ಕಳೆಂಜ ಗ್ರಾಮದಲ್ಲಿ ಬೆಟ್ಟ- ಗುಡ್ಡ ಅಲೆದಾಡಿದರೂ ಸಿಗುತ್ತಿಲ್ಲ ನೆಟ್ ವರ್ಕ್!: ಮಾನಸಿಕ ಒತ್ತಡದಲ್ಲಿ ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳು: ಕಳೆಂಜ ಗ್ರಾಮದ ವಿದ್ಯಾರ್ಥಿಗಳಿಗೆ ತಾಲೂಕು ಕೇಂದ್ರದ ಅಂತರದಷ್ಟೇ ನೆಟ್ ವರ್ಕ್ ದೂರ!:‌ ಮಕ್ಕಳು ಶಿಕ್ಷಣದಿಂದಲೇ ದೂರವಾಗುವ ಭೀತಿ!

ಬೆಳ್ತಂಗಡಿ: “ಹಳ್ಳಿಗಳಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಗಂಭೀರ ಪ್ರಮಾಣದ ನೆಟ್ ವರ್ಕ್ ಸಮಸ್ಯೆ ಎದುರಿಸುತ್ತಿದ್ದಾರೆ. ಶಿಕ್ಷಕರು ಶಾಲೆಯಿಂದ ಕಳುಹಿಸಿದ ಪಿ.ಡಿ.ಎಫ್. ಡೌನ್ ಲೋಡ್ ಆಗುವುದಿಲ್ಲ. ನೆಟ್ ಸಮಸ್ಯೆಯಿಂದ ಶಾಲೆಯಿಂದ ಕಳುಹಿಸಿದ ಮೆಸೇಜ್ ಗಳು ಓಪನ್ ಆಗದಿರುವುದು ಮಕ್ಕಳಿಗೆ ಮಾನಸಿಕ ಹಿಂಸೆಯಾಗುತ್ತಿದೆ. ತಮಗೆ ಬೇಕಾದ ಪಠ್ಯಗಳು ಬೇಕಾದಂತೆ ಸಿಗುತ್ತಿಲ್ಲ ಎಂದಾಗ ಮಾನಸಿಕ ಒತ್ತಡದಿಂದ ಮುಂದೆ ವಿದ್ಯಾಭ್ಯಾಸವೇ ಬೇಡ ಎನ್ನುವ ಸ್ಥಿತಿಗೆ ತಲುಪುವ ಸಾಧ್ಯತೆಯೂ ಇದೆ. ಮಕ್ಕಳ ಅನ್ ಲೈನ್ ಕ್ಲಾಸ್ ಗಳಿಗಾಗಿ‌ ಸ್ಥಳೀಯ ಕೆಲ ಪೋಷಕರು ಸಾಲ ಮಾಡಿ ಮೊಬೈಲ್ ಖರೀದಿಸಿ ಕೊಟ್ಟಿದ್ದಾರೆ. ಅದರೆ ಅದು ಉಪಯೋಗಕ್ಕೆ ಇಲ್ಲ ಎಂಬಂತಾಗಿದೆ. ಹಳ್ಳಿಯ ವಿದ್ಯಾರ್ಥಿಗಳ ಬಗ್ಗೆಯೂ ಸರಕಾರ ಗಂಭೀರ ಚಿಂತನೆ ನಡೆಸಬೇಕಾದ ಅನಿವಾರ್ಯತೆ ‌ಇದೆ” ಇದು ಕಳೆಂಜ ಗ್ರಾಮಸ್ಥರೊಬ್ಬರು ಗ್ರಾಮದಲ್ಲಿ ‌ಎಸ್.ಎಸ್.ಎಲ್.ಸಿ.‌ ವಿದ್ಯಾರ್ಥಿಗಳು ಹಾಗೂ ಪೋಷಕರ ಸಮಸ್ಯೆ ಬಗ್ಗೆ ‌ನೋವಿನಿಂದ ಆಡಿರುವ ಮಾತುಗಳು.

ವಿದ್ಯಾರ್ಥಿಗಳ ಸಮಸ್ಯೆ ‌ಬಗ್ಗೆ ಪೋಷಕರೊಬ್ಬರು ‘ಪ್ರಜಾಪ್ರಕಾಶ ನ್ಯೂಸ್’ಗೆ ಪ್ರತಿಕ್ರಿಯೆ ನೀಡಿದ್ದು
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗಂಭೀರ ಸಮಸ್ಯೆ ಆಗುತ್ತಿದೆ. ಯಾವುದನ್ನು ಓದಬೇಕೆನ್ನುವುದೇ ಅವರಿಗೆ ಗೊಂದಲವಾಗಿದೆ. ಎರಡು ವರುಷಗಳಿಂದ ನೇರ ತರಗತಿಗಳು ಇರದೇ ಇದ್ದುದರಿಂದ ಹೆಚ್ಚಿನ ಅಭ್ಯಾಸದ ಅಗತ್ಯತೆ ಇತ್ತು. ಹತ್ತನೆ ತರಗತಿಗೆ ಕೆಲವೇ ದಿನಗಳಲ್ಲಿ ಪರೀಕ್ಷೆ ಪ್ರಾರಂಭವಾಗಲಿದ್ದು ನೆಟ್ ವರ್ಕ್ ಸಮಸ್ಯೆಯಿಂದ ಚಿಂತಾಕ್ರಾಂತರಾಗಿದ್ದಾರೆ. ಸರ್ಕಾರ ಮಾಡಿದ ನಿಯಮಗಳನ್ನು ಕೊರೊನಾ ಸುರಕ್ಷತೆ ದೃಷ್ಟಿಯಿಂದ ತೆಗೆದುಕೊಳ್ಳಲೇಬೇಕು. ಈ ಮೂಲಕವಾಗಿ ಅನ್ ಲೈನ್ ಕ್ಲಾಸ್ ಗಳಿದ್ದರೂ ನಮ್ಮ ಮಕ್ಕಳಿಗೆ ತುಂಬಾ ಸಮಸ್ಯೆಯಾಗುತ್ತಿದೆ ಮಕ್ಕಳು ಅನ್ ಲೈನ್ ಕ್ಲಾಸ್ ಗಳಿಗೆ ಮಾನಸಿಕವಾಗಿ ತಯಾರಾಗಿದ್ದಾರೆ. ಅದರೆ ಪೂರಕವಾದ ವ್ಯವಸ್ಥೆಗಳು ಸಿಗುತ್ತಿಲ್ಲ…” ಎಂಬ ವಿಚಾರವನ್ನು ತೆರೆದಿಟ್ಟಿದ್ದಾರೆ.‌

ನೆಟ್ ವರ್ಕ್ ಸಮಸ್ಯೆಯಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅನ್ ಲೈನ್ ಕ್ಲಾಸ್ ಗಾಗಿ ಒದ್ದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಅನ್ ಲೈನ್ ಮೂಲಕ ಪಾಠವನ್ನು ಮಾಡವಂತೆ ಶಿಕ್ಷಕರಿಗೆ ಸೂಚಿಸಿದರೂ ಹಳ್ಳಿ ಪ್ರದೇಶದ ಶಾಲೆಗಳ ಶಿಕ್ಷಕರ ಹಾಗೂ ಮಕ್ಕಳ ಒದ್ದಾಟವನ್ನು ಕೇಳುವವರಿಲ್ಲದಂತಾಗಿದೆ. ಅದರಲ್ಲೂ ಇನ್ನು ಕೆಲವೇ ದಿನಗಳಲ್ಲಿ ಮಕ್ಕಳಿಗೆ ಹತ್ತನೇ ತರಗತಿಯ ಪರೀಕ್ಷೆಗಳು ನಡೆಯಲಿರುವುದು ಗ್ರಾಮೀಣ ಭಾಗದ ಮಕ್ಕಳು ಹಾಗೂ ಪೋಷಕರನ್ನು ಇನ್ನಷ್ಟು ಆತಂಕಕ್ಕೆ ದೂಡಿದೆ. ಎಸ್. ಎಸ್. ಎಲ್. ಸಿ. ಪರೀಕ್ಷೆ ಎನ್ನುವುದು ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮಹತ್ತರ ಘಟ್ಟವಾಗಿದೆ. ಅದರೆ ಈ ಬಾರಿ ಅನ್ ಲೈನ್ ಕ್ಲಾಸ್ ನಿಂದಾಗಿ ವಿವಿಧ ವಿಷಯಗಳ ಕುರಿತು ಸ್ಪಷ್ಟ ಚಿತ್ರಣ ಸಿಗಲಿಲ್ಲ, ಶಿಕ್ಷಕರ ನೇರ ಮಾರ್ಗದರ್ಶನವೂ ಲಭಿಸಲಿಲ್ಲ, ಇದರ ಬೆನ್ನಲ್ಲೇ ಪರೀಕ್ಷೆ ಹತ್ತಿರ ಬಂದಿದೆ, ಇದನ್ನು ಹೇಗೆ ಎದುರಿಸಬೇಕು ಎಂಬ ಚಿಂತೆಯೂ ಉಂಟಾಗಿದೆ. ಮೊಬೈಲ್ ಅಗತ್ಯತೆ‌ ಮನಗಂಡು ಪೋಷಕರು ಸಾಲ ಮಾಡಿಯಾದರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಆಂಡ್ರ್ಯಾಯ್ಡ್ ಮೊಬೈಲ್ ಖರೀದಿಸಿದರು. ಆದರೆ ಮುಖ್ಯವಾಗಿ ನೆಟ್ ವರ್ಕ್ ಸಮಸ್ಯೆಯಿಂದಾಗಿ ಶಿಕ್ಷಕರು ಕಳುಹಿಸಿದ ಫೈಲ್‌ಗಳನ್ನು ಡೌನ್ ಲೋಡ್ ಮಾಡಲು ಸಾಧ್ಯವಾಗದೆ, ವಿಡಿಯೋ ಕಾಲ್ ನಲ್ಲಿ ಸಮರ್ಪಕ ಸಮಾಲೋಚನೆಯೂ ಮಾಡಲೂ ಸಾಧ್ಯವಾಗದೆ ಪರದಾಡುವಂತಾಗಿದೆ. ಒಂದರ್ಥದಲ್ಲಿ ವಿದ್ಯಾರ್ಥಿಗಳು ಮಾನಸಿಕ ಹಿಂಸೆ ಅನುಭವಿಸುವಂತಾಗಿದೆ.

ಬೆಳ್ತಂಗಡಿ ತಾಲೂಕು ಕೇಂದ್ರದಿಂದ ಸುಮಾರು 30 ಕಿ.ಮೀ. ದೂರದಲ್ಲಿ ಇರುವ ಕಳೆಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಪ್ರೌಢ ಶಾಲೆ ಶಾಲೆತ್ತಡ್ಕ ಎಂಬ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ನೆಟ್ ವರ್ಕ್ ಎಂಬುದು‌ ತಾಲೂಕು ಕೇಂದ್ರ ಬೆಳ್ತಂಗಡಿಯಷ್ಟೇ ದೂರವಾಗಿದೆ. ದಟ್ಟಡವಿಯ ನಡುವೆ, ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ಗಂಟೆಗಟ್ಟಲೆ ಅಲೆದಾಡಿ ನೆಟ್ ವರ್ಕ್ ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ಸುಮಾರು 23 ವಿದ್ಯಾರ್ಥಿಗಳು ನೆಟ್ ವರ್ಕ್ ಗಾಗಿ ಗುಡ್ಡ ಗಾಡು ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.‌

ನೆಟ್ ವರ್ಕ್ ಸಮಸ್ಯೆ ಬಗ್ಗೆ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಯೊಬ್ಬರು ‘ಪ್ರಜಾಪ್ರಕಾಶ ನ್ಯೂಸ್’ ತಂಡದ ಜೊತೆ ಮಾತನಾಡಿದ್ದು, “ನಮ್ಮ ಶಾಲೆಯಲ್ಲಿ 23 ವಿದ್ಯಾರ್ಥಿಗಳು ಹತ್ತನೇ ತರಗತಿ ವ್ಯಾಸಂಗ ಮಾಡುತಿದ್ದೇವೆ. ನೆಟ್ ವರ್ಕ್ ಸಮಸ್ಯೆಯಿಂದಾಗಿ ಅಧ್ಯಾಪಕರು ಕಳುಹಿಸುವ ಲಿಂಕ್ ಗಳು ಸಮರ್ಪಕವಾಗಿ ಓಪನ್ ಆಗುತ್ತಿಲ್ಲ. ನೆಟ್ ವರ್ಕ್ ಪಡೆಯಲು ಗುಡ್ಡ ಗಾಡು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಮಳೆ ಬಂದರೆ ಏನೂ ಮಾಡಲಾಗುವುದಿಲ್ಲ, ಶಾಲೆಯಿಂದ ಶಿಕ್ಷಕರು ವಾಯ್ಸ್ ರೆಕಾರ್ಡ್ ಮಾಡಿ ಕಳುಹಿಸಿದರೂ ಅದಕ್ಕೂ ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ನಮ್ಮ ಕಷ್ಟಕ್ಕೆ ಯಾರೂ ಸ್ಪಂದಿಸುತ್ತಿಲ್ಲ ಇನ್ನು ಕೆಲವೇ ದಿನಗಳಲ್ಲಿ ಪರೀಕ್ಷೆ ನಡೆಯಲಿದ್ದು ಸರಿಯಾದ ರೀತಿಯಲ್ಲಿ ಪೂರ್ವ ತಯಾರಿ ಆಗದೇ ಇರುವುದರಿಂದ, ಪರೀಕ್ಷೆ ಹೇಗೆ ಬರೆಯುವುದು ಎಂಬ ಚಿಂತೆ ಕಾಡಲಾರಂಭಿಸಿದೆ. ಅದ್ದರಿಂದ ಶಾಲೆಯನ್ನಾದರೂ ತೆರೆಯುವಂತೆ ಮಾಡಿಸಿ ಅಲ್ಲಿಯಾದರೂ ನಮಗೆ ಕಲಿಯಲು ಅವಕಾಶ ಮಾಡಿಕೊಡಿ” ಎಂದು ತಿಳಿಸಿದ್ದಾರೆ.

ನೆಟ್ವರ್ಕ್ ಸಮಸ್ಯೆ ‌ಕುರಿತು ಸರ್ಕಾರ ಮಕ್ಕಳ ಭವಿಷ್ಯದ ಹಿತ ದೃಷ್ಟಿಯಿಂದ ಗ್ರಾಮೀಣ ಪ್ರದೇಶಗಳಲ್ಲಿ ನೆಟ್ ವರ್ಕ್ ಸಮಸ್ಯೆ ಶೀಘ್ರವಾಗಿ ಸರಿಪಡಿಸಬೇಕು ಎಂಬುವುದು ‘ಪ್ರಜಾಪ್ರಕಾಶ ನ್ಯೂಸ್’ ತಂಡ ಹಾಗೂ ಸಾರ್ವಜನಿಕರ ಕಳಕಳಿಯ ಮನವಿಯಾಗಿದೆ.

error: Content is protected !!