ಬೆಳ್ತಂಗಡಿ: ತಾಲೂಕಿನ ಮಲವಂತಿಗೆ ಗ್ರಾಮದ ಎಳನೀರು ಪ್ರದೇಶದ ಜನರ ಮೂಲಭೂತ ಸೌಕರ್ಯವಾದ ರಸ್ತೆಯ ಸೌಕರ್ಯದಿಂದ ವಂಚಿತರಾಗಿದ್ದು ಎಳನೀರು ಭಾಗದ ಜನರು ತುರ್ತು ಕೆಲಸಗಳಿಗೆ ಸಂಸೆಯಿಂದ ಕುದುರೆಮುಖ, ಬಜಗೋಳಿ, ಗುರುವಾಯನಕೆರೆ, ಬೆಳ್ತಂಗಡಿ ತಾಲೂಕು ಕೇಂದ್ರಕ್ಕೆ ಬಂದ್ದು ಅಲ್ಲಿಂದ ಮಲವಂತಿಗೆ ಪಂಚಾಯತ್ ಗೆ ಬರಲು ಸುಮಾರು 120 ಕಿ. ಮೀ. ಸುತ್ತಿ ಬಳಸಿ ಸಂಚರಿಸುವ ಅನಿವಾರ್ಯತೆಯಲ್ಲಿ ಇದ್ದಾರೆ. ಅದರೆ ಮಲವಂತಿಗೆಯಿಂದ ಕೇವಲ 8 ಕಿಲೋ ಮೀಟರ್ ಅಂತರದಲ್ಲಿ ಸಂಪರ್ಕಿಸುವ ಎಳನೀರು ಸಂಸೆ ಸಂಪರ್ಕ ರಸ್ತೆ ಇದ್ದು ಇದನ್ನು ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆ ವ್ಯಾಪ್ತಿಯೊಳಗಿರುವುದರಿಂದ ಈ ಬಗ್ಗೆ ಶಾಸಕ ಹರೀಶ್ ಪೂಂಜ ಬೆಂಗಳೂರಿನಲ್ಲಿ ಅರಣ್ಯ ಇಲಾಖೆಯ PCCF ವಿಜಯ ಕುಮಾರ್ ಗೋಗಿ ಹಾಗೂ ACCF ಸುಭಾಷ್ ಕೆ. ಮಾಲ್ಕೇಡೆ ಅವರೊಂದಿಗೆ ಅಭಿವೃದ್ಧಿ ಬಗ್ಗೆ ಮಾತುಕತೆ ನಡೆಸಿದರು.
ಈ ಬಗ್ಗೆ ರಸ್ತೆಯನ್ನು ಅಭಿವೃದ್ಧಿ ಪಡಿಸಲು ರಸ್ತೆಯ ಸರ್ವೇ ಕಾರ್ಯ ನಡೆಸಲು ಸಹಕಾರ ನೀಡುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. ಒಂದು ವೇಳೆ ಈ ರಸ್ತೆ ಅಭಿವೃದ್ಧಿಯಾದಲ್ಲಿ ಎಳನೀರು ಭಾಗದ ಜನರ ಬಹು ವರುಷಗಳ ಬೇಡಿಕೆಯೊಂದು ಈಡೇರಿದಂತಾಗುತ್ತದೆ.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಬೆಳ್ತಂಗಡಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಿವಪ್ರಸಾದ್ ಅಜಿಲ ಉಪಸ್ಥಿತರಿದ್ದರು.