ಬೆಳ್ತಂಗಡಿ: ದ.ಕ. ಜಿಲ್ಲೆಯಲ್ಲಿ ನಿಯಮಾವಳಿ ಕೊಂಚ ಸಡಿಲಿಕೆ ಮಾಡಲಾಗಿದೆ. ಆದರೆ ಕೊರೋನಾ ಇಲ್ಲವೇ ಇಲ್ಲ ಎಂಬಂತೆ ಜನರ ಭಾವನೆ ಕಂಡು ಬರುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಿಂದ ದ.ಕ. ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ ನಲ್ಲೂ ಭಾರೀ ಜನಜಂಗುಳಿ ಕಂಡು ಬರುತ್ತಿದ್ದು, ರಸ್ತೆ ನಡುವೆ ವಾಹನ ನಿಲ್ಲಿಸಿ ಫೋಟೋ ಶೂಟ್, ಸೆಲ್ಫಿ ಕ್ಲಿಕ್ ಮಾಡುತ್ತಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.
ಮಳೆ ಬಿದ್ದು ಹಚ್ಚ ಹಸುರಾಗಿರುವ ಚಾರ್ಮಾಡಿ ಸೊಬಗು ಎಲ್ಲರ ಮನ ತಣಿಸುತ್ತದೆ. ಆದರೆ ಈ ಪ್ರದೇಶ ತಲುಪಬೇಕಾದರೆ ಚಾರ್ಮಾಡಿ ಚೆಕ್ ಪೋಸ್ಟ್ ಹಾಗೂ ಕೊಟ್ಟಿಗೆ ಹಾರ ಚೆಕ್ ಪೋಸ್ಟ್ ದಾಟಲೇ ಬೇಕಿದೆ. ಆದರೆ ಸಾಲು ಸಾಲು ಪ್ರವಾಸಿಗರ ವಾಹನಗಳು ಘಾಟಿಯಲ್ಲಿ ಸಂಚರಿಸುವುದು ನೋಡಿದರೆ ಯಾವುದೇ ರೀತಿಯ ಗಂಭೀರ ಸ್ವರೂಪದ ತಪಾಸಣೆ ನಡೆಯದಿರುವುದು ಖಚಿತವಾದಂತೆ ಕಂಡು ಬರುತ್ತಿದೆ.
ರಸ್ತೆ ನಡುವೆ ಫೋಟೋ, ವಿಡಿಯೋ ಶೂಟ್:
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಸಂದರ್ಭದಲ್ಲಿ ಪ್ರವಾಸಿಗರು ಪ್ರಕೃತಿ ಸೊಬಗು ಕಂಡು ವಾಹನಗಳು ಕಡಿಮೆ ಇವೆ ಎಂಬ ಭರದಲ್ಲಿ ರಸ್ತೆಯಲ್ಲೇ ವಾಹನ ಪಾರ್ಕ್ ಮಾಡಿ ಫೋಟೊ ಶೂಟ್ ಮಾಡುತ್ತಿದ್ದಾರೆ. ಇಂತಹಾ ಸಂದರ್ಭಗಳಲ್ಲಿ ಅಪಘಾತ ಸಂಭವಿಸಿದರೆ ಯಾರು ಹೊಣೆ ಎಂಬ ಪ್ರಶ್ನೆಗಳೂ ಉದ್ಭವಿಸುತ್ತಿವೆ. ಕೆಲವರಂತೂ ಕ್ಯಾಮರಾ ಹಿಡಿದುಕೊಂಡೇ ಶೂಟಿಂಗ್ ಗಾಗಿ ಆಗಮಿಸುತ್ತಿದ್ದಾರೆ. ಮಳೆಗಾಲದಲ್ಲಿ ಕಲ್ಲುಗಳು ಹಾಗೂ ಕೆಲವೆಡೆ ಜಾರುವಂತಹಾ ಪರಿಸ್ಥಿತಿ ಇದ್ದು, ಏನಾದರೂ ಅಪಘಾತ ನಡೆದರೆ ಸಹಾಯಕ್ಕೆ ಪರದಾಡಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗಬಹುದು.
ಬೇಕಿದೆ ಕಡಿವಾಣ:
ಪ್ರಯಾಣದ ನೆಪದಲ್ಲಿ ಅನಗತ್ಯ ಸಂಚಾರ ನಡೆಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದು ಅನಿವಾರ್ಯವಾಗಿದೆ. ಈ ಕುರಿತು ದ.ಕ. ಹಾಗೂ ಚಿಕ್ಕಮಗಳೂರು ಜಿಲ್ಲಾಡಳಿತ ಸಮರ್ಪಕ ಸಮಾಲೋಚನೆ ನಡೆಸಿ ಕ್ರಮಕೈಗೊಂಡಲ್ಲಿ ಸಂಭಾವ್ಯ ಅಪಾಯಗಳನ್ನು ತಪ್ಪಿಸಬಹುದಾಗಿದೆ.