ಕೊರೋನಾ ಗೆದ್ದ ನೆರಿಯಾ, ಸಿಯೋನ್ ಆಶ್ರಮದ ಒಟ್ಟು 206 ಮಂದಿ ನಾಳೆ ಬಿಡುಗಡೆ: ಕೊರೊನಾ ಸೋಂಕಿತರಿಗೆ ವರದಾನವಾದ ‘ರಜತಾದ್ರಿ’ ಆರೈಕೆ ಕೇಂದ್ರ: ಸಂಘಟಿತ ಪ್ರಯತ್ನದೊಂದಿಗೆ‌ ಭಯ-ಆತಂಕ ನಿವಾರಿಸಿ ಸೋಂಕಿತರ‌ ರಕ್ಷಣೆ: ಉಚಿತ ಚಿಕಿತ್ಸೆ, ಶುಶ್ರೂಷೆ ಮೂಲಕ ವಿಶ್ವಕ್ಕೆ ಮಾದರಿಯಾದ ಕೇಂದ್ರ

 

ಧರ್ಮಸ್ಥಳ: ಸರ್ವಧರ್ಮ ಸಮನ್ವಯ ಕೇಂದ್ರ ಹಾಗೂ ಚತುರ್ದಾನಕ್ಕೆ ಹೆಸರಾದ ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳ ಕೋವಿಡ್-19 ಸಂದರ್ಭದಲ್ಲಿ ಸಾಮಾಜಿಕ ಸೇವೆಯಲ್ಲಿ ನಿರತವಾಗಿದೆ. ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಆರಂಭಿಸಿದ ಕೊರೊನಾ ಆರೈಕೆ ಕೇಂದ್ರಗಳು ಸೋಂಕಿತರಲ್ಲಿ ಭಯ-ಆತಂಕ ನಿವಾರಿಸಿ, ಎಲ್ಲರೂ ಸಂಪೂರ್ಣ ಗುಣಮುಖರಾಗಿ ಆರೋಗ್ಯ ಭಾಗ್ಯವನ್ನು ಹೊಂದಿದ್ದು ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಮೂಡಿಸಿದೆ. ಧರ್ಮಸ್ಥಳದಲ್ಲಿ ರಜತಾದ್ರಿ ವಸತಿ ಗೃಹದಲ್ಲಿರುವ ಕೊರೊನಾ ಆರೈಕೆ ಕೇಂದ್ರ ಸಾಕ್ಷಿಯಾಗಿದೆ.

ಕೊರೋನ ಸಂಕಷ್ಟದ ಸಂದರ್ಭದಲ್ಲಿಯೂ ಧಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಅನೇಕ ಸೇವಾಕಾರ್ಯಗಳನ್ನು ಆಯೋಜಿಸಲಾಗಿದೆ. ರಾಜ್ಯದ ವಿವಿಧ ಊರುಗಳಲ್ಲಿ ಕೊರೊನಾ ಆರೈಕೆ ಕೇಂದ್ರ, ಸೋಂಕಿತರು ಆಸ್ಪತ್ರೆಗೆ ಹೋಗಲು ಮತ್ತು ಮನೆಗೆ ಬರಲು ಉಚಿತ ವಾಹನ ಸೌಲಭ್ಯ, ಆಸ್ಪತ್ರೆಗಳಿಗೆ ಆಮ್ಲಜನಕ ಸಾಂದ್ರಕಗಳ ಕೊಡುಗೆ ಇತ್ಯಾದಿ ಸೇವೆಗಳನ್ನು ಒದಗಿಸಲಾಗಿದೆ.

ವರದಾನವಾದ ಕೊರೊನಾ ಆರೈಕೆ ಕೇಂದ್ರ:

300 ಕೊಠಡಿಗಳ 600 ಹಾಸಿಗೆಗಳಿರುವ ವಸತಿಗೃಹವನ್ನು ಧರ್ಮಾಧಿಕಾರಿ ಡಾ. ಹೆಗ್ಗಡೆಯವರು ಕೊರೊನಾ ಆರೈಕೆ ಕೇಂದ್ರಕ್ಕಾಗಿ ಉಚಿತವಾಗಿ ನೀಡಿದ್ದರು. ನೆರಿಯಾ ಗ್ರಾಮದ ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಕೊರೊನಾ ಸೋಂಕಿತರಾದ 120 ಪುರುಷರು ಹಾಗೂ 86 ಮಹಿಳೆಯರು ಸೇರಿದಂತೆ ಒಟ್ಟು 206 ಮಂದಿ ಧರ್ಮಸ್ಥಳದಲ್ಲಿ ಕೊರೊನಾ ಆರೈಕೆ ಕೇಂದ್ರದಲ್ಲಿ ಶುಶ್ರೂಷೆ ಪಡೆದು ಸಂಪೂರ್ಣ ಗುಣಮುಖರಾಗಿ ಜೂ. 22ರ ಮಂಗಳವಾರ ನಾಳೆ ಮರಳಿ ಸಿಯೋನ್ ಆಶ್ರಮಕ್ಕೆ ಮರಳುವ ನಿರೀಕ್ಷೆಯಿದೆ. 206 ಮಂದಿ ಸೋಂಕಿತರಲ್ಲಿ 10 ಮಂದಿ ವಿಕಲ ಚೇತನರು, 30 ಮಂದಿ ಎಪ್ಪತ್ತು ವರ್ಷಕ್ಕೂ ಮಿಕ್ಕಿದ ಹಿರಿಯ ನಾಗರಿಕರು ಹಾಗೂ ಕೆಲವರು ಬುದ್ಧಿಮಾಂದ್ಯರೂ ಇದ್ದಾರೆ.

ನಗುಮೊಗದ ಸೇವೆ:

ಕೇಂದ್ರದಲ್ಲಿರುವ ವೈದ್ಯರು, ದಾದಿಯರು, ನೌಕರರು, ಸ್ವಯಂಸೇವಕರು ಹಾಗೂ ಸಿಬ್ಬಂದಿ ಆರೈಕೆಯಿಂದ ಸೋಂಕಿತರಲ್ಲಿ ಭಯ ಆತಂಕ ನಿವಾರಿಸಿ, ನವಚೈತನ್ಯದೊಂದಿಗೆ ಧೈರ್ಯ ಮತ್ತು ಆತ್ಮವಿಶ್ವಾಸ ಮೂಡಿಸಿದೆ. ಪ್ರತಿ ದಿನ ಬೆಳಿಗ್ಗೆ ಉಪಾಹಾರ, 11 ಗಂಟೆಗೆ ಕಷಾಯ ಮತ್ತು ಬಿಸ್ಕೆಟ್, ಮಧ್ಯಾಹ್ನ ಊಟ, ಸಂಜೆ ಕಾಫಿ, ಟೀ, ಕಷಾಯ, ತಿಂಡಿ ಹಾಗೂ ರಾತ್ರಿ ಊಟ ಮತ್ತು ಊಟ ಮಾಡದವರಿಗೆ ಉಪಾಹಾರವನ್ನು ಧರ್ಮಸ್ಥಳದ ವತಿಯಿಂದ ಒದಗಿಸಲಾಗಿತ್ತು. ಸಿರಿ ಸಂಸ್ಥೆಯ ಮೂಲಕ ಎಲ್ಲರಿಗೂ ಉಚಿತ ಬಟ್ಟೆ ನೀಡಲಾಗಿದೆ.

ಮನೆಯ ವಾತಾವರಣ ಸೃಷ್ಟಿ:

ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು, ಡಿ. ಹರ್ಷೇಂದ್ರಕುಮಾರ್ ಮಾರ್ಗದರ್ಶನದಲ್ಲಿ ಶಾಸಕ ಹರೀಶ್ ಪೂಂಜ ಅವರ ಸಹಕಾರದೊಂದಿಗೆ ಸೋಂಕಿತರಿಗೆ ಮನೆಯ ವಾತಾವರಣದ ಭಾವನೆ ಮೂಡಿಬರುವಂತೆ ಸ್ವಚ್ಛ ಹಾಗೂ ಪ್ರಶಾಂತ ಪರಿಸರದಲ್ಲಿ ಆರೋಗ್ಯಸೇವೆ ನೀಡಲಾಗಿದೆ. ಶಾಸಕರು ಆಗಾಗ ಕೇಂದ್ರಕ್ಕೆ ಭೇಟಿ ನೀಡಿ ಸೋಂಕಿತರ ಯೋಗಕ್ಷೇಮ ವಿಚಾರಿಸಿ ಧೈರ್ಯ ತುಂಬಿದ್ದಾರೆ.

ಸೋಂಕಿತರ ಸೇವೆಗೈದ ವಾರಿಯರ್ಸ್:

ಆರೋಗ್ಯ ಇಲಾಖೆ ವತಿಯಿಂದ ತಾ.ಆರೋಗ್ಯಧಿಕಾರಿ ಡಾ. ಕಲಾಮಧು ನೇತೃತ್ವದಲ್ಲಿ ಡಾ. ಆಕಾಶ್, ಡಾ. ಚೆನ್ನಕೇಶವ, ಡಾ. ಸುಮನಾ, ಡಾ. ಸೋನಾ, ದಾದಿ ಗೀತಾ ಹಾಗೂ ಧರ್ಮಸ್ಥಳದ ವತಿಯಿಂದ 3 ಮಂದಿ ದಾದಿಯರು, ಸಿಯೋನಾ ಆಶ್ರಮದ 10 ಮಂದಿ ದಾದಿಯರು ಹಾಗೂ 8 ಜನ ಶಿಕ್ಷಕರು, ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣೆಯ 10 ಮಂದಿ ಸದಸ್ಯರು ಸೇವೆಯಲ್ಲಿ ನಿರತರಾಗಿದ್ದರು.

ಸಂಘಟಿತ ‌ಪ್ರಯತ್ನ:

ಬೆಳ್ತಂಗಡಿ ತಹಸೀಲ್ದಾರ್ ಮಹೇಶ್, ಜೆ., ಇ. ಒ. ಕುಸುಮಾಧರ್ ಭೇಟಿ ನೀಡಿ ಸೂಕ್ತ ನಿರ್ದೇಶನದೊಂದಿಗೆ ಮಾರ್ಗದರ್ಶಿ ಅಧಿಕಾರಿಯಾಗಿ ಪಶುವೈದ್ಯ ಇಲಾಖೆಯ ಹಿರಿಯ ಅಧಿಕಾರಿ ಡಾ. ಕೆ. ಜಯಕೀರ್ತಿ ಜೈನ್ ಅವರು ಎಲ್ಲರ ಸಂಘಟಿತ ಪ್ರಯತ್ನ, ಸಹಕಾರದೊಂದಿಗೆ ಉತ್ತಮ ಸೇವೆ ನೀಡಿದ್ದಾರೆ. ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷೆ ಜಯ ಎಂ. ಗೌಡ, ಉಪಾಧ್ಯಕ್ಷ ಶ್ರೀನಿವಾಸ ರಾವ್ ಹಾಗೂ ಸರ್ವ ಸದಸ್ಯರು, ಪಿ.ಡಿ.ಒ. ಉಮೇಶ್, ಕೆ. ಮತ್ತು ಟಾಸ್ಕ್ ಫೋರ್ಸ್ ಸದಸ್ಯರು ನಿರಂತರ ಸಹಕಾರ ಮತ್ತು ಸೇವೆ ಅನನ್ಯ.

ಅಧಿಕಾರಿಗಳ ಅಭಿನಂದನೆ:

ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಜಿ.ಪಂ. ಸಿ.ಇ.ಒ. ಡಾ.ಕುಮಾರ್ ಕೇಂದ್ರದಲ್ಲಿ ಸ್ವಚ್ಛತೆ, ಸೇವೆ, ದಕ್ಷತೆಯೊಂದಿಗೆ ನೀಡುತ್ತಿರುವ ಸೌಜನ್ಯ ಪೂರ್ಣ ಸೇವೆಗೆ ಅಭಿನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

error: Content is protected !!