
ಬೆಳ್ತಂಗಡಿ:ಗ್ರಾಮ ಮಟ್ಟಕ್ಕೆ ತಾಲೂಕು ಆಡಳಿತದ ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಶಾಸಕರ ಈ ಜನಸ್ಪಂದನ ಕಾರ್ಯಕ್ರಮ ಶ್ಲಾಘನೀಯ, ಎಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ ಘಟನೆ ಇಳಂತಿಲದಲ್ಲಿ ನಡೆದಿದೆ.ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಎಲ್ಲಾ ಸರ್ಕಾರಿ ಇಲಾಖಾಧಿಕಾರಿಗಳೊಂದಿಗೆ ಪಂಚಾಯತ್ ಮಟ್ಟದ ಜನಸ್ಪಂದನ ಕಾರ್ಯಕ್ರಮ ಇಳಂತಿಲ ಗ್ರಾಮ ಪಂಚಾಯತ್ ವಠಾರದಲ್ಲಿ ಶನಿವಾರ ನಡೆಯಿತು.

9/11, ಮೂಡಾ, ಸಮಸ್ಯೆ ಹಾಗೂ ವಿಳಂಬದಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದ್ದು, ಕ್ರಮ ಕೈಗೊಳ್ಳುವಂತೆ ಶಾಸಕರಲ್ಲಿ ಗ್ರಾಮಸ್ಥರು ಮನವಿ ಮಾಡಿದರು.. ತಾಲೂಕು ಕಛೇರಿಯಲ್ಲಿ ಅಲೆದಾಡಿ ಕಾದು ಕುಳಿತರೂ ಯಾವುದೇ ಪ್ರಯೋಜನ ಆಗುತ್ತಿಲ್ಲ, ಇದರಿಂದ ಜನಸಾಮಾನ್ಯರು ತೊಂದರೆಗೀಡಾಗಿದ್ದಾರೆ. ದಯವಿಟ್ಟು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಸರ್ಕಾರದ ಕೆಲವೊಂದು ಕಾನೂನುಗಳಿಂದ ತೊಂದರೆಯಾಗುತ್ತಿದೆ. ಈಗಾಗಲೇ ಕರಾವಳಿಯ ಶಾಸಕರು ಒಟ್ಟಾಗಿ ಸರ್ಕಾರದ ಗಮನಕ್ಕೆ ತಂದರೂ ಸರ್ಕಾರ ಯಾವುದೇ ಸ್ಪಂದನೆ ನೀಡಿಲ್ಲ. ಮತ್ತೆ ಕಲಾಪದಲ್ಲಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುವುದಾಗಿ ತಿಳಿಸಿದರು.ಇಳಂತಿಲ ಅಂಡೆತ್ತಡ್ಕ, ,ಬುಳೇರಿ ಭಾಗಕ್ಕೆ ಬಸ್ ಇಲ್ಲದೇ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಬಸ್ ವ್ಯವಸ್ಥೆ ಮಾಡುವಂತೆ ಸಭೆಯಲ್ಲಿ ಗ್ರಾಮಸ್ಥರು ಮನವಿ ಮಾಡಿದರು. ಈ ಬಗ್ಗೆ ಕೆಎಸ್ ಆರ್ ಟಿಸಿ ಧರ್ಮಸ್ಥಳ ಡಿಪೊ ವಿಭಾಗೀಯ ಅಧಿಕಾರಿಯವರಲ್ಲಿ ಬಂದಾರು, ಕಲ್ಲಮಾಡ,ಬುಳೇರಿ, ಮುರ, ಅಂಡೆತ್ತಡ್ಕ ಮಾರ್ಗವಾಗಿ ಉಪ್ಪಿನಂಗಡಿಗೆ ಬಸ್ ಸಂಚಾರ ಮಾಡುವ ಕುರಿತು ಸರ್ವೆ ನಡೆಸಿ ಮಾಹಿತಿ ನೀಡುವಂತೆ ಶಾಸಕರು ಸೂಚನೆ ನೀಡಿದರು.

ಮಾಪಲ ಪ್ರದೇಶದಲ್ಲಿ ನೆಟ್ ವರ್ಕ್ ಸಮಸ್ಯೆಯನ್ನು ಬಗೆಹರಿಸುವಂತೆ ಸಾರ್ವಜನಿಕರು ಶಾಸಕರ ಗಮನಕ್ಕೆ ತಂದರು. ಈ ಬಗ್ಗೆ ಬಿಎಸ್ ಎನ್ ಎಲ್ ಅಧಿಕಾರಿಗಳಲ್ಲಿ ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಗ್ರಾಮದಲ್ಲಿ ವಸತಿ ನೀಡದೆ ಇರುವುದರಿಂದ ಎಲ್ಲೆಲ್ಲಿ ಬಾಡಿಗೆ ಮನೆ ಮಾಡಿ ಕುಳಿತುಕೊಂಡಿದ್ದಾರೆ. ದಯವಿಟ್ಟು ಅಧಿಕಾರಿಗಳಿಗೆ ವಸತಿ ನೀಡುವ ಬಗ್ಗೆ ಸೂಚನೆ ನೀಡಿ ಸಮಸ್ಯೆ ಬಗೆಹರಿಸಬೇಕು.
ಸಭೆಯಲ್ಲಿ ಅಕ್ರಮ ಸಕ್ರಮ,ಹಳೆ ವಿದ್ಯುತ್ ತಂತಿ ಬದಲಾವಣೆ, ಟಿ.ಸಿ. ಬದಲಾವಣೆ ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಸಭೆಯ ಮುಂದಿಟ್ಟಾಗ , ಸೂಕ್ರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.ಸಭೆಯಲ್ಲಿ ಜನಪ್ರತಿನಿಧಿಗಳು, ವಿವಿಧ ಇಲಾಖಾಧಿಕಾರಿಗಳು, ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ಉಪಸ್ಥಿತರಿದ್ದರು.