ಬೆಳ್ತಂಗಡಿ: ಹಿರಿಯ ನಾಗರಿಕರು, ಬುದ್ಧಿಮಾಂದ್ಯರೂ ಸೇರಿ ಕೇಲವೇ ದಿನಗಳ ಅಂತರದಲ್ಲಿ ಕೋವಿಡ್ ಪಾಸಿಟಿವ್ ಗೆ ಒಳಗಾದವರ ಸಂಖ್ಯೆ 226!. ಹೌದು ನೆರಿಯದಂತಹ ಗ್ರಾಮೀಣ ಪ್ರದೇಶದಲ್ಲಿ ಸೋಂಕಿತರ ಶುಶ್ರೂಶೆಗೆ ಕೊರತೆ ಉಂಟಾಗಬಹುದು ಎಂಬ ದೃಷ್ಟಿಯಿಂದ ಶಾಸಕ ಹರೀಶ್ ಪೂಂಜ ದೃಢ ನಿಶ್ಚಯದೊಂದಿಗೆ ಎಲ್ಲಾ ಸೋಂಕಿತರನ್ನು ರಜತಾದ್ರಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಕೊಡಿಸುವ ದೃಢ ನಿಶ್ಚಯ ಮಾಡುತ್ತಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಆಡಳಿತ ವರ್ಗದೊಂದಿಗೆ ಅವರು ಮಾಡಿರುವ ಸಮಾಜಮುಖಿ ಕಾರ್ಯ ಇಂದು ಇತಿಹಾಸ ನಿರ್ಮಿಸಿದೆ. ದೇಶದ ಕೆಲವೆಡೆ ಕೋಟಿ ಕೋಟಿ ಹಣ ಹೊಂದಿರುವವವರೂ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಜೀವ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಂಕಟ ಪಡುತ್ತಿದ್ದಾರೆ. ಆದರೆ ಧರ್ಮಸ್ಥಳದಲ್ಲಿ ಸಾಮಾನ್ಯ, ಅತೀ ಸಾಮಾನ್ಯ ವ್ಯಕ್ತಿಗಳಾದ ಹಿರಿಯ ನಾಗರಿಕರು ಹಾಗೂ ಕೆಲ ಬುದ್ಧಿಮಾಂದ್ಯರೂ ಸೇರಿದಂತೆ 226 ಮಂದಿ ಜನತೆ ನಿಸ್ವಾರ್ಥ ಸೇವೆಯ ಪಡೆದು, ಯಾವುದೇ ಪ್ರಾಣ ಹಾನಿ ಸಂಭವಿಸದೆ, ಸುರಕ್ಷಿತವಾಗಿ ತಮ್ಮ ವಾಸ ಸ್ಥಳ ಸೇರಿ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಧರ್ಮಸ್ಥಳ ಹಾಗೂ ಬೆಳ್ತಂಗಡಿ ಜಿಲ್ಲೆ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದರೂ ತಪ್ಪಾಗಲಾರದು. ಧರ್ಮಸ್ಥಳದ ರಜತಾದ್ರಿ ಕೋವಿಡ್ ಕೇರ್ ಸೆಂಟರ್ ನಿಂದ 150 ಮಂದಿ ಬಿಡುಗಡೆ ಹೊಂದಿದವರಿಗೆ ವಿದಾಯ ಕಾರ್ಯಕ್ರಮ ಹಾಗೂ ಸಮಾಜಮುಖಿ ಕಾರ್ಯದಲ್ಲಿ ಕೈಜೋಡಿಸಿದವರಿಗೆ ಕೃತಜ್ಞತಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಶಾಸಕ ಹರೀಶ್ ಪೂಂಜ ಮಾತನಾಡಿ, ಆಶ್ರಮದ ಕೋವಿಡ್ ಸೋಂಕಿತರ ಆರೋಗ್ಯದ ದೃಷ್ಟಿಯಿಂದ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ರಜತಾದ್ರಿ ವಸತಿಗೃಹವನ್ನು ಕೋವಿಡ್ ಕೇರ್ ಸೆಂಟರ್ ಆಗಿ ನೀಡಿದ್ದರಿಂದ ಅಷ್ಟು ಜನರು ಇಂದು ಸಂತೋಷದಿಂದ ಹೊಸ ಜೀವನವನ್ನು ಆರಂಭಿಸಿದ್ದಲ್ಲದೆ, ಗುಣಮುಖರಾಗಿ ಬೀಳ್ಕೊಡುವಂತಹ ಸುಸಂದರ್ಭದ ದಿನವಾಗಿದೆ ಎಂದರು.
ಆಶ್ರಮದ ಮೂಲ ಸೌಕರ್ಯ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರ ಬಳಿ ಮಾತುಕತೆ ನಡೆಸಲಾಗಿದ್ದು, ಈಗಾಗಲೆ 50 ಲಕ್ಷ ರೂ. ಬಿಡುಗಡೆ ಮಾಡಿಸಲಾಗಿದೆ. ಶೀಘ್ರ ಆಶ್ರಮಕ್ಕೆ ಒದಗಿಸಲಾಗುವುದು ಎಂದು ಹೇಳಿದರು.
ಸಿಯೋನ್ ಆಶ್ರಮದಲ್ಲಿ 226 ಮಂದಿಗೆ ಪಾಸಿಟಿವ್ ಪ್ರಕರಣ ಕಂಡು ಬಂದ ಹಿನ್ನೆಲೆ ಅವರ ಆರೋಗ್ಯ ದೃಷ್ಟಿಯಿಂದ ಆಡಳಿತದ ಜತೆ ಚರ್ಚಿಸಿ ರಜತಾದ್ರಿಗೆ ಸ್ಥಳಾಂತರಿಸುವ ಕಠಿಣ ನಿರ್ಧಾರ ತೆಗೆದುಕೊಂಡಿದ್ದರಿಂದ ಇಂದು ಅವರನ್ನು ಸಂತೋಷವಾಗಿ ಬೀಳ್ಕೊಡುವಂತಾಗಿದೆ. 270 ಜನ ಒಂದೇ ವ್ಯವಸ್ಥೆಯಲ್ಲಿ ಇರುವ ಸಮಯ ಕೊರೊನಾದಿಂದ ಸುರಕ್ಷಿತವಾಗಿರಳು ಸ್ಥಳಾಂತರ ಅನಿವಾರ್ಯವಾಗಿತ್ತು. ಇದೀಗ ಎಲ್ಲರೂ ಮರಳಿ ಆಶ್ರಮ ಸೇರಲಿದ್ದಾರೆ. ಈಗಾಗಲೆ ಆಶ್ರಮದ ಆಡಳಿತದಿಂದ ಸ್ವಚ್ಛತೆ, ಸುಣ್ಣಬಣ್ಣ ಬಳಿಯಲಾಗಿದೆ. ಇಲ್ಲಿ ಗ್ರಾಮಾಭಿವೃದ್ಧಿ ವಿಪತ್ತು ನಿರ್ವಹಣ ಘಟಕ ಸ್ವೈಂಸೇವಕರು ತಮ್ಮ ಆರೋಗ್ಯದೊಂದಿಗೆ ಆಶ್ರಮವಾಸಿಗಳ ಸೇವೆ ಮಾಡಿದ್ದಾರೆ. ಆರೋಗ್ಯ ಇಲಾಖೆ, ಗ್ರಾಮ ಪಂಚಾಯಿತಿ, ಕ್ಷೇತ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಉತ್ತಮ ವೈದ್ಯಕೀಯ ಹಾಗೂ ಸೇವೆ ನೀಡಿದ್ದಾರೆ ಎಂದರು.
ತಹಶೀಲ್ದಾರ್ ಮಹೇಶ್ ಜೆ., ತಾಲೂಕು ಆರೋಗ್ಯಧಿಕಾರಿ ಡಾ.ಕಲಾಮಧು, ಸಿಯೋನ್ ಶ್ರಮದ ಮ್ಯಾನೇಜಿಂಗ್ ಟ್ರಸ್ಟಿ ಯು.ಸಿ.ಪೌಲೋಸ್, ದೇವಳ ಕಚೇರಿ ವ್ಯವಸ್ಥಾಪಕ ಪಾರ್ಶ್ವನಾಥ ಜೈನ್, ಗ್ರಾ.ಪಂ. ಅಧ್ಯಕ್ಷೆ ಜಯ ಮೋನಪ್ಪ ಗೌಡ, ಉಪಾಧ್ಯಕ್ಷ ಶ್ರೀನಿವಾಸ ರಾವ್, ಧರ್ಮಸ್ಥಳ ಪಿ.ಎಚ್.ಸಿ. ವೈದ್ಯಾಧಿಕಾರಿ ಡಾ.ಆಕಾಶ್, ಪಿಡಿಒ ಉಮೇಶ್ ಕೆ., ಸಿಡಿಪಿಒ ಪ್ರಿಯಾ ಆಗ್ನೆಸ್, ಸಿಯೋನ್ ಆಶ್ರಮದ ಟ್ರಸ್ಟಿ ಶೋಭಾ ಯು.ಪಿ., ಟ್ರಸ್ಟಿ ಸದಸ್ಯ ಸುಭಾಷ್ ಯು.ಪಿ., ವ್ಯವಸ್ಥಾಪಕಿ ಸಂಧ್ಯಾ ಯು.ಪಿ. ಉಪಸ್ಥಿತರಿದ್ದರು.
ನೋಡೆಲ್ ಅಧಿಕಾರಿ ಡಾ.ಜಯಕೀರ್ತಿ ಜೈನ್ ಸ್ವಾಗತಿಸಿ, ವಿಪತ್ತು ನಿರ್ವಹಣೆ ತಂಡದ ಸದಸ್ಯ ಪೃತ್ವೀಶ್ ಪಾಂಗಳ ನಿರೂಪಿಸಿದರು.
ಸಿಯೋನ್ ನಲ್ಲಿ ಸ್ವಾಗತ:
ಸಿಯೋನ್ ಆಶ್ರಮದಲ್ಲಿ ಭಾನುವಾರ 150 ಮಂದಿಯನ್ನು ಆಶ್ರಮದ ಆಡಳಿತದವರು, ನೆರಿಯ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರು ಸ್ವಾಗತಿಸಿದರು. ಆಶ್ರಮವನ್ನು ಸುಣ್ಣ ಬಣ್ಣ ಬಳಿದು ಸ್ವಚ್ಛತೆ ಮಾಡಲಾಗಿತ್ತು. ಸ್ವತಃ ಶಾಸಕರೇ ಖುದ್ದು ಸಿಯೋನ್ ಆಶ್ರಮಕ್ಕೆ ತೆರಳಿ ಗುಣಮುಖರಾದ ಸೋಂಕಿತರನ್ನು ಕರೆದೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸಿಯೋನ್ ಶ್ರಮದ ಮ್ಯಾನೇಜಿಂಗ್ ಟ್ರಸ್ಟಿ ಯು.ಸಿ.ಪೌಲೋಸ್, ಕೋವಿಡ್ ಸಂಕಷ್ಟ ಕಾಲದಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿ ಸಕಾಲಿಕ ಸಹಕಾರವನ್ನು ಸ್ಮರಿಸಿದರು.
ನೆರಿಯಾ ಗ್ರಾಮದ ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಕೊರೊನಾ ಸೋಂಕಿತರಾದ 126 ಪುರುಷರು ಹಾಗೂ 100 ಮಹಿಳೆಯರು ಸೇರಿದಂತೆ ಒಟ್ಟು 226 ಮಂದಿ ಚಿಕಿತ್ಸೆ ಪಡೆದಿದ್ದು, ಭಾನುವಾರ 150 ಮಂದಿ ಗುಣಮುಖರಾದವರನ್ನು ಮತ್ತೆ ಸಿಯೋನ್ ಆಶ್ರಮಕ್ಕೆ ಕರೆದೊಯ್ಯಲಾಯಿತು. ಸಿಯೋನ್ ಆಶ್ರಮಕ್ಕೆ ಕರೆದೊಯ್ದ ಮಂದಿಯಲ್ಲಿ ವಿಕಲ ಚೇತನರು, 30 ಮಂದಿ ಎಪ್ಪತ್ತು ವರ್ಷಕ್ಕೂ ಮಿಕ್ಕಿದ ಹಿರಿಯ ನಾಗರಿಕರು ಹಾಗೂ ಕೆಲವರು ಬುದ್ಧಿಮಾಂದ್ಯರೂ ಇದ್ದಾರೆ.
ಆಶ್ರಮದಲ್ಲಿ ಕೃತಜ್ಞತೆಯ ಸರಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಸಕ ಹರೀಶ್ ಪೂಂಜ, ಸಿಯೋನ್ ಆಶ್ರಮ ಆಡಳಿತ ಮಂಡಳಿ, ನೆರಿಯ ಗ್ರಾ.ಪಂ. ಅಧ್ಯಕ್ಷೆ ವಸಂತಿ, ಉಪಾಧ್ಯಕ್ಷೆ ಕುಶಲ, ಪಿಡಿಒ ಗಾಯತ್ರಿ, ಗಂಡಿಬಾಗಿಲು ಚರ್ಚ್ ಧರ್ಮಗುರು ಫಾ.ಶಾಜಿ ಮಾಥ್ಯೂ, ದೇವಗಿರಿ ಚರ್ಚ್ ಧರ್ಮಗುರು ಸಿರಿಲ್ ಆಗಸ್ಟಿನ್, ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಧರ್ಮಸ್ಥಳ ಗ್ರಾ.ಪಂ. ಉಪಾಧ್ಯಕ್ಷ ಶ್ರೀನಿವಾಸ್ ರಾವ್ ಮೊದಲಾದವರು ಇದ್ದರು.
ನಿಸ್ವಾರ್ಥ ಸೇವೆ:
ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು, ಡಿ. ಹರ್ಷೇಂದ್ರಕುಮಾರ್ ಅವರ ಮಾರ್ಗದರ್ಶನದಲ್ಲಿ ಶಾಸಕ ಹರೀಶ್ ಪೂಂಜ ಅವರ ಸಹಕಾರದೊಂದಿಗೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ನಿರ್ದೇಶನದೊಂದಿಗೆ ಮಾರ್ಗದರ್ಶಿ ಅಧಿಕಾರಿಯಾಗಿ ಪಶುವೈದ್ಯ ಇಲಾಖೆಯ ಹಿರಿಯ ಅಧಿಕಾರಿ ಡಾ. ಕೆ. ಜಯಕೀರ್ತಿ ಜೈನ್ ಅವರ ನೇತೃತ್ವದಲ್ಲಿ ಡಾ. ಆಕಾಶ್, ಡಾ. ಚೆನ್ನಕೇಶವ, ಡಾ. ಸುಮನಾ, ಡಾ. ಸೋನಾ, ದಾದಿ ಗೀತಾ ಹಾಗೂ ಧರ್ಮಸ್ಥಳದ ವತಿಯಿಂದ 3 ಮಂದಿ ದಾದಿಯರು, ಸಿಯೋನಾ ಆಶ್ರಮದ 10 ಮಂದಿ ದಾದಿಯರು ಹಾಗೂ 8 ಜನ ಶಿಕ್ಷಕರು, ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣೆಯ 10 ಮಂದಿ ಸದಸ್ಯರು ಸೇವೆಯಲ್ಲಿ ನಿರತರಾಗಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಸಿಬ್ಬಂದಿಗಳು, ಧರ್ಮಸ್ಥಳ ಗ್ರಾಮ ಪಂಚಾಯಿತಿ, ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆರು ಕೋವಿಡ್ ಕೇರ್ ಸೆಂಟರ್‌ಗೆ ಸಂಪೂರ್ಣ ಸಹಕಾರ ಜೊತೆಗೆ ಸೇವೆ ಮಾಡಿದ್ದಾರೆ.