ಲಸಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ನಾಟಕವಾಡುತ್ತಿದೆ: ಹರೀಶ್ ಕುಮಾರ್

ಬೆಳ್ತಂಗಡಿ: ‘ರಾಜ್ಯ, ಕೇಂದ್ರ ಸರ್ಕಾರಗಳು ಕೊರೊನಾ ನಿಯಂತ್ರಿಸುವಲ್ಲಿ ಮತ್ತು ಲಸಿಕೆ ಹಂಚಿಕೆಯಲ್ಲಿ ಸಂಪೂರ್ಣ ವಿಫಲವಾಗಿದ್ದು, ದುರ್ಬಲ, ಬೇಜವಾಬ್ದಾರಿಯಿಂದ ಕೂಡಿದ ಪ್ರಚಾರ ಪ್ರಿಯ ಸರ್ಕಾರಗಳಾಗಿವೆ. 18 ರಿಂದ 44 ವರ್ಷದವರಿಗೆ ಉಚಿತ ಲಸಿಕೆ ಸುಪ್ರೀಂ ಕೋರ್ಟಿನ ಆದೇಶವಾಗಿದ್ದು, ಅದಕ್ಕಾಗಿ ಸುಪ್ರೀಂಕೋರ್ಟಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್ ಹೇಳಿದರು.

ಅವರು ಬುಧವಾರ ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ಲಸಿಕೆ ಉತ್ಪಾದನಾ ಕಂಪೆನಿಗಳಿಗೆ ಆರಂಭದಲ್ಲಿಯೇ ಮುಂಗಡ ಹಣ ನೀಡುತ್ತಿದ್ದರೆ ಲಸಿಕೆಯ ಕೊರತೆ ಉಂಟಾಗುತ್ತಿರಲಿಲ್ಲ.ಬಿಜೆಪಿಗರು ಲಸಿಕೆಗೆ ಕಾಂಗ್ರೆಸ್ ಅಡ್ಡಿ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿಗಳು ಮೊದಲು ಲಸಿಕೆ ತೆಗೆದುಕೊಳ್ಳಬೇಕು ಹೊರತು ಡಿ ಗ್ರೂಪ್ ನೌಕರರಿಗೆ ಅದನ್ನು ನೀಡಿ ಪ್ರಯೋಗಿಸುವದಲ್ಲ ಎಂದು ಕಾಂಗ್ರೆಸ್ ಹೇಳಿದ್ದು. ದೇಶದ ಮುಂಚೂಣಿ ನಾಯಕರು ಮೊದಲು ಲಸಿಕೆ ತೆಗೆದುಕೊಳ್ಳುತ್ತಿದ್ದರೆ ಜನರಿಗೆ ಲಸಿಕೆಯ ಮೇಲೆ ನಂಬಿಕೆ ಬಂದು ಆರಂಭದಲ್ಲಿಯೇ ಎಲ್ಲರೂ ಲಸಿಕೆ ಪಡೆಯಲು ಅನುಕೂಲವಾಗುತ್ತಿತ್ತು. ಸರ್ಕಾರ ಲಸಿಕೆಯ ಜಾಗೃತಿ ಮೂಡಿಸುವಲ್ಲಿ ವಿಫಲವಾಗಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕು ಎಂದರು.

ಲಸಿಕೆಗಾಗಿ ಬೆಳಿಗ್ಗೆ 3 ಗಂಟೆಗೆ ಜನ ಬಂದು ಕ್ಯೂನಲ್ಲಿ ನಿಲ್ಲುತ್ತಿದ್ದಾರೆ. 250 ರಿಂದ 300 ಜನರಿಗೆ ಟೋಕನ್ ನೀಡಿದ ಬಳಿಕ 8 ಗಂಟೆಯ ಹೊತ್ತಿಗೆ ಬೇರೆಯೇ ಜನ ಟೋಕನ್ ಹಿಡಿದುಕೊಂಡು ಬಂದು ಲಸಿಕೆ ಪಡೆದುಕೊಂಡು ಹೋಗುತ್ತಾರೆ. ಕ್ಯೂ ನಿಂತವರು ಲಸಿಕೆ ಸಿಗದೆ ಹಿಂದಿರುಗುವ ಪರಿಸ್ಥಿತಿ ನಿರ್ಮಾಣವಾಗಿರುವುದು ವ್ಯವಸ್ಥೆಯ ದುರಂತವಾಗಿದೆ. ಹಿಂದೆ ಜನ ಲಸಿಕೆ ಪಡೆದುಕೊಳ್ಳದೇ ಇರಲು, ಇಂದು ಲಸಿಕಾ ಕೇಂದ್ರದಲ್ಲಿ ಜನ ಬಂದು ಕ್ಯೂ ನಿಲ್ಲಲು ಕಾಂಗ್ರೆಸ್ ಕಾರಣ ಎನ್ನುತ್ತಾರೆ. ಹಾಗಾದರೆ ಜನ ಬಿಜೆಪಿಯ ಮೇಲೆ ಭರವಸೆ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದವರ ಮಾತನ್ನು ಹೆಚ್ಚು ನಂಬುತ್ತಾರೆ ಎಂದಾಯಿತು ಎಂದರು.

ಬೆಡ್ ಹಗರಣದಲ್ಲಿ, ಲಸಿಕೆ ಮಾರಾಟದಲ್ಲಿ ಶಾಸಕರಾದಿಯಾಗಿ ಬಿಜೆಪಿ ಮುಖಂಡರು ಇದ್ದಾರೆ. ದೇಶದ ಜನತೆಗೆ ಉಚಿತ ಲಸಿಕೆ ನೀಡಲು ಬೇಕಾಗಿರುವುದು ಕೇವಲ 65 ಸಾವಿರ ಕೋಟಿ. 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆಯಲ್ಲಿ 65 ಸಾವಿರ ಕೋಟಿಯನ್ನು ಜನರ ಆರೋಗ್ಯಕ್ಕಾಗಿ ನೀಡುತ್ತಿದ್ದರೆ ಇಂದು ಈ ಹಾಹಾಕಾರ ಉಂಟಾಗುತ್ತಿರಲಿಲ್ಲ ಎಂದರು.

ಇಂದು ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಅವೈಜ್ಞಾನಿಕ ಲಾಕ್‍ಡೌನ್ ಮತ್ತು ಅಸಮರ್ಪಕ ಪ್ಯಾಕೇಜ್ ಘೋಷಣೆಯಾಗಿದೆ. ಬ್ಯಾಡ್ಜ್ ಇಲ್ಲದ ರಿಕ್ಷಾ ಚಾಲಕನಿಗೆ ಪ್ಯಾಕೇಜ್ ಪರಿಹಾರ ಇಲ್ಲ. ಜನ ಕೆಲಸವಿಲ್ಲದೆ, ಊಟಕ್ಕಿಲ್ಲದೆ ಕಂಗಾಲಾಗಿದ್ದಾರೆ. ಸರ್ಕಾರ ಮನೆಮನೆಗೆ ಫುಡ್ ಪ್ಯಾಕೇಜ್ ಕೊಡುವ ಕೆಲಸವನ್ನು ಮಾಡಬೇಕಿತ್ತು. ಮನೆಯಿಂದ ಬ್ಯಾಂಕ್ ಅಗತ್ಯ ಕೆಲಸದಲ್ಲಿ ಬಂದ ವ್ಯಕ್ತಿಯ ವಾಹನಗಳನ್ನು ಹಿಂದಿರುಗುವಾಗ ಪೊಲೀಸರು ಮುಟ್ಟುಗೋಲು ಹಾಕಿಕೊಳ್ಳವಂತಾಗಿದೆ.

ಹಾಸಿಗೆ, ಆಮ್ಲಜನಕ, ಲಸಿಕೆ ಎಲ್ಲಾ ವಿಚಾರಗಳಿಗೆ ಕೋರ್ಟು ಸರ್ಕಾರಕ್ಕೆ ಆದೇಶ ನೀಡುವಂತಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಜಿಎಸ್‍ಟಿ ಪರಿಹಾರ, ನೆರೆ, ಬರ ಪರಿಹಾರ ಯಾವುದೂ ಬಂದಿಲ್ಲ. ರಾಜ್ಯದ 25 ಬಿಜೆಪಿ ಸಂಸದರು ಮೋದಿ ಮುಂದೆ ತುಟಿ ಬಿಚ್ಚಿ ಮಾತನಾಡುತ್ತಿಲ್ಲ. ಪರಿಹಾರ ತರದೇ ಇರುವುದರ ಹಿಂದೆ ಯಡಿಯೂರಪ್ಪರನ್ನು ಅಧಿಕಾರದಿಂದ ಕೆಳಗಿಳಿಸುವ ಮರ್ಮವೂ ಇರಬಹುದು ಎಂದರು.

ವಸ್ತುಗಳ ಬೆಲೆಏರಿಕೆ ತಾಂಡವವಾಡುತ್ತಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಕಡಿಮೆಯಾಗಿದ್ದರೂ ದೇಶದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರುತ್ತಲೇ ಇದೆ. ಚುನಾವಣೆ ಸಂದರ್ಭ ರೂ. 50 ಕ್ಕೆ ಪೆಟ್ರೋಲ್ ಕೊಡುತ್ತೇವೆ ಎಂದು ಬಿಜೆಪಿಗರು ಹೇಳಿದ್ದು ಇಂದು ನಿಜವಾಗಿದೆ. ಅವರು ಅರ್ಧ ಲೀಟರ್ ಪೆಟ್ರೋಲ್‍ಗೆ ಹೇಳಿದ್ದು ಎಂದು ಜನ ಅರ್ಥ ಮಾಡಿಕೊಳ್ಳಬೇಕು ಎಂದು ವ್ಯಂಗವಾಡಿದರು.

ಶಾಸಕ ಪೂಂಜ ತಾಲ್ಲೂಕಿಗೆ ರೂ.833 ಕೋಟಿ ಅನುದಾನ ತಂದಿದ್ದೇನೆ ಎಂದು ಅಬ್ಬರದ ಪ್ರಚಾರ ನೀಡಿದ್ದಾರೆ. ಆದರೆ ಲೆಕ್ಕ ಮಾಡುವಾಗ ಸಿಕ್ಕಿದ್ದು ಕೇವಲ 600 ಕೋಟಿ. ಅದರಲ್ಲಿ 300 ಕೋಟಿಯಷ್ಟು ಮಾಜಿ ಶಾಸಕ ಕೆ. ವಸಂತ ಬಂಗೇರರ ಅವಧಿಯಲ್ಲಿ ತಾಲ್ಲೂಕಿಗೆ ಬಂದಿರುವುದು. ಎಲ್ಲಾ ಪಕ್ಷದ ಜಿಲ್ಲಾ ಪಂಚಾಯಿತಿಯ ಅನುದಾನವನ್ನು ಶಾಸಕರು ತಾನು ತಂದದ್ದು ಎಂದು ಘೋಷಿಸಿಕೊಂಡಿದ್ದಾರೆ. ಸುಳ್ಳು ಅಂಕಿ-ಅಂಶಗಳಿಂದ ಜನರನ್ನು ಮೋಸ ಮಾಡಲು ಸಾಧ್ಯವಿಲ್ಲ. ಸತ್ಯ ಯಾವತ್ತಾದರೂ ಹೊರ ಬರುತ್ತದೆ ಎಂದರು.

ರಾಜ್ಯ ಕಾಂಗ್ರೆಸ್ ವತಿಯಿಂದ ಲಸಿಕೆಗೆ 100 ಕೋಟಿ ಖರ್ಚು ಮಾಡಲು ಸಿದ್ಧವಿದೆ. ಆದರೆ ಸರ್ಕಾರ ಅನುಮತಿ ನೀಡಿಲ್ಲ. ಜನರು ಲಸಿಕೆಗಾಗಿ ಹಾತೊರೆಯುತ್ತಿರುವಾಗ ಅನುಮತಿ ನೀಡದೇ ಇರುವ ಸರ್ಕಾರದ ನಡೆಯನ್ನು ಜನ ಕೂಡ ಗಮನಿಸುತ್ತಾರೆ. ಜಿಲ್ಲಾ ಕಾಂಗ್ರೆಸ್ ವತಿಯಿಂದ 13 ಉಚಿತ ಅಂಬ್ಯುಲೆನ್ಸ್, 1 ಕೋವಿಡ್ ಕೇರ್ ಸೆಂಟರ್ ಈಗಾಗಲೇ ಕಾರ್ಯಾಚರಿಸುತ್ತಿವೆ. ಹಲವಾರು ಫುಡ್ ಕಿಟ್ ಮತ್ತು ಮೆಡಿಸಿನ್ ಕಿಟ್‍ಗಳನ್ನು ವಿತರಿಸಿದ್ದೇವೆ. ಜಿಲ್ಲಾ ಕಾಂಗ್ರೆಸ್‍ನ ಯುವಕರು ಈಗಾಗಲೇ 65 ಶವ ಸಂಸ್ಕಾರ ಮಾಡಿದ್ದಾರೆ. ಜೂ. 20ರಂದು ಬೆಳ್ತಂಗಡಿಯಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ ಎಂದರು.

ಪಿಯುಸಿ ಪರೀಕ್ಷೆ ರದ್ದು ಪಡಿಸಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದು ಅವೈಜ್ಞಾನಿಕ ಕ್ರಮ. ಹಿರಿಯ ವಿದ್ಯಾರ್ಥಿಗಳನ್ನು ಪಾಸ್ ಮಾಡಿ ಕಿರಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಹಾಸ್ಯಾಸ್ಪದ. ರದ್ದು ಮಾಡುವುದಾದರೆ ಎರಡನ್ನು ರದ್ದು ಮಾಡಬೇಕು. ಪರೀಕ್ಷೆ ಮಾಡುವುದಾದರೆ ಎರಡನ್ನು ಮಾಡಬೇಕು. ಬಹಳ ಪ್ರಮುಖವಾದ ಜನರ ಆರೋಗ್ಯ ಮತ್ತು ಮಕ್ಕಳ ಶಿಕ್ಷಣವನ್ನು ಈ ಸರ್ಕಾರ ಸಂಪೂರ್ಣವಾಗಿ ಹಾಳು ಮಾಡಿ ಬಿಟ್ಟಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಶೈಲೇಶ್ ಕುಮಾರ್, ಗ್ರಾಮೀಣ ಘಟಕದ ಅಧ್ಯಕ್ಷ ರಂಜನ್ ಜಿ ಗೌಡ, ಮುಖಂಡರಾದ ಅಬ್ದುಲ್ ರಹಮಾನ್ ಪಡ್ಪು, ಜಗಧೀಶ್ ಡಿ, ಬಿ.ಕೆ.ವಸಂತ್, ನಾಗರಾಜ ಲಾಯಿಲ, ಅನೀಲ್ ಪೈ, ಪವನ್ ಕುಮಾರ್, ಮೆಹಬೂಬ್, ಅಜಯ್, ಸಂದೀಪ್ ಇದ್ದರು.

error: Content is protected !!