ಧರ್ಮಸ್ಥಳ: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ವೈದ್ಯರ ದಿನದ ಸಂದೇಶ ಸಾರಿದ್ದಾರೆ.
ವೈದ್ಯ ವೃತ್ತಿ ಅತ್ಯಂತ ಪವಿತ್ರ ವೃತ್ತಿಯಾಗಿದ್ದು ಪ್ರೀತಿ, ತ್ಯಾಗ ಮತ್ತು ಸೇವಾ ಮನೋಭಾವದಿಂದ ಚಿಕಿತ್ಸೆ ನೀಡಿ ರೋಗಿಗಳು ಆದಷ್ಟು ಶೀಘ್ರ ಗುಣಮುಖರಾಗಿ ಪೂರ್ಣ ಆರೋಗ್ಯ ಭಾಗ್ಯವನ್ನು ಹೊಂದುವಂತೆ ಮಾಡುವುದೇ ವೈದ್ಯರ ಗುರಿಯಾಗಿದೆ. ವೈದ್ಯ ವೃತ್ತಿಯವರು ಸಾಕಷ್ಟು ಶ್ರಮ ವಹಿಸಿ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಬೇಕಾಗುತ್ತದೆ. ಕೊರೊನಾ ಸಂಕಷ್ಟದ ದಿನಗಳಲ್ಲಂತೂ ಎಲ್ಲಾ ವೈದ್ಯರುಗಳು ತಮ್ಮ ಮನೆ ಹಾಗೂ ಕುಟುಂಬದ ಸಂಪರ್ಕವೂ ಇಲ್ಲದೆ, ಆಹಾರ, ವಿಶ್ರಾಂತಿ ಮತ್ತು ಸಮಯದ ಮಿತಿಯನ್ನೂ ಮರೆತು ಮಾನವೀಯತೆಯಿಂದ ರೋಗಿಗಳ ಸೇವೆ ಮಾಡಿದ್ದಾರೆ. ಅಂತಹ ಎಲ್ಲಾ ವೈದ್ಯರಿಗೆ ಅಭಿನಂದನೆಗಳು ಹಾಗೂ ಶುಭ ಹಾರೈಕೆಗಳು.
ಇಂದಿನ ಯುವ ಜನತೆ ವೈದ್ಯಕೀಯ ಶಿಕ್ಷಣ ಮತ್ತು ವೃತ್ತಿಯಲ್ಲಿ ಆಸಕ್ತಿ ವಹಿಸಿ ವಿಶ್ವದ ವೃತ್ತಿ ನಿರತ ವೈದ್ಯರೊಂದಿಗೆ ಸ್ಪರ್ಧಾತ್ಮಕವಾಗಿ ಬೆಳೆಯಬೇಕಾಗಿದೆ. ವಿಶ್ವದ ಅತಿ ಹೆಚ್ಚು ಯಶಸ್ವಿ ಸಂಶೋಧಕರು ಮತ್ತು ವೈದ್ಯರು ಅಂದರೆ ಭಾರತೀಯರು ಎಂಬುದು ನಾವೆಲ್ಲರೂ ಹೆಮ್ಮೆ ಪಡುವ ವಿಚಾರವಾಗಿದೆ. ಎಲ್ಲರಿಗೂ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹವಿರಲಿ ಎಂದು ಸಂದೇಶದಲ್ಲಿ ತಿಳಿಸಿದ್ದಾರೆ.