ಬೆಳ್ತಂಗಡಿ: ಎನ್.ಎಸ್. ಗೋಖಲೆಯವರು ಸಮಾಜಕ್ಕೆ ಸಲ್ಲಿಸಿದ ವಿಶಿಷ್ಟವಾದ ಸೇವೆಗೆ ಗೌರವ ಸೂಚಿಸಲು ತಾಲೂಕು ಮಟ್ಟದಲ್ಲಿ ತಾಲೂಕು ಮಟ್ಟದಲ್ಲಿ ವಿಶೇಷ ಕಾರ್ಯಕ್ರಮ ಸಿದ್ಧಪಡಿಸಲು ಒಂದು ವಾರದೊಳಗೆ ಯೋಜನೆ ರೂಪಿಸಲಾಗುವುದು ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.
ಅವರು ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹಿರಿಯ ಸಹಕಾರಿ ಧುರೀಣ ಎನ್.ಎಸ್. ಗೋಖಲೆಯವರಿಗೆ ಶ್ರದ್ಧಾಂಜಲಿ ಮತ್ತು ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗೋಖಲೆಯವರ ತತ್ವ- ಆದರ್ಶಗಳು ಮುಂದಿನ ಪೀಳಿಗೆಯ ಬೆಳವಣಿಗೆಗೆ ಮಾದರಿಯಾಗಿದೆ. ಅವರು ಸಹಕಾರಿ ಕ್ಷೇತ್ರದ ಅತ್ಯುತ್ತಮ ಚಿಂತಕ ಹಾಗೂ ಮಾರ್ಗದರ್ಶಕರಾಗಿದ್ದರು. ಅನೇಕ ಸಂಘ- ಸಂಸ್ಥೆಗಳ ಏಳಿಗೆಯಲ್ಲಿ ತಮ್ಮ ಛಾಪು ಮೂಡಿಸಿದ್ದರು ಎಂದರು.
ಎನ್.ಎಸ್. ಗೋಖಲೆ ಅವರ ಸ್ಮರಣಾರ್ಥ ತಾಲೂಕಿನಲ್ಲಿ ಸಹಕಾರ ತರಬೇತಿ ಸಂಸ್ಥೆ ಆರಂಭಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಜರಗಿದ ಕಾರ್ಯಕ್ರಮಕ್ಕೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನ, ಶ್ರೀ ವ್ಯಾಘ್ರಚಾಮುಂಡಿ ಮೂರ್ತಿಲ್ಲಾಯಿ ದೈವಸ್ಥಾನ, ಯುವಕ ಮಂಡಲ,ಮುಂಡಾಜೆ ಹಾಲು ಉತ್ಪಾದಕರ ಸಂಘ, ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ, ಸಾರ್ವಜನಿಕ ಗಣೇಶೋತ್ಸವ ಸಮಿತಿ, ಶ್ರೀ ಕ್ಷೇತ್ರ ಯಕ್ಷಗಾನ ಬಯಲಾಟ ಸೇವಾ ಸಮಿತಿ, ಗ್ರಾಮ ಪಂಚಾಯಿತಿ ಮುಂಡಾಜೆ, ಮುಂಡಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶಾರದಾ ನಗರ, ಶ್ರೀ ದತ್ತಾತ್ರೇಯ ಭಜನಾ ಸಂಘ, ಚಿತ್ಪಾವನ ಸಂಘಟನಾ, ರೋಟರಿ ಸಮುದಾಯ ದಳ ಮುಂಡಾಜೆ ಮೊದಲಾದ ಸಂಘ-ಸಂಸ್ಥೆಗಳು ಸಹಭಾಗಿತ್ವ ವಹಿಸಿದ್ದವು.
ದೇವಸ್ಥಾನದ ನಿರ್ಗಮಿತ ಆಡಳಿತ ಮೊಕ್ತೇಸರ ಅಡೂರು ವೆಂಕಟ್ರಾಯ, ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ.ಭಿಡೆ, ಶ್ರೀಕ್ಷೇತ್ರ ಧರ್ಮಸ್ಥಳದ ಬೀಡಿನ ಮ್ಯಾನೇಜರ್ ಮಹಾವೀರ, ಗಂಡಿಬಾಗಿಲು ಚರ್ಚ್ ಧರ್ಮಗುರು ಫಾ.ಷಾಜಿ ಮ್ಯಾಥ್ಯೂ, ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಆಡಳಿತ ಮೊಕ್ತೇಸರ ಕಜೆ ವೆಂಕಟೇಶ್ವರ ಭಟ್, ತಾ.ಪಂ.ಮಾಜಿ ಸದಸ್ಯ ವಿ.ಟಿ ಸೆಬಾಸ್ಟಿಯನ್, ಬಂಗಾಡಿ ಸಿಎ ಬ್ಯಾಂಕ್ ನ ಮಾಜಿ ಅಧ್ಯಕ್ಷ ಎನ್. ಲಕ್ಷ್ಮಣಗೌಡ, ಮುಂಡಾಜೆ ಸಿಎ ಬ್ಯಾಂಕಿನ ಅಧ್ಯಕ್ಷ ಜನಾರ್ದನ ಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಂಜಿನಿ ರವಿ, ಮುಂಡಾಜೆ ಹಾಲು ಉತ್ಪಾದಕರ ಸಹಕಾರ ಸಂಘದ ಮಚ್ಚಿಮಲೆ ಅನಂತ ಭಟ್, ಯಂಗ್ ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ಸಂಚಾಲಕ ನಾಮದೇವ ರಾವ್, ರೈತ ಸೇವಾ ಕೂಟದ ಡಿ.ಎ. ರೆಹಮಾನ್, ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಬಾಬು ಪೂಜಾರಿ, ಚಿತ್ಪಾವನ ಸಂಘಟನೆಯ ಸುಷ್ಮಾ ಶಶಾಂಕ ಭಿಡೆ, ಚಾರ್ಮಾಡಿ ಅನಂತ ರಾವ್, ಪತ್ರಕರ್ತ ಅಶ್ರಫ್ ಆಲಿ ಕುಂಞಿ, ಬೆಂದ್ರಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮೊಕ್ತೇಸರರಾದ ಗೋಪಾಲಕೃಷ್ಣ ಇರ್ವತ್ರಾಯ, ಯುವಕ ಮಂಡಲ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಕುಟುಂಬ ಸದಸ್ಯರಾದ ವಾಸುದೇವ ಗೋಖಲೆ, ಪುತ್ರಿ ಮಾಯಾ ಗೋಖಲೆ ಹಾಗೂ ಇತರರು ನುಡಿನಮನ ಸಲ್ಲಿಸಿದರು. ಬ್ಯಾಂಕ್ ಸಿಇಒ ನಾರಾಯಣ ಫಡ್ಕೆ ನಿರೂಪಿಸಿದರು.