ಲಾಕ್ ಡೌನ್ ಯಾರಿಗಾಗಿ…?: ಬೆಳ್ತಂಗಡಿಯಲ್ಲಿ ಸೋಮವಾರ ‌ಟ್ರಾಫಿಕ್ ಜಾಮ್!: ಸಮಯ ಸಡಿಲಿಕೆ ಆದೇಶವನ್ನೇ ಸರಿಯಾಗಿ ಬಳಸಿಕೊಂಡ‌ ಜನತೆ: ಎಲ್ಲೆಲ್ಲೂ ಜನ ಜಂಗುಳಿ, ಕೊರೋನಾ ನಿಯಮ ಪಾಲನೆ ಮರೀಚಿಕೆ!

ಬೆಳ್ತಂಗಡಿ: ಜಿಲ್ಲೆಯಲ್ಲಿ ‌ಕೊರೋನಾ ಪಾಸಿಟಿವ್ ‌ಪ್ರಕರಣ‌ ಇನ್ನೂ ಸಂಪೂರ್ಣ ‌ಕಡಿಮೆಯಾಗಿಲ್ಲ.‌ ತಾಲೂಕಿನಲ್ಲಿಯೂ‌ ನೂರಕ್ಕಿಂತ ‌ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ. ಆದರೆ ಶೇಕಡವಾರು ಪಾಸಿಟಿವಿಟಿ ಗಮನಿಸಿ ನಿರ್ಭಂದದಲ್ಲಿ ಕೆಲವೊಂದು ಸಡಿಲಿಕೆ ಮಾಡಿ‌ ಆದೇಶ ಹೊರಡಿಸಲಾಗಿದೆ. ಆದರೆ ಇದನ್ನೇ ಬಂಡವಾಳವಾಗಿಸಿಕೊಂಡ ಜನತೆ ಸಾಮಾಜಿಕ ‌ಅಂತರ, ನಿಯಮಾವಳಿಗಳನ್ನು ಮರೆತು ಬೆಳ್ತಂಗಡಿ ಪಟ್ಟಣ ವ್ಯಾಪ್ತಿಯಲ್ಲಿ ಅಡ್ಡಾಡುತ್ತಿದ್ದಾರೆ. ಇದರ ಪ್ರಮಾಣ‌ ಎಷ್ಟಿದೆ ಎಂದರೆ ಕೆಲವು ಭಾಗಗಳಲ್ಲಿ ಟ್ರಾಫಿಕ್ ಜಾಂ ಉಂಟಾಗಿತ್ತು. ಇನ್ನೂ ಕೆಲವು ಭಾಗಗಳಲ್ಲಿ ಸರತಿ ಸಾಲಿನಲ್ಲಿ ವಾಹನಗಳು ‌ಸಂಚರಿಸುವಂತಾಗಿತ್ತು. ಹೀಗೇ ಮುಂದುವರಿದರೆ ಲಾಕ್ ಡೌನ್ ಯಾರಿಗಾಗಿ ಎಂಬ ಪ್ರಶ್ನೆ ಉದ್ಭವಿಸಿದೆ.

ಕರ್ನಾಟಕ ಸರಕಾರ ದ.ಕ. ಜಿಲ್ಲೆಯಲ್ಲಿ ಪಾಸಿಟಿವಿಟಿ ಪ್ರಮಾಣ ಹೆಚ್ಚಾಗಿದ್ದರೂ ಕೆಲವು ಮಾರ್ಗಸೂಚಿ ಅಳವಡಿಸಿ ಸೆಮಿ ಲಾಕ್‌ಡೌನ್ ಅವಕಾಶ ನೀಡಲಾಗಿತ್ತು. ವಿನಾಯಿತಿ ‌ನೀಡಿದ ಆರಂಭದಲ್ಲೇ ನಿಯಂತ್ರಣದಲ್ಲಿದ್ದ ಜನರ ಹಾಗೂ ವಾಹನಗಳ ಓಡಾಟದಿಂದ ಬೆಳ್ತಂಗಡಿಯ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ವಾಹನ ದಟ್ಟಣೆ ಬೆಳಗ್ಗಿನಿಂದಲೇ‌‌ ಕಂಡುಬಂದಿದ್ದು, ಸಾಲುಸಾಲು ವಾಹನಗಳು ಸಾಗಿದವು. ದ್ವಿಚಕ್ರ ವಾಹನದಿಂದ ಹಿಡಿದು ಘನ ವಾಹನಗಳೂ ರಸ್ತೆಗಿಳಿದ್ದವು.

ಚೆಕ್ ಪೋಸ್ಟ್ ‌ಹಾಕಿದರೂ‌ ವೇಸ್ಟ್…??!: 

ಸರಕಾರಿ ಕಚೇರಿ, ಬ್ಯಾಂಕ್, ಖಾಸಗಿ ಕಚೇರಿ, ಕಾರ್ಮಿಕರು, ಫ್ರಂಟ್ ಲೈನ್ ವಾರಿಯರ್ಸ್, ಅಗತ್ಯ ಕೆಲಸಗಳಿಗೆ ತೆರಳುವವರ ಜತೆಗೆ ಅನಗತ್ಯ ಓಡಾಟ ನಡೆಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ತಾಲೂಕಿನ ಪ್ರಮುಖ ಗಡಿ ಪ್ರದೇಶದಲ್ಲಿ ಹೊರ ಜಿಲ್ಲೆಗಳಿಂದ ಬರುವವರ ನಿಯಂತ್ರಣಕ್ಕಾಗಿ ಚೆಕ್ ಪೋಸ್ಟ್‌ಗಳನ್ನು ಹಾಕಲಾಗಿದೆ. ತಾಲೂಕಿನ ಒಳಗೂ ಪೊಲೀಸ್ ಇಲಾಖೆ ಚೆಕ್‌ಪೋಸ್ಟ್ ಹಾಕಿದ್ದರೂ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕುತ್ತಿದ್ದರೂ, ಜನ ಸಂಚಾರ ಮಾತ್ರ ಅಧಿಕವಾಗಿದೆ.

ಪಾಸಿಟಿವ್ ಪ್ರಕರಣ ಹೆಚ್ಚುವ ಭೀತಿ: 

ಬೆಳ್ತಂಗಡಿ ತಾಲೂಕಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನನಿತ್ಯ ಶತಕ ಬಾರಿಸುತ್ತಿದ್ದು, ಇದರ ನಿಯಂತ್ರಣಕ್ಕಾಗಿ ದ.ಕ. ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ತಾಲೂಕು ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ತಾಲೂಕಿನಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಾ ಬರುತ್ತಿದ್ದು, ಪೇಟೆಗೆ ಬರುವವರು ಸರಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸಿದರೆ ನಿಯಂತ್ರಣದಲ್ಲಿದ್ದ ಸೋಂಕಿತರ ಸಂಖ್ಯೆ ಸೆಮಿ ಲಾಕ್‌ಡೌನ್‌ನಿಂದಾಗಿ ಏರಿಕೆಯಾಗುವ ಸಂಭವ ಅಲ್ಲಗೆಳೆಯುವಂತಿಲ್ಲ.

ವಸ್ತುಗಳ ಖರೀದಿ: 

ಬೆಳ್ತಂಗಡಿ ‌ಬಳಿ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಎರ್ರಾಬಿರ್ರಿ ಪಾರ್ಕಿಂಗ್ ಮಾಡಿ ಜನತೆ ಖರೀದಿಯಲ್ಲಿ ತೊಡಗಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪ್ರತಿ ಅಂಗಡಿಗಳ ಮುಂಭಾಗದಲ್ಲೂ ಜನ ದಟ್ಟಣೆ ಕಂಡುಬಂತು.

ಗ್ರಾಮೀಣ ಪ್ರದೇಶಗಳಲ್ಲೂ ಓಡಾಟ: 

ಸರಕಾರದ ಮಾರ್ಗಸೂಚಿಯಂತೆ ಇದೀಗ ಕೆಲವೊಂದು ನಿರ್ಬಂಧಗಳ ಜತೆಗೆ ಮಾರ್ಗಸೂಚಿ ಸಡಿಲಿಕೆಯಿಂದಾಗಿ ಜನರ ಹಾಗೂ ವಾಹನಗಳ ಓಡಾಟಕ್ಕೆ ಎಡೆ ಮಾಡಿಕೊಟ್ಟಂತಾಗಿದೆ. ಬೆಳ್ತಂಗಡಿ, ಉಜಿರೆ, ಗುರುವಾಯನಕೆರೆ, ಮಡಂತ್ಯಾರು, ಪುಂಜಾಲಕಟ್ಟೆ, ಅಳದಂಗಡಿ, ಧರ್ಮಸ್ಥಳ, ನಾರಾವಿ, ಕೊಕ್ಕಡ ಮೊದಲಾದ ನಗರ ಪ್ರದೇಶದಲ್ಲಿ ಹಾಗೂ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲೂ ಜನ ಸಂಚಾರ ಅಧಿಕವಾಗಿತ್ತು.

ಮಧ್ಯಾಹ್ನ 1 ಗಂಟೆವರೆಗೆ ವ್ಯವಹಾರ:

ದಿನಸಿ ಅಂಗಡಿಗಳು, ಹಾಲು ಮಾರಾಟದ ಅಂಗಡಿ, ಹಣ್ಣು-ಹಂಪಲು, ತರಕಾರಿ, ಮೀನು, ಬೇಕರಿಗಳು, ಮಾಂಸದಂಗಡಿಗಳು, ವೈನ್ ಶಾಪ್‌ಗಳು, ಹೋಟೆಲ್‌ಗಳು, ಕೃಷಿಗೆ ಸಂಬಂಧಟ್ಟ ಅಂಗಡಿಗಳು, ಯಂತ್ರೋಪಕರಣಗಳ ಬಿಡಿಭಾಗದ ಅಂಗಡಿಗಳು, ಗ್ಯಾರೇಜ್‌ಗಳು, ಕನ್ನಡಕದ ಅಂಗಡಿಗಳು, ಬ್ಯಾಂಕ್, ಅಂಚೆ ಕಚೇರಿ ಮೊದಲಾದ ಅಂಗಡಿಗಳು ಸೆಮಿ ಲಾಕ್‌ಡೌನ್ ಆರಂಭದ ದಿನದಲ್ಲೇ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆ ತೆರೆಯಲಾಗಿತ್ತು. ಬ್ಯಾಂಕ್ ಕಚೇರಿಗಳ ಮುಂಭಾಗದಲ್ಲಿ ಬೆಳಗ್ಗೆ ಸರತಿ ಸಾಲಿನಲ್ಲಿ ವ್ಯವಹಾರಕ್ಕಾಗಿ ಕಾದು ನಿಂತಿದ್ದರು. ಪಡಿತರ ಪಡೆಯುಲು ಫಲಾನುಭವಿಗಳು ಪಡಿತರ ಅಂಗಡಿಯ ಮುಂಭಾಗದಲ್ಲಿ ರಶ್ ಕಂಡು ಬಂತು.

ಇತರೆ ಅಂಗಡಿಗಳ‌ ತೆರೆಯಲು ಆಗ್ರಹ: 

ಕೆಲವೊಂದು ಅಗತ್ಯ ಇರುವ ಅಂಗಡಿಗಳಿಗೆ ಮಾತ್ರ ಅವಕಾಶ ನೀಡಿದ ಹಿನ್ನಲೆಯಲ್ಲಿ ಎಲೆಕ್ಟ್ರಾನಿಕ್ಸ್, ಮೊಬೈಲ್ ಶಾಪ್‌ಗಳು, ಪ್ರಿಂಟಿಗ್ ಪ್ರೆಸ್‌ಗಳು, ಫ್ಯಾನ್ಸಿ ಅಂಗಡಿಗಳು, ಮಳೆಗಾಲದ ಅಗತ್ಯ ವಸ್ತುಗಳ ಅಂಗಡಿಗಳು, ಬುಕ್ ಸ್ಟಾಲ್‌ಗಳು ಸೇರಿದಂತೆ ಇನ್ನಿತರ ಅಂಗಡಿಗಳಿಗೆ ಅವಕಾಶ ನೀಡಬೇಕು ಎಂಬ ಆಗ್ರಹಗಳೂ ಕೇಳಿಬರುತ್ತಿವೆ.

error: Content is protected !!