ಹುತಾತ್ಮ ಸೈನಿಕನ ಕುಟುಂಬಕ್ಕೆ ಬೇಕಿದೆ ಭರವಸೆ ಈಡೇರಿಸುವ ಕೈಗಳು: ಆಶ್ವಾಸನೆಗಳ ಅರಮನೆಗೆ ಸೀಮಿತವಾಯಿತೇ ಸರಕಾರದ ಸೌಲಭ್ಯಗಳ ಭರವಸೆ: ಸೈಟೂ ಸಿಕ್ಕಿಲ್ಲ, ಕುಟುಂಬ ಸದಸ್ಯರಿಗೆ ಉದ್ಯೋಗವೂ ಇಲ್ಲ!: ಯೋಧ ಏಕನಾಥ ಶೆಟ್ಟಿ ನಾಪತ್ತೆಯಾಗಿ ಐದು ವರ್ಷ ಕಳೆದರೂ ಈಡೇರಿಲ್ಲ ಆಶ್ವಾಸನೆ: ಸ್ಮರಣೆಗಾಗಿ ಯೋಧರ ಕುಟುಂಬಸ್ಥರಿಂದ ಜು.22ರಂದು ಗುರುವಾಯನಕೆರೆ ಸುತ್ತಮುತ್ತ ಗಿಡನಾಟಿ

 

 

ಬೆಳ್ತಂಗಡಿ: ಅವರು ‌ಬೆಳ್ತಂಗಡಿ‌ ತಾಲೂಕಿನ ಹೆಮ್ಮೆಯ ‌ಯೋಧ. ಸುಮಾರು 25 ವರ್ಷಗಳ ಕಾಲ‌ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಆದರೂ ದೇಶ ಸೇವೆ ಮಾಡುವ ಹುಮ್ಮಸ್ಸು ಮಾತ್ರ ಕುಗ್ಗಿರಲಿಲ್ಲ… ಮತ್ತೆ ದೇಶ ಸೇವೆಯ ಪಣ ತೊಟ್ಟು, ವಾಯುಸೇನೆಯ ಡಿಫೆನ್ಸ್ ಸೆಕ್ಯುರಿಟಿ ಫೋರ್ಸ್ ಸೇರಿ ‌ಕೆಲಸ ನಿರ್ವಹಿಸುತ್ತಿದ್ದರು. ಒಟ್ಟು 31 ವರ್ಷಗಳ ಕಾಲ ಸೇವೆ ನಿರ್ವಹಿಸಿದ‌ ಅವರು ಹಾಗೂ 29 ಸೈನಿಕರಿದ್ದ ಎಎನ್-32 ವಿಮಾನ 2016ರ ಜುಲೈ 22ರಂದು ಚೆನೈ‌ನಿಂದ ಅಂಡಮಾನ್ ನ ಪೋರ್ಟ್ ಬ್ಲೇರ್ ತೆರಳಿದ್ದು ದಿಢೀರ್ ನಾಪತ್ತೆಯಾಗಿತ್ತು. ಈ ಯೋಧನ ಸುಳಿವು ಸಿಗದ ಹಿನ್ನೆಲೆ ಸೇನೆ ಸಕಲ ಗೌರವ ಅರ್ಪಿಸಿತ್ತು. ಸರಕಾರದ ವತಿಯಿಂದಲೂ ಈ ಯೋಧನ ಕುಟುಂಬಕ್ಕೆ ಹಲವು ಆಶ್ವಾಸನೆಗಳು ದೊರೆತಿದ್ದವು. ಆದರೆ ಇದೀಗ ಐದು ವರ್ಷಗಳ ಬಳಿಕ ಯಾವೆಲ್ಲಾ ಆಶ್ವಾಸನೆಗಳು ಈಡೇರಿದವು ಎಂದರೆ ಯಾರ ಬಳಿಯೂ‌ ಉತ್ತರವಿಲ್ಲ… ಹೌದು… ಇದು ಗುರುವಾಯನಕೆರೆಯ‌  ಯೋಧ‌ ಏಕನಾಥ ‌ಶೆಟ್ಟಿಯವರ  ಕುಟುಂಬದ ಕಥೆ… ಮುಖ್ಯವಾಗಿ ದೇಶಸೇವೆ ನಡೆಸಿದ ಯೋಧನ ಕುಟುಂಬಕ್ಕೆ ಆಶ್ವಾಸನೆಗಳ ಅರಮನೆಯ ಚಿತ್ರಣ ತೋರಿಸಿ, ಏನನ್ನೂ ನೀಡದ ವಾಸ್ತವಿಕ ವಿಚಾರ…

 

 

ಬೆಳ್ತಂಗಡಿ ತಾಲೂಕು ಗುರುವಾಯನಕೆರೆಯ ನಿವಾಸಿ, ಯೋಧ ಏಕನಾಥ ಶೆಟ್ಟಿ ಅವರು ಚೆನೈಯಿಂದ ಪೋರ್ಟಬ್ಲೇರ್‌ಗೆ ಪ್ರಯಾಣಿಸುತ್ತಿದ್ದ ವಾಯುಸೇನೆಯ ಎಎನ್-32 ವಿಮಾನ ನಾಪತ್ತೆಯಾದ ಪ್ರಕರಣ 2016 ಜುಲೈ 22ರಂದು ನಡೆದಿದ್ದು, 2021 ಜು.22ರಂದು ಭರ್ತಿ ಐದು ವರ್ಷ ಪೂರ್ಣಗೊಳ್ಳುತ್ತದೆ. ಆದರೆ ಅವರ‌ ಕುಟುಂಬಕ್ಕೆ ಸರಕಾರದ ಪುಡಿಗಾಸು ಬಿಟ್ಟು ಬೇರೇನೂ‌ ಸಿಕ್ಕಿಲ್ಲ ಎಂಬುದು‌ ಆಶ್ಚರ್ಯವಾದರೂ ನಂಬಲೇ ಬೇಕಾದ ವಿಚಾರ. ದೇಶಕ್ಕಾಗಿ ದುಡಿದ ಯೋಧನ ಕುಟುಂಬಕ್ಕೇ ಇಂತಹಾ ಪರಿಸ್ಥಿತಿ ಎದುರಾದರೆ ಜನಸಾಮಾನ್ಯರ ಗತಿಯೇನು ಎಂಬ ಪ್ರಶ್ನೆಯೂ ಮೂಡದಿರದು. ಒಟ್ಟಿನಲ್ಲಿ‌ ನಿಸ್ವಾರ್ಥ ಹಾಗೂ‌ ತಾಲೂಕು ಹೆಮ್ಮೆ ಪಡುವಂತೆ ದೇಶ ಸೇವೆ ಮಾಡಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ಸೌಲಭ್ಯಗಳು ಸಿಗುವಂತಾಗಲಿ ಎಂಬುದು ‘ಪ್ರಜಾಪ್ರಕಾಶ ನ್ಯೂಸ್’ ತಂಡದ ಆಶಯವಾಗಿದೆ.

 

 

 

ಪ್ರಕರಣದ ಹಿನ್ನೆಲೆ:

ಯೋಧ ಏಕನಾಥ ಶೆಟ್ಟಿ ಅವರಿದ್ದ ವಿಮಾನ ಚೆನೈನಿಂದ ಏರ್‌ಪೋರ್ಸ್ ಅಂಡಮಾನ್ ಪೋರ್ಟ್‌ಬ್ಲೇರ್‌ಗೆ ಜು.22ರಂದು ಬೆಳಗ್ಗೆ ಹೊರಟಿತ್ತು. ಎಲ್ಲಾ ಸರಿಯಾಗಿದ್ದರೆ ಏಕನಾಥ ಶೆಟ್ಟಿ ಅವರು ಸೇರಿ 29 ಯೋಧರಿದ್ದ ವಿಮಾನ 11.30ಕ್ಕೆ ಅಂಡಮಾನ್ ನ ಪೋರ್ಟ್ ಬ್ಲೇರ್ ತಲುಪಬೇಕಿತ್ತು. ಆದರೆ ವಿಮಾನ ಬೆಳಗ್ಗೆ 9.30ರ ಸುಮಾರಿಗೆ ಸಿಗ್ನಲ್ ಕಡಿದುಕೊಂಡು‌ ನಾಪತ್ತೆಯಾಗಿತ್ತು.

 

 

 

ಸಾಂತ್ವನದ ನುಡಿಗಳು ಅಷ್ಟೇ!:

ವಿಮಾನ ನಾಪತ್ತೆಯಾದ ಬಳಿಕ ಕೇಂದ್ರ ಸರಕಾರ, ಅಂದಿನ ರಾಜ್ಯ ಸರಕಾರದ ಕೆಲ ಸಚಿವರುಗಳು, ಜನಪ್ರತಿನಿಧಿಗಳು ಇವರ ಮನೆಯವರಿಗೆ ಕರೆ ಮಾಡಿ ಸಾಂತ್ವನ ಹೇಳಿದ್ದರು. ಇನ್ನು ಕೆಲ ಮಂದಿ ಜನಪ್ರತಿನಿಧಿಗಳು ಮನೆಗೆ ಬಂದು ಸಾಂತ್ವನಿಸಿದ್ದರು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರಕಾರ, ಮಾಜಿ ಸಚಿವ ರಮನಾಥ ರೈ‌ ಅವರ ಮೂಲಕ 5 ಲಕ್ಷ ರೂ.ಗಳನ್ನು ಮಾತ್ರ ಹಸ್ತಾಂತರ ‌ಮಾಡಿತ್ತು. ಏಕನಾಥ ಶೆಟ್ಟಿಯವರ ಕರ್ತವ್ಯ ನಿರ್ವಹಿಸಿದ ಫಲವಾಗಿ ಸೇನೆಯಿಂದ ಬರಬೇಕಾದ ಹಣ ಬಂದಿದೆ. ಆದರೆ ಮನೆಯವರಿಗೆ ಸರಕಾರಗಳು ಸೈಟ್, ಸದಸ್ಯರಿಗೆ ಸರಕಾರಿ ಉದ್ಯೋಗ ಸೇರಿ ಹಲವು ಆಶ್ವಾಸನೆಗಳನ್ನು ನೀಡಿದ್ದರೂ, ಯಾವುದೇ ಸವಲತ್ತುಗಳು ಈವರೆಗೂ ಕುಟುಂಬಕ್ಕೆ ‌ಲಭಿಸದಿರುವುದು ಬೆಳಕಿಗೆ ಬಂದಿದೆ.

 

 

 

ಸ್ವಂತ ಶ್ರಮದಿಂದಲೇ ಬದುಕಿದ ಕುಟುಂಬ:

ಏಕನಾಥ ಶೆಟ್ಟಿ ಅವರಿಗೆ ಇಬ್ಬರು ಮಕ್ಕಳು. ಏಕನಾಥ ಶೆಟ್ಟಿ ಅವರ ಪತ್ನಿ ಜಯಂತಿಯವರು ಉಜಿರೆ ಎಸ್‌ಡಿಎಂ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಮಗಳು ಆಶಿತಾ ಅವರು ಎಂಎಚ್‌ಆರ್ ಶಿಕ್ಷಣ ಮುಗಿಸಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಪುತ್ರ ಅಕ್ಷಯ್ ಮಂಗಳೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾರೆ. ಏಕನಾಥ ಶೆಟ್ಟಿಯವರು ನಾಪತ್ತೆಯಾದ ಸಂದರ್ಭದಲ್ಲಿ ಮಕ್ಕಳಿಬ್ಬರೂ ಶಿಕ್ಷಣ ಪಡೆಯುತ್ತಿದ್ದರು. ಶಿಕ್ಷಕರಾಗಿರುವ ಜಯಂತಿ ಅವರು ತಮ್ಮ ಶ್ರಮದಿಂದಲೇ ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡಿದ್ದಾರೆ. ಈ ಮೂಲಕ ಸ್ವಾಭಿಮಾನದ ಬದುಕು‌ ಕಂಡುಕೊಂಡಿದ್ದಾರೆ.

 

 

ಏಕನಾಥ ಶೆಟ್ಟಿಯವರ ದೇಶಸೇವೆಯ ವಿವರ:

 

1985ರಲ್ಲಿ ಭಾರತೀಯ ಭೂ ಸೇನೆಗೆ ಸೇರ್ಪಡೆಯಾದ ಏಕನಾಥ ಶೆಟ್ಟಿ ಅವರು ಎಮ್‌ಆರ್‌ಸಿಗೆ ಸೇರಿಕೊಂಡಿದ್ದರು. ಸೇನೆಯಲ್ಲಿ ಸುಭೇದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. 1986ರಲ್ಲಿ ಶ್ರೀಲಂಕಾದಲ್ಲಿ ಭಾರತೀಯ ಶಾಂತಿ ಪಾಲನಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಅಲ್ಲದೆ ಜಮ್ಮು ಕಾಶ್ಮೀರ, ಅರುಣಾಚಲ, ಪಂಜಾಬ್ ಮೊದಲೆಡೆ ಸೇವೆ ಸಲ್ಲಿಸಿದ್ದರು. 2009ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು. ನಿವೃತ್ತರಾದ ಮೂರೇ ತಿಂಗಳಲ್ಲಿ ಅವರು ವಾಯುಸೇನೆಯ ಡಿಫೆನ್ಸ್ ಸೆಕ್ಯೂರಿಟಿ ಫೋರ್ಸ್‌ಗೆ ಸೇರಿಕೊಂಡರು. ಕಣ್ಣೂರಿನಲ್ಲಿ ತರಬೇತಿ ಮುಗಿಸಿ ಕಾನ್ಪುರ, ಗೋವಾದಲ್ಲಿ ಸೇವೆ ಸಲ್ಲಿಸಿ, 2 ವರ್ಷಗಳ ಕಾಲ ಪೋರ್ಟ್ ಬ್ಲೇರ್‌ನಲ್ಲಿ ಕಾರ‍್ಯನಿರ್ವಹಿಸುತ್ತಿದ್ದರು. 2017ರ ಜನವರಿಯಲ್ಲಿ ಬೆಂಗಳೂರಿಗೆ ವರ್ಗಾವಣೆಯಾಗುವವರಿದ್ದರು‌.

 

×

 

ವಯಕ್ತಿಕ ಜೀವನ:

ಮೂಲತಃ ಮಂಗಳೂರಿನ ನಿವೃತ್ತ ಯೋಧ ದಿ. ಕೃಷ್ಣ ಶೆಟ್ಟಿ ಹಾಗೂ ಸುನಂದ ದಂಪತಿಗಳಿಗೆ 3 ಗಂಡು, 2 ಹೆಣ್ಣು ಮಕ್ಕಳು. ಐದು ಮಂದಿ ಮಕ್ಕಳಲ್ಲಿ ಏಕನಾಥ ಶೆಟ್ಟಿ ಮೂರನೆಯವರು. ಮಂಗಳೂರಿನ ಲೇಡಿಹಿಲ್ ಕೆನರಾ ಹೈಸ್ಕೂಲಿನಲ್ಲಿ ಪ್ರೌಢಶಾಲೆ ಶಿಕ್ಷಣ ಮುಗಿಸಿ ಸೇನೆಗೆ ಸೇರ್ಪಡೆಯಾಗಿದ್ದರು. ಗುರುವಾಯನಕೆರೆ ನಿವಾಸಿ ಜಯಂತಿಯ ಅವರನ್ನು ವಿವಾಹವಾಗಿದ್ದು, ಬಳಿಕ ಗುರುವಾಯನಕೆರೆಯಲ್ಲಿ ವಾಸ್ತವ್ಯ ಹೊಂದಿದ್ದರು.

 

 

ಗುರುವಾರ ಗಿಡನಾಟಿ:

ಯೋಧ ಏಕನಾಥ ಶೆಟ್ಟಿ ಸ್ಮರಣಾರ್ಥ   ಅವರ ಕುಟುಂಬಸ್ಥರು ಗುರುವಾಯನಕೆರೆಯ ಆಸುಪಾಸಿನಲ್ಲಿ 100 ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಜು.22 ರಂದು ಹಮ್ಮಿಕೊಂಡಿದ್ದಾರೆ.

 

error: Content is protected !!