ಬೆಳ್ತಂಗಡಿ: ಗ್ರಾ.ಪಂ ಸದಸ್ಯರೊಬ್ಬರ ಕೈಯಿಂದ 81 ಸಾವಿರ ರೂ. ಪಡೆದು ಸಾಧು ವೇಷಧಾರಿಗಳು ವಂಚಿಸಿರುವ ಘಟನೆ ಬೆಳ್ತಂಗಡಿಯ ಪಡಂಗಡಿ ಬಳಿ ನಡೆದಿದೆ.
ಪಡಂಗಡಿ ಗ್ರಾಮ ಪಂಚಾಯತ್ ಸದಸ್ಯರೊಬ್ಬರನ್ನು ಸಾಧುವಿನ ವೇಷದಲ್ಲಿ ಬಂದ ನಾಲ್ವರು ವಂಚಕರು ಮಂಕುಬೂದಿ ಎರಚಿ ವಂಚಿಸಿದ್ದಾರೆ.
ಪಡಂಗಡಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಸಂತೋಷ್ ಕುಮಾರ್ ಜೈನ್ ಅವರ ಮನೆಗೆ ಸಾಧುಗಳ ವೇಷದಲ್ಲಿ ಬಂದ್ದವರು ಅವರ ಕೈಯಿಂದ ಸುಮಾರು 81 ಸಾವಿರ ರೂ. ಹಣವನ್ನು ಪಡೆದುಕೊಂಡು ಹೋಗಿದ್ದಾರೆ.
ಬೊಲೆರೊ ವಾಹನದಲ್ಲಿ ಸಾಧುಗಳ ರೂಪದಲ್ಲಿ ಬಂದ ನಾಲ್ವರು ತಾಲೂಕಿನ ಗಣ್ಯ ವ್ಯಕ್ತಿಯೋರ್ವರ ಮನೆಗೆ ಹೋಗಲು ದಾರಿ ತೋರಿಸುವಂತೆ ಕೇಳಿಕೊಂಡಿದ್ದರು.
ಹಿಂದಿ ಬಾಷೆಯಲ್ಲಿ ಮಾತನಾಡುತ್ತಿದ್ದ ಅವರಿಗೆ ಸರಿಯಾದ ವಿವರ ನೀಡಿದ ಸಂತೋಷ್ ಅವರು ಮಾತನಾಡಿದ ಶೈಲಿಯನ್ನು ಗಮನಿಸಿದ ಸನ್ಯಾಸಿಗಳು ಇವರ ಬಗ್ಗೆ, ವಿಚಾರಿಸಿ, ತಮ್ಮ ಮನೆಗೆ ನಾವು ಬರಬಹುದೇ ಎಂದು ಕೇಳಿಕೊಂಡಾಗ ಅದಕ್ಕೆ ಅವರು ಒಪ್ಪಿಗೆ ಸೂಚಿಸಿದರೆನ್ನಲಾಗಿದೆ.
ಆಗ ಇಬ್ಬರು ಮನೆಯೊಳಗೆ ಹೋಗಿ ಇಬ್ಬರು ಹೊರಗೆ ಗಾಡಿಯಲ್ಲೇ ಕೂತಿದ್ದರು. ಮನೆಯೊಳಗೆ ಬಂದ ಇಬ್ಬರು ಮಾತಿನಲ್ಲಿ ಮರುಳು ಮಾಡಿ ಹಣ ನೀಡುವಂತೆ ಮಾಡಿದ್ದಾರೆ. ಆರಂಭದಲ್ಲಿ 5 ಸಾವಿರ ರೂಪಾಯಿ ಸಂತೋಷ್ ಅವರು ನೀಡಿದ್ದು, ಬಳಿಕ ಸಾಧು ವೇಷಧಾರಿಗಳು ಒಂದು ಸರವನ್ನು ಕೊರಳಿಗೆ ಹಾಕಿ 25 ಸಾವಿರ ನೀಡುವಂತೆ ಕೋರಿದ್ದಾರೆ. ಸಂತೋಷ್ ಅಷ್ಟು ಹಣವನ್ನೂ ನೀಡಿದ್ದಾರೆ. ಬಳಿಕ ನಿನ್ನ ಜೀವನ ಇನ್ನೂ ಒಳ್ಳೆಯ ರೀತಿಯಲ್ಲಿ ಸಾಗುತ್ತದೆ ಎಂದು ಹೇಳಿದ ಸಾಧು ವೇಷಧಾರಿಗಳು ಪುನಃ 51 ಸಾವಿರ ರೂ.ಗಳ ಬೇಡಿಕೆ ಇಟ್ಟು, ಪಡೆದುಕೊಂಡಿದ್ದಾರೆ. ಈ ನಡುವೆ ವೇಷಧಾರಿಯೊಬ್ಬ ನಮಗೆ ಹಣ ಕೊಟ್ಟಿರುವುದಕ್ಕೆ ಬೇಸರವಾಗಿದೆಯಾ ಎಂದು ಕೇಳಿದ್ದಾರೆ. ಸಂತೋಷ್ ಕುಮಾರ್ ಜೈನ್ ಅವರು ನನಗೆ ಯಾವುದೇ ಬೇಸರವಿಲ್ಲ ಎಂದು ಹೇಳಿದ್ದಾರೆ. ಸನ್ಯಾಸಿಗಳಲ್ಲಿ ಇಬ್ಬರು ಮನೆಯ ಹೊರಗೆ ನಿಂತು ಈ ಮನೆಗೆ ಬಂದವರನ್ನು ಒಳಗೆ ಹೋಗದಂತೆ ತಡೆದಿದ್ದಾರೆ ಎನ್ನಲಾಗಿದೆ. ಒಟ್ಟು 81 ಸಾವಿರ ಪಡೆದುಕೊಂಡ ಸುಮಾರು 1 ಗಂಟೆಯ ಅಂತರದಲ್ಲಿ ಸಂತೋಷ್ ಕುಮಾರ್ ಜೈನ್ ಅವರಿಗೆ ನನಗೇನಾಗಿದೆ? ನಾನು ಯಾಕೆ ಹಣಕೊಟ್ಟೆ ಮೊದಲಾದ ಚಿಂತೆ ಆರಂಭವಾಗಿದೆ. ಆದರೆ ಈ ಪ್ರಶ್ನೆ ಮೂಡುವಾಗ ಅದಾಗಲೇ 81 ಸಾವಿರ ರೂ. ಕಳೆದುಕೊಂಡಿದ್ದರು.
ಈ ಘಟನೆಯಲ್ಲಿ ‘ಕೊಟ್ಟವ ಕೋಡಂಗಿ, ಈಸ್ಕೊಂಡವ ಈರ್ಭಧ್ರ ಎಂಬಂತಾಗಿದ್ದು, ಸಾಧು ವೇಷಧಾರಿಗಳಾಗಿ ಮನೆಗೆ ಆಗಮಿಸುವವರ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕಿದೆ. ಜನರಿಗೆ ಇಷ್ಟೆಲ್ಲ ಮಾಹಿತಿ ಇದ್ದರೂ ಇನ್ನೂ ಕೂಡ ಜನ ಮೋಸ ಹೋಗುತಿದ್ದಾರೆ. ಯಾರೂ ಇಂತವರ ಮಾತಿಗೆ ಮರುಳಾಗದೆ ವಂಚನೆಗೆ ಒಳಗಾಗದೆ ಎಚ್ಚೆತ್ತುಕೊಳ್ಳಬೇಕಿದೆ.