ಬೆಳ್ತಂಗಡಿ: ಜೀವನದುದ್ದಕ್ಕೂ ಅನ್ಯೋನ್ಯವಾಗಿದ್ದ ಸತಿಪತಿಗಳಿಬ್ಬರು ಸಾವಿನಲ್ಲೂ ಒಂದಾದ ಘಟನೆ ನಿನ್ನೆ ನೆಲ್ಯಾಡಿಯಲ್ಲಿ ನಡೆದಿದೆ.ಬೆಳ್ತಂಗಡಿ ತಾಲೂಕಿನ ಮುಂಡಾಜೆ ಸೈಂಟ್ ಮೇರಿಸ್ ಚರ್ಚ್‌ನ ಧರ್ಮಗುರು ಸೆಬಾಸ್ಟಿಯನ್ ಪುನ್ನತ್ತಾನತ್ತ್ ಅವರ ತಾಯಿ ಮೇರಿ ಪುನ್ನತ್ತಾನತ್ತ್ ಮತ್ತು ಅವರ ತಂದೆ ವರ್ಗೀಸ್ ಪುನ್ನತ್ತಾನತ್ತ್ ಅವರು ಮೃತ ದಂಪತಿಗಳು. ಇವರು ಕೇವಲ ಮೂರುವರೆ ಗಂಟೆ ಅಂತರದಲ್ಲಿ ಕೊನೆಯುಸಿರೆಳೆದ ಘಟನೆ ನಿನ್ನೆ ನಡೆದಿದೆ.
ದಂಪತಿ ಪೈಕಿ ಮೇರಿ ಅವರು ಮಧ್ಯಾಹ್ನ 3 ಗಂಟೆ ವೇಳೆಗೆ ಕೊನೆಯುಸಿರೆಳೆದರೆ, ವರ್ಗೀಸ್ ಅವರು ಸಂಜೆ 6.30 ರ ವೇಳೆಗೆ ಇಹಲೋಕ ತ್ಯಜಿಸಿದರು. ನೆಲ್ಯಾಡಿಯ ಪುನ್ನತ್ತಾನತ್ತ್ ನಿವಾಸಿಗಳಾದ ದಂಪತಿಗಳನ್ನು ಜುಲೈ 4ರಂದು ಕೋವಿಡ್ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಾಂಪತ್ಯ ಜೀವನದುದ್ದಕ್ಕೂ ಪರಸ್ಪರ ಅನ್ಯೋನ್ಯವಾಗಿದ್ದ ದಂಪತಿಗಳು ಇದೀಗ ಸಾವಿನಲ್ಲೂ ಒಂದಾಗಿದ್ದು, ಮನೆಯವರನ್ನು ದುಃಖಕ್ಕೆ ತಳ್ಳುವಂತೆ ಮಾಡಿದೆ. ಮೃತರು ಧರ್ಮಗುರು ಸಹಿತ ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರವು ನೆಲ್ಯಾಡಿಯ ಸೈಂಟ್ ಅಲ್ಫೋನ್ಸಾ ಚರ್ಚ್‌ನ ದಫನ ಭೂಮಿಯಲ್ಲಿ ಕೋವಿಡ್ ನಿಯಮ ಪ್ರಕಾರ ನೆರವೇರಿಸಲಾಯಿತು.