ಇಂದಬೆಟ್ಟು ಗ್ರಾಮ ಪಂಚಾಯತ್ ಜನಸ್ಪಂದನ ಸಭೆ : ರಾತ್ರಿ ಹಗಲು ನಡೆಯುತ್ತೆ ಅಕ್ರಮ ಮರಳುಗಾರಿಕೆ,ಪೊಲೀಸರ ಮೌನಕ್ಕೆ ಗ್ರಾಮಸ್ಥರ ಅಸಾಮಾಧಾನ: ಸಬ್ ಸ್ಟೆಶನ್ ಜಾಗ ಒತ್ತುವರಿ, ಗ್ರಾಮಸ್ಥರ ಆಕ್ರೋಶ:ತೆರವಿಗೆ ಶಾಸಕರ ಸೂಚನೆ:

 

 

ಬೆಳ್ತಂಗಡಿ: ಇಂದಬೆಟ್ಟು ಗ್ರಾಮದ ನೇತ್ರಾವತಿ ನಗರದಲ್ಲಿ ವಿದ್ಯುತ್ ಸಬ್ ಸ್ಟೆಶನ್ ಜಾಗವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದಾರೆ,ರಾತ್ರಿ ಹಗಲು ಅಕ್ರಮ ಮರಳುಗಾರಿಕೆ ನಡೆಯುತಿದೆ.

ಈ ಬಗ್ಗೆ ಮಾಹಿತಿ ಇದ್ದರೂ ಅಧಿಕಾರಿಗಳು ಮೌನ ವಹಿಸಿದ್ದಾರೆ ಎಂದು ಸಾರ್ವಜನಿಕರು ಅಸಾಮಾಧಾನ ಹೊರಹಾಕಿದ ಘಟನೆ ಇಂದಬೆಟ್ಟು ಜನಸ್ಪಂದನ ಸಭೆಯಲ್ಲಿ ನಡೆದಿದೆ.

 

 

ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಇಂದಬೆಟ್ಟು ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನ ಸಭೆ ಡಿ.8 ರಂದು ಇಂದಬೆಟ್ಟು ಸಂತ ಸೇವಿಯರ್ ಚರ್ಚ್ ಸಭಾಭವನದಲ್ಲಿ ನಡೆಯಿತು.

ಶಾಸಕ ಹರೀಶ್ ಪೂಂಜ ಮಾತನಾಡಿ ಗ್ರಾಮ ಮಟ್ಟಕ್ಕೆ ತಾಲೂಕು ಮಟ್ಟದ ಅಧಿಕಾರಿಗಳು ಜೊತೆ ಆಗಮಿಸಿ ಜನಸಾಮಾನ್ಯರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಪರಿಹಾರ ಒದಗಿಸುವ ಪ್ರಯತ್ನ ಮಾಡಲಾಗುವುದು. ಜನರೆಡೆಗೆ ತಾಲೂಕು ಆಡಳಿತ ಎಂಬ ಕಲ್ಪನೆಗೆ ಒಳ್ಳೆಯ ರೀತಿಯಲ್ಲಿ ಸ್ಪಂದನೆ ಇಲ್ಲಿವರೆಗೂ ದೊರೆತಿದೆ ಎಂದರು.

 

 

 

ನೇತ್ರಾವತಿ ನಗರದ ಬಳಿ 7 ಗ್ರಾಮಕ್ಕೆ ಸಂಬಂಧಿಸುವ ವಿದ್ಯುತ್ ಸಬ್ ಸ್ಟೇಷನ್ ಗೆ ಮೀಸರಿಸಿದ 234 ಸರ್ವೇ ನಂಬರ್ ನಲ್ಲಿ ರುವ ಜಾಗದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಜಾಗವನ್ನು ಒತ್ತುವರಿ ಮಾಡಿ ಸಮತಟ್ಟುಗೊಳಿಸಿ ಬಾಳೆ ಮತ್ತು ತೆಂಗಿನ ಗಿಡ ನೆಟ್ಟಿದ್ದಾರೆ. ಈ ಹಿಂದೆ ಪಂಚಾಯತ್ ಜಾಗವೆಂದು ಬೋರ್ಡ್ ಹಾಕಿ ಗಡಿ ಗುರುತು ನಿರ್ಮಿಸಿತ್ತು ಆದರೆ ಅದನ್ನು ತೆರವುಗೊಳಿಸಿದ್ದಾರೆ ಎಂದು ಗ್ರಾಮಸ್ಥರು ಹೇಳಿದರು. ಸಾರ್ವಜನಿಕ ಹಿತಾಸಕ್ತಿ ನೆಲೆಯಲ್ಲಿ ಅವರ ಮೇಲೆ ಎಫ್ಐಆರ್ ದಾಖಲಿಸಬೇಕು. ಈ ಬಗ್ಗೆ ಕಂದಾಯ ಮತ್ತು ಮೆಸ್ಕಾಂ ಇಲಾಖೆ ಶೀಘ್ರವೇ ಜಾಗದ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಇಂದಬೆಟ್ಟು ,ನಾವೂರು ಗ್ರಾಮದ ಗಡಿಭಾಗದ ಕುಟುಂಬಗಳಿಗೆ ಹಕ್ಕು ಪತ್ರ ಇಲ್ಲ:
ಇಂದಬೆಟ್ಟು ಮತ್ತು ನಾವೂರು ಗ್ರಾಮದ ಗಡಿಭಾಗದ ಬೆದ್ರಪಲ್ಕೆ, ಎರ್ಮಾಳ ಎಂಬಲ್ಲಿ 50 ವರ್ಷಗಳಿಂದ ವಾಸವಿರುವ ಕುಟುಂಬಗಳಿಗೆ ಹಕ್ಕು ಪತ್ರ ಇನ್ನೂ ಸಿಕ್ಕಿಲ್ಲ, ಆ ಕುಟುಂಬಗಳ ಜಾಗ ಒಂದು ಗ್ರಾಮದಲ್ಲಿ ವ್ಯವಹಾರ ಒಂದು ಗ್ರಾಮದಲ್ಲಿ ಇದ್ದು ಆ ಕುಟುಂಬಗಳನ್ನು ಇಂದಬೆಟ್ಟು ಗ್ರಾಮಕ್ಕೆ ಸೇರಿಸಬೇಕು ಎಂದು ಗ್ರಾಮಸ್ಥರು ಹೇಳಿದರು. ಆರ್ ಎಫ್ ಓ, ಆರ್ ಐ ಹಾಗೂ ವಿಎಗೆ ಸ್ಥಳ ತನಿಖೆಗೆ ಶಾಸಕರು ಸೂಚಿಸಿದರು.

ಪರಿಹಾರ ಎಂಬಲ್ಲಿ ಏಕಲವ್ಯ ಶಾಲೆ ನಿರ್ಮಾಣಕ್ಕೆ 9.5,ಎಕ್ರೆ ಸ್ಥಳ ಗುರುತಿಸಲಾಗಿದೆ ಆದರೆ ಅಲ್ಲಿ ವನ್ಯಜೀವಿ ಅರಣ್ಯ ಇಲಾಖೆ ತೊಡಕು ಉಂಟಾಗುತ್ತಿದೆ. ಅರಣ್ಯ ಇಲಾಖೆ ತಮ್ಮ ಜಾಗದ ಗಡಿ ಗುರುತು ಮಾಡಿ ಇಲ್ಲಿ ಶಾಲೆ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಹೇಳಿದರು. ಕಂದಾಯ ಮತ್ತು ಅರಣ್ಯ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಸ್ಯೆ ಬಗೆ ಹರಿಸಬೇಕು ಎಂದು ಶಾಸಕರು ತಿಳಿಸಿದರು.

ಅಕ್ರಮ ಸಕ್ರಮ ಆಗುತ್ತಿಲ್ಲ:
ಪ್ರಸ್ತುತ ಸರ್ಕಾರದ ಕಾನೂನಿನ ತೊಡಕಿನಿಂದಾಗಿ ಅಕ್ರಮ ಸಕ್ರಮ ಅರ್ಜಿಗಳು ವಿಲೇವಾರಿಗೆ ತೊಂದರೆಯಾಗುತ್ತಿದೆ. ತಾಲೂಕಿನಲ್ಲಿ 37 ಸಾವಿರ ಅರ್ಜಿಗಳು ಇದ್ದು ಅದರಲ್ಲಿ ಶೇ.95 ರಷ್ಟು ಕುಂಕಿ ಭೂಮಿಗೆ‌ ನೀಡಿದ್ದಾಗಿದೆ ಆದರೆ ಸರ್ಕಾರದ ಕಾನೂನಿನಲ್ಲಿ ಸರ್ಕಾರಿ ಭೂಮಿಗೆ ಮಂಜೂರು ಗೊಳಿಸಲು ಸಾಧ್ಯವಿದೆ ಎಂದು ಶಾಸಕರು ತಿಳಿಸಿದರು.

ಪರಿಶಿಷ್ಟ ಜಾತಿಯ ಸಶ್ಮಾನ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಲಾಗಿದೆ ಆದರೆ ಗಡಿ ಗುರುತು ಆಗಿಲ್ಲಾ ಎಂದು ಗ್ರಾಮಸ್ಥರು ಹೇಳಿದರು. ಒಂದು ವಾರದೊಳಗೆ ಗಡಿ ಗುರುತು ಮಾಡಿಕೊಡಬೇಕು ಎಂದು ಸರ್ವೇ ಇಲಾಖೆಯ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಮರಳುಗಾರಿಕೆ ತಡೆಗೆ ಆಗ್ರಹ:

ಬೆಳ್ಳೂರು ಎಂಬಲ್ಲಿ ರಾಜಾರೋಷವಾಗಿ ಮರಳುಗಾರಿಕೆ ನಡೆಯುತ್ತಿದೆ ಸಂಜೆ 6 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಲಾರಿಗಳ ಓಡಾಟ ನಡೆಯುತ್ತಿದೆ. ಗುರಿಪಳ್ಳ – ಇಂದಬೆಟ್ಟು ರಸ್ತೆ ಬದಿಯಲ್ಲಿ ಗಿಡ ಗಂಟಿಗಳು ಬೆಳೆದು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು ಪಿಡಬ್ಲ್ಯೂಡಿ ಇಲಾಖೆಗೆ ಮನವಿ ಸಲ್ಲಿಸಿದರು ಸ್ಪಂದನೆ ಇಲ್ಲಿವರೆಗೂ ದೊರೆತಿಲ್ಲ, ಕಡಿರುದ್ಯಾವರ ನೇತ್ರಾವತಿ ನದಿಯಲ್ಲಿ ಹಿಟಾಚಿ ಬಳಸಿ ಮರಳುಗಾರಿಕೆ ನಡೆಯುತ್ತಿದೆ ಎಂದು ಸಾರ್ವಜನಿಕರು ಹೇಳಿದರು. ಪಿಡಬ್ಲ್ಯೂಡಿ ಇಲಾಖೆಗೆ ಎರಡು ವರ್ಷದಲ್ಲಿ ಅನುದಾನ ಬಂದಿಲ್ಲ ಈ ಬಾರಿ ಅನುದಾನ ಬಿಡುಗಡೆಯಾಗಿದೆ ಗಿಡ ಗಂಟಿಗಳನ್ನು ತೆರವುಗೊಳಿಸಲು ಶಾಸಕರು ಪಿಡಬ್ಲ್ಯೂಡಿ ಎಇಗೆ ಸೂಚಿಸಿದರು. ಮರಳುಗಾರಿಕೆ ವಿಚಾರವಾಗಿ ಪೊಲೀಸ್ ಇಲಾಖೆಗೆ ನೋಟಿಸ್ ನೀಡುವಂತೆ ಶಾಸಕರು ಇಓಗೆ ತಿಳಿಸಿದರು.

ಲಾಯಿಲ- ಮಲವಂತಿಗೆ ವರೆಗೆ ಹಳೆಯ ಕಬ್ಬಿಣದ ವಿದ್ಯುತ್ ಕಂಬಗಳಿವೆ ಅವುಗಳು ತುಕ್ಕು ಹಿಡಿದಿದೆ ಅವುಗಳನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಹೇಳಿದರು. ಈ ಬಗ್ಗೆ ತೆರುವುಗೊಳಿಸುವಂತೆ ಮೆಸ್ಕಾಂ ಜೆಇಗೆ ಸೂಚಿಸಿದರು.

ಸರ್ವೇ ನಂಬರ್ 260ರಲ್ಲಿ 3 ಎಕ್ರೆ ಸರಕಾರಿ ಭೂಮಿಯನ್ನು ಪಹಣಿಯಲ್ಲಿ ಪಂಚಾಯತ್ ಗೆ ದಾಖಲಿಸಬೇಕು.ಸಾರ್ವಜನಿಕ ಕ್ರೀಡಾಂಗಣದ ಜಾಗದ ಗಡಿ ಗುರುತು ಮಾಡಿಕೊಡಬೇಕು.
ಬೆದ್ರಬೆಟ್ಟು – ದೇವಮಾರು ಸಂಪರ್ಕ ಕಲ್ಪಿಸಲು ಕಾಂಕ್ರೀಟ್ ರಸ್ತೆಯಾಗಿ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಹೇಳಿದರು.

ಇಂದಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾಲತಾ,  ತಾ.ಪಂ.ಇಓ ಭವಾನಿಶಂಕರ್ ಎನ್.  ಆರ್ ಎಫ್ ಒ ತ್ಯಾಗರಾಜ್ , ಸಹಿತ ತಾಲೂಕು ಮಟ್ಟದ ಅಧಿಕಾರಿಗಳು , ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಶ್ಮಿಉಪಸ್ಥಿತರಿದ್ದರು.

error: Content is protected !!