ಅಪಾಯದಲ್ಲಿರುವ ಬೆಳ್ತಂಗಡಿಯ ಕುಟುಂಬಗಳ ಸ್ಥಳಾಂತರಕ್ಕೆ ಸಿದ್ಧತೆ: ಬೆಳ್ತಂಗಡಿ ತಾಲೂಕಿನಲ್ಲಿ ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ: ಮಿತ್ತಬಾಗಿಲು ಗ್ರಾಮದ ಗಣೇಶ್ ನಗರದ 32 ಕುಟುಂಬಗಳಿಗೆ ಕಾಳಜಿ ಕೇಂದ್ರ ತೆರೆಯಲು ಎಸಿ ಆದೇಶ: ಪಂಚಾಯತ್ ಹಾಗೂ ಅಧಿಕಾರಿಗಳ ತಂಡ ಮಿತ್ತಬಾಗಿಲು ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲನೆ

ಬೆಳ್ತಂಗಡಿ : ತಾಲೂಕಿನಾದ್ಯಂತ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತಿದೆ ಮುಂದಿನ ಕೆಲವು ದಿನ ನಿರಂತರವಾಗಿ ಭಾರೀ ಮಳೆ ಸುರಿಯುವ ಮುನ್ಸೂಚನೆ ಇರುವುದರಿಂದ, ತಾಲೂಕಿನ ಕೆಲವು ಕಡೆಗಳಲ್ಲಿ ಭೂ ಕುಸಿತ ಉಂಟಾಗುವ ಸಾಧ್ಯತೆ ಇದೆ ಈ ಹಿನ್ನೆಲೆಯಲ್ಲಿ ಮಿತ್ತಬಾಗಿಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುತ್ತಮುತ್ತ ಗುಡ್ಡ ಕುಸಿತದ ಅಪಾಯ ಇರುವ ಹಿನ್ನೆಲೆಯಲ್ಲಿ ಅದರಲ್ಲೂ ಅತ್ಯಂತ ಹೆಚ್ಚು ಅಪಾಯ ಇರುವ ಗಣೇಶ್ ನಗರದ 32 ಕುಟುಂಬಗಳಿಗೆ ತಾತ್ಕಾಲಿಕ ಕಾಳಜಿ ಕೇಂದ್ರ ತೆರೆಯಲು ಪುತ್ತೂರು ಸಹಾಯಕ ಆಯುಕ್ತ ಯತೀಶ್ ಉಳ್ಳಾಲ್ ಆದೇಶ ನೀಡಿದ್ದಾರೆ.

ಕಾಳಜಿ ಕೇಂದ್ರವನ್ನು ಮಿತ್ತಬಾಗಿಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆಯಲು ನಿರ್ಧರಿಸಲಾಗಿದ್ದು, ಈ ಬಗ್ಗೆ ಜುಲೈ 16 ರಂದು ಶಾಲೆಗೆ ಪಂಚಾಯತ್ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಶಾಲೆಯಲ್ಲಿರುವ ನೀರಿನ ವ್ಯವಸ್ಥೆ, ಅಡುಗೆ ಕೋಣೆ, ಶೌಚಾಲಯ ಹಾಗೂ ಇತರ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು.

ಮಿತ್ತಬಾಗಿಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಲತಾ ಮಾತನಾಡಿ ಪುತ್ತೂರು ಎಸಿಯವರ ಆದೇಶದಂತೆ ಕಾಳಜಿ ಕೇಂದ್ರ ತೆರೆಯಲು ಬೇಕಾಗುವ ಎಲ್ಲ ವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳ ಜೊತೆ ಭೇಟಿ ಪರಿಶೀಲನೆ ನಡೆಸಲಾಗಿದೆ. ಈ ಬಗ್ಗೆ ಪಂಚಾಯತ್ ಎಲ್ಲಾ ರೀತಿಯಲ್ಲಿ ಸನ್ನದ್ಧವಾಗಿದ್ದು ಪಂಚಾಯತ್ ನಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ನೋಡೆಲ್ ಅಧಿಕಾರಿ ಪಶು ಸಂಗೋಪಣಾ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್, ಪಶು ಪರಿವೀಕ್ಷಣಾಧಿಕಾರಿ ಜಯಕೀರ್ತಿ ಜೈನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಕೀರ್ತಿ, ಮಿತ್ತಬಾಗಿಲು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉಸ್ಮಾನ್, ಗ್ರಾಮಕರಣೀಕ ಸತೀಶ್ ,ಪ್ರಶಾಂತ್, ಹಾಗೂ ಶಾಲಾ ಶಿಕ್ಷಕರು ಬಿಸಿಯೂಟ ಸಿಬ್ಬಂದಿಗಳು ಉಪಸ್ಥಿತರಿದ್ದರು.

error: Content is protected !!