್ದರು.ಧರ್ಮಸ್ಥಳ ಪೊಲೀಸ್ ಠಾಣೆಯ ಅಂದಿನ ಪಿಎಸ್ ಐ ಕೊರಗಪ್ಪ ನಾಯ್ಕ   ದಾಖಲಿಸಿಕೊಂಡ ದೂರಿನಂತೆ
ಆರೋಪಿಗಳನ್ನು  ಆಗಿನ ಸರ್ಕಲ್ ಇನ್ಸ್ ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದ ಪೊಲೀಸ್ ತಂಡ 3 ದಿನದಲ್ಲಿ   ಬಂಧಿಸಿ    ಸಮಗ್ರ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ಸಮಗ್ರ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಟಿ.ಪಿ. ರಾಮಲಿಂಗೇಗೌಡ ಅವರು 33 ಮಂದಿ ಸಾಕ್ಷಿ ವಿಚಾರಣೆ ನಡೆಸಿ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಶೇಖರ್ ಶೆಟ್ಟಿ ವಾದಿಸಿದ್ದರು.

error: Content is protected !!