ಬೆಳ್ತಂಗಡಿ: ದ.ಕ ಜಿಲ್ಲೆಯಲ್ಲಿ ಗುಣಮುಖ ಸಂಖ್ಯೆ ಹೆಚ್ಚಿದ್ದರೂ ಪಾಸಿಟಿವಿಟಿ ರೇಟ್ ಹೆಚ್ಚಿರುವುದರಿಂದ, ಇಳಿಮುಖವಾಗಿಸಲು ಯಾವ ರೀತಿ ಕ್ರಮ ಸೂಕ್ತ ಎಂಬ ದೃಷ್ಟಿಯಿಂದ ವೈದ್ಯಕೀಯ ತಂಡ, ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಜತೆ ಈಗಾಗಲೇ ಪುತ್ತೂರು, ಸುಳ್ಯ ತಾಲೂಕಿನಲ್ಲಿ ಸಮಾಲೋಚನಾ ಸಭೆ ಮುಗಿಸಿದ್ದೇವೆ. ಇದೀಗ ಬೆಳ್ತಂಗಡಿಯಲ್ಲಿ ಕೋವಿಡ್-19 ಕುರಿತು ಎಲ್ಲಾ ಅಧಿಕಾರಿಗಳ ಸಭೆ ಕರೆದು ಪರಿಶೀಲನೆ ಮಾಡಲಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಹೇಳಿದರು.
ಅವರು ಸೋಮವಾರ ಬೆಳ್ತಂಗಡಿ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಕೋವಿಡ್-೧೯ ಕುರಿತು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದರು.
ನಮ್ಮ ಜಿಲ್ಲೆಯಲ್ಲಿ ಕೊರೋನಾ ಸೋಂಕು ಕಡಿಮೆಯಾಗಿದ್ದರೂ ಪರಿಣಾಮಕಾರಿಯಾಗಿ ಪ್ರಕರಣಗಳು ದಿನೇ ದಿನೇ ಕಡಿಮೆಯಾಗುತ್ತಿದ್ದರೂ, ಗುಣಮುಖವಾಗುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಪಾಸಿಟಿವಿಟಿ ರೇಟ್ ಸ್ವಲ್ಪ ಜಾಸ್ತಿ ಇರುವುದರಿಂದ ಅದನ್ನು ಕಡಿಮೆ ಮಾಡುವುದಕ್ಕೆ ನಾವು ಏನು ಪ್ರಯತ್ನ ಮಾಡಲು ಮೆಡಿಕಲ್ ಆಫೀಸರ್, ಸ್ಥಳೀಯ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗಿದೆ.
ಕಳೆದ ಮೂರ‍್ನಾಲ್ಕು ದಿನಗಳಲ್ಲಿ ಸಕ್ರಿಯ ಪರೀಕ್ಷಾ ವರದಿ ಫಲಿತಾಂಶ ತೋರಿಸುತ್ತಿದೆ. ಪಾಸಿಟಿವ್ ಪ್ರಕರಣ ಕಡಿಮೆ ತೋರಿಸುತ್ತಿದೆ. ಶೇ. 24 ಇರುವ ಪಾಸಿಟಿವಿಟಿ ರೇಟ್ ಈಗಾಗಲೇ ಶೇ.13ಕ್ಕೆ ಇಳಿದಿದೆ. ಇನ್ನೂ ಕೂಡ ನಾವು ಕಾರ್ಯತಂತ್ರವನ್ನು ಹೇಗೆ ರೂಪಿಸಿಕೊಳ್ಳಬಹುದು, ಸೋಂಕನ್ನು ಅದಷ್ಟೂ ಬೇಗ ಪತ್ತೆ ಹಚ್ಚಿ ಸಂಪರ್ಕಿತರ ಟ್ರೆಸಿಂಗ್ ಮಾಡಿ, ಅವರಿಗೆ ಟೆಸ್ಟಿಂಗ್ ಮಾಡಿ, ಸರಿಯಾದ ಚಿಕಿತ್ಸೆ ನೀಡಲು ಮೆಡಿಕಲ್ ಆಫೀಸರ‍್ಸ್ ಜತೆ ಚರ್ಚೆ ಮಾಡಿದ್ದೇನೆ. ಈಗ ನಮ್ಮಲ್ಲಿ ಪಾಸಿಟಿವಿಟಿ ರೇಟ್ ಕಡಿಮೆ ಮಾಡುವುದಕ್ಕೆ ಸಕ್ರಿಯ ಪರೀಕ್ಷೆ ಮಾಡಿಸಬೇಕಾಗುತ್ತದೆ. ಸಾಮೂಹಿಕವಾಗಿ ಪರೀಕ್ಷೆ ಮಾಡಿದರೆ ಪಾಸಿಟಿವಿಟಿ ರೇಟ್ ಜಾಸ್ತಿ ಆಗಬಹುದು. ಇದರಿಂದ ಸೋಂಕು ಕಡಿಮೆ ಆಗಬಹುದು ಎಂದರು.
ಒಬ್ಬ ವ್ಯಕ್ತಿ ಆ ಸೋಂಕಿತ ಪ್ರದೇಶಗಳಲ್ಲಿ ಬಹಳಷ್ಟು ಓಡಾಟ ಮಾಡಿರುವ ಅವಕಾಶಗಳಿರುತ್ತದೆ. ವ್ಯಕ್ತಿ ಆ ಭಾಗದ ಅಂಗಡಿಗೆ ಹೋಗಿರಬಹುದು, ಆ ಅಂಗಡಿಯ ಸುತ್ತಮುತ್ತ ಸ್ಥಳೀಯ ಪ್ರದೇಶದಲ್ಲಿ ಸೋಂಕಿತ ವ್ಯಕ್ತಿ ನೇರ ಸಂಪರ್ಕ ಮಾಡಿರದಿದ್ದರೂ, ಪರೋಕ್ಷವಾಗಿ ಸೋಂಕನ್ನು ಹರಡಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಡೆಂಘೆ, ಮಲೇರಿಯಾ ಸಾಂಕ್ರಾಮಿಕ ರೋಗ ಪತ್ತೆ ಹಚ್ಚಲು ರಿಂಗ್ ಸರ್ವೆಲೆನ್ಸ್ ಪ್ರಯೋಗಿಸುತ್ತಿದ್ದೇವೋ ಅದೇ ಮಾದರಿಯಲ್ಲಿ ಸೋಂಕಿತ ಪ್ರದೇಶದ 50-60 ಮನೆಗಳಲ್ಲಿ ವಾಸವಾಗಿರುವರನ್ನು ಪರೀಕ್ಷೆಗೆ ಒಳಪಡಿಸಿ, ಸೋಂಕು ಇಲ್ಲ ಎಂದು ಖಚಿತ ಪಡಿಸಲು ಪ್ರಯತ್ನ ಮಾಡುತ್ತಿದೇವೆ. ಆ ಮಾದರಿ ನಮಗೆ ಫಲಿತಾಂಶವನ್ನು ಕೊಡುತ್ತಿದೆ. ಎಲ್ಲಾ ನಮ್ಮ ಮೆಡಿಕಲ್ ಆಫೀಸರ‍್ಸ್‌ಗಳು, ಗ್ರಾಮಕರಣಿಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಜನಪ್ರತಿನಿಧಿಗಳು ಎಲ್ಲರ ಸಹಕಾರದಿಂದ ಹೆಚ್ಚಿನ ಟೆಸ್ಟ್ ಆಗುತ್ತಿದೆ ಎಂದರು.
ಬೆಳ್ತಂಗಡಿ ತಾಲೂಕಿನಲ್ಲಿ ಕೆಲವಷ್ಟು ಗ್ರಾಮಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಹಾಲು ಉತ್ಪಾದಕರ ಸಂಘ, ಇನ್ನಿತರ ಹಾಟ್‌ಸ್ಪಾಟ್ ಮೇಲೆ ನಿಗಾವಹಿಸಲಾಗುವುದು. ಸೀಲ್‌ಡೌನ್ ಮಾಡಿರುವ ಒಂದೇ ಪ್ರದೇಶದಲ್ಲಷ್ಟೆ ಹೆಚ್ಚಿನ ಪ್ರಕರಣ ಕಂಡುಬಂದಲ್ಲಿ ಅಲ್ಲಿಗಷ್ಟೆ ಸೀಲ್‌ಡೌನ್ ಮಾಡುವಂತೆ ಸ್ಥಳೀಯಾಡಳಿತಕ್ಕೆ ಸೂಚಿಸಲಾಗಿದೆ. ನೆರಿಯಾ ಗ್ರಾಮದಲ್ಲಿ ಸಿಯೋನ್ ಆಶ್ರಮದಲ್ಲಿ ಮಾತ್ರ ಪಾಸಿಟಿವ್ ಪ್ರಕರಣಗಳಿವೆ. ಆದ್ದರಿಂದ ನೆರಿಯಾ ಸೀಲ್‌ಡೌನ್ ತೆರವುಗೊಳಿಸುವ ಕುರಿತು ಚರ್ಚಿಸಲಾಗುವುದು.
ಕೋವಿಡ್ ಜತೆಗೆ ಮಳೆಹಾನಿ ಪ್ರದೇಶದ ಕಡೆಗೂ ಗಮನ ಹರಿಸಬೇಕಿದ್ದರಿಂದ ತಾಲೂಕು ಆಡಳಿತಕ್ಕೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಶಾಸಕ ಹರೀಶ್ ಪೂಂಜ, ಜಿ.ಪಂ. ಸಿಇಒ ಡಾ. ಕುಮಾರ್, ಪುತ್ತೂರು ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್, ತಾಲೂಕು ಕೋವಿಡ್ ನೋಡೆಲ್ ಅಧಿಕಾರಿ ವೆಂಕಟೇಶ್, ತಾಲೂಕು ಆರೋಗ್ಯಧಿಕಾರಿ ಡಾ. ಕಲಾಮಧು, ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ. ವಿದ್ಯಾವತಿ, ತಹಶೀಲ್ದಾರ್ ಮಹೇಶ್ ಜೆ., ತಾ.ಪಂ. ಇಒ ಕುಸುಮಾಧರ್ ಬಿ. ಮತ್ತಿತರ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.