ಆರೋಗ್ಯಭಾಗ್ಯ, ದೀರ್ಘಾಯುಷ್ಯಕ್ಕಾಗಿ “ಮನೆ ಮನೆಯಲ್ಲಿ ಯೋಗಾಭ್ಯಾಸ” ಅವಶ್ಯ: ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ‌ ಅಭಿಮತ: ವೆಬಿನಾರ್ ಮೂಲಕ ಏಳನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಬೆಳ್ತಂಗಡಿ: ಆರೋಗ್ಯಭಾಗ್ಯ ಹಾಗೂ ದೀರ್ಘಾಯುಷ್ಯಕ್ಕಾಗಿ ಪ್ರತಿ ಮನೆಯಲ್ಲಿ ಯೋಗಾಭ್ಯಾಸ ಮಾಡಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸಲಹೆ ನೀಡಿದರು.

ಏಳನೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸೋಮವಾರ ವೆಬಿನಾರ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

“ಮನೆ ಮನೆಯಲ್ಲಿ ಯೋಗಾಭ್ಯಾಸ” ಎಂಬುದು ಈ ವರ್ಷದ ಯೋಗ ದಿನಾಚರಣೆಯ ಸಂದೇಶವಾಗಿದ್ದು ಪ್ರತಿ ಮನೆಯಲ್ಲಿ ಕುಟುಂಬದ ಸದಸ್ಯರೆಲ್ಲ ಸೇರಿ ನಿತ್ಯವೂ ಯೋಗಾಭ್ಯಾಸ ಮಾಡಬೇಕು ಎಂದು ಅವರು ಹೇಳಿದರು. ಹಿತ-ಮಿತ ಆಹಾರ ಸೇವನೆಯೊಂದಿಗೆ ಪ್ರಾರ್ಥನೆ, ಧ್ಯಾನ, ಉಪವಾಸದೊಂದಿಗೆ ಉತ್ತಮ ಜೀವನ ಶೈಲಿಯಿಂದ ಮನಸ್ಸು ಹಾಗೂ ಪಂಚೇಂದ್ರಿಯಗಳ ನಿಯಂತ್ರಣ ಸಾಧ್ಯವಾಗುತ್ತದೆ. ಕೇವಲ ಹಣ ಸಂಪಾದನೆ ಹಾಗೂ ಭೌತಿಕ ಸಂಪತ್ತಿನ ಸಂಗ್ರಹ ಜೀವನದ ಗುರಿ ಅಲ್ಲ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಏಕಾಗ್ರತೆಯೊಂದಿಗೆ ಅವರವರ ಕಾರ್ಯಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲು ಯೋಗಾಭ್ಯಾಸ ಸಹಕಾರಿಯಾಗಿದೆ. ದೈಹಿಕ ವ್ಯಾಯಾಮಕ್ಕಾಗಿ ವಾಕಿಂಗ್, ಜಾಗಿಂಗ್, ಸೈಕ್ಲಿಂಗ್, ಈಜು, ಕ್ರೀಡೆಗಳು ಮೊದಲಾದ ಪರ್ಯಾಯ ಚಟುವಟಿಕೆಗಳಿದ್ದರೂ ಯೋಗಾಭ್ಯಾಸದಿಂದ ಮಾತ್ರ ದೈಹಿಕ ಹಾಗೂ ಮಾನಸಿಕವಾಗಿ ಉತ್ತಮ ಆರೋಗ್ಯವನ್ನು ಹೊಂದಿ ಜೀವನದಲ್ಲಿ ಉನ್ನತ ಸಾಧಕರಾಗಬಹುದು ಎಂದು ಹೆಗ್ಗಡೆಯವರು ಅಭಿಪ್ರಾಯಪಟ್ಟರು.

ಧರ್ಮಸ್ಥಳದಲ್ಲಿ ಶಾಂತಿವನದಲ್ಲಿ ಮತ್ತು ಮಣಿಪಾಲದ ಬಳಿ ಪರೀಕಾದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರವಿದ್ದು ಬೆಂಗಳೂರಿನ ನೆಲಮಂಗಲದಲ್ಲಿ 300 ಹಾಸಿಗೆಗಳ ಸಾಮರ್ಥ್ಯದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ಸದ್ಯದಲ್ಲಿಯೇ ಪ್ರಾರಂಭಗೊಳ್ಳಲಿದೆ ಎಂದು ಅವರು ಪ್ರಕಟಿಸಿದರು.

ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೆದ್ ಅಖ್ತರ್, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಪ್ರಭಾರ ಉಪಕುಲಪತಿ ಡಾ. ಜಯಾಕರ ಉಪಸ್ಥಿತರಿದ್ದರು.

ಉಜಿರೆಯ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಯೋಗ ವಿಭಾಗದ ಡೀನ್ ಡಾ. ಶಿವಪ್ರಸಾದ ಶೆಟ್ಟಿ ಧನ್ಯವಾದವಿತ್ತರು. ಡಾ. ಜ್ಯೋಸ್ನಾ ಮತ್ತು ಡಾ. ಮಂಜುಶ್ರೀ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!