ಕೊರೋನಾ ತಡೆಗೆ ಕೊಯ್ಯೂರು ಗ್ರಾ.ಪಂ. ದಿಟ್ಟ ಹೆಜ್ಜೆ: ಗ್ರಾಮಸ್ಥರ ಸುರಕ್ಷತೆಗಾಗಿ ಸ್ವ-ಪ್ರೇರಿತ ಸೀಲ್ ಡೌನ್!: ಪೊಲೀಸರ ಅನುಮತಿಯೊಂದಿಗೆ 8 ಕಡೆ ಚೆಕ್ ಪೋಸ್ಟ್: ಗ್ರಾಮ ಸಂಪರ್ಕಿಸುವ ರಸ್ತೆಗಳ ಮುಚ್ಚಿ ಕಾವಲು ಪಡೆಯಿಂದ ಗಸ್ತು!: ತಾಲೂಕಿಗೆ ಮಾದರಿಯಾದ ಗ್ರಾಮ ಪಂಚಾಯತಿ

ಬೆಳ್ತಂಗಡಿ: ಕಣ್ಣಿಗೆ ಕಾಣದ ಕೊರೊನಾ ಎಂಬ ಮಹಾಮಾರಿ ಇದೀಗ ಪಟ್ಟಣಗಳಿಂದಲೂ ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿ ಹರಡುತಿದ್ದು ಇದಕ್ಕೆ ಕಡಿವಾಣ ಹಾಕಲು ಕೆಲವೊಂದು ಗ್ರಾಮಗಳು ಸೀಲ್ ಡೌನ್ ಮಾಡಿ ತನ್ನ ಗ್ರಾಮವನ್ನು ಕೊರೊನಾ ಮುಕ್ತವಾಗಿಸಿಕೊಳ್ಳಲು ಸ್ವಯಂ ಪ್ರೇರಿತವಾಗಿ ತೊಡಗಿಸಿಕೊಂಡಿವೆ. ಇದೇ ರೀತಿಯ ಕಾರ್ಯಕ್ರಮ ವನ್ನು ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮ ಅಳವಡಿಸಿಕೊಂಡು ಉತ್ತಮ ಸಂದೇಶವನ್ನು ಸಮಾಜಕ್ಕೆ ನೀಡುತ್ತಿದೆ.

ಕೊಯ್ಯೂರು ಗ್ರಾಮವನ್ನು ಸಂಪರ್ಕಿಸುವ ಮುಖ್ಯವಾಗಿ ಕೊಪ್ಪದ ಬೈಲು, ಮಲೆಬೆಟ್ಟು, ಪೆಜಕ್ಕಲ, ಮಲೆಬೆಟ್ಟು ಗಣಪತಿ ದೇವಸ್ಥಾನ ರಸ್ತೆ, ಉಣ್ಣಾಲು, ಎರುಕಡಪ್ಪು,ಬಜಿಲ, ಸೀಲ್ ಡೌನ್ ಆಗಿದ್ದು ಅದೂರ್ ಪೆರಾಲ್ ಸೇರಿ ಎಂಟು ಕಡೆಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ಸಂಚಾರಕ್ಕೆ ನಿಷೇಧಿಸಲಾಗಿದೆ.ಇದಕ್ಕೆ ಉತ್ತಮ ರೀತಿಯಲ್ಲಿ ಸಹಕಾರ ನೀಡುತಿದ್ದಾರೆ. ಕಳೆದ ಕೆಲವು ದಿನಗಳಿಂದ ಗ್ರಾಮದಲ್ಲಿ ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ತುರ್ತು ಸಭೆ ನಡೆಸಿ ಗ್ರಾಮಸ್ಥರ ಸುರಕ್ಷತೆಯ ದೃಷ್ಟಿಯಿಂದ 7 ದಿನ ಇಡೀ ಗ್ರಾಮವನ್ನೇ ಸೀಲ್ ಡೌನ್ ಮಾಡುವ ಬಗ್ಗೆ ನಿರ್ಧಾರ ಕೈಗೊಂಡರು.ಇದಕ್ಕೆ ಗ್ರಾಮಸ್ಥರಿಂದಲೂ ಉತ್ತಮ ಬೆಂಬಲ ದೊರೆಯಿತು. ಪೊಲೀಸ್ ಇಲಾಖೆಯ ಅನುಮತಿಯೊಂದಿಗೆ ಇದೀಗ ಸೀಲ್ ಡೌನ್ ಅಗಿದೆ.

ಗ್ರಾಮಸ್ಥರೇ ಕಾವಲು

ತಮ್ಮ ಗ್ರಾಮದ ಜನರ ರಕ್ಷಣೆ ನಮ್ಮ ಜವಾಬ್ದಾರಿ ಎನ್ನುವಂತೆ ಗ್ರಾಮವನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಮುಚ್ಚಲಾಗಿದೆ. ಯಾವುದೇ ಕಾರಣಕ್ಕೂ ತುರ್ತು ಅವಶ್ಯಕತೆಗೆ ಹೊರತು ಪಡಿಸಿ ಇನ್ನು ಯಾವುದೇ ಕಾರಣಕ್ಕೂ ಪ್ರವೇಶ ನಿಷಿದ್ಧ ಗ್ರಾಮಸ್ಥರು ಕೂಡ ಹೊರ ಹೋಗುವಂತಿಲ್ಲ ಅದಕ್ಕಾಗಿ ಅಲ್ಲಲ್ಲಿ ಬ್ಯಾರಿಕೇಡ್ ಅಳವಡಿಸಿ ವಾರ್ಡಿನಲ್ಲಿ ರಚನೆಯಾದ ತಂಡದಿಂದ ಕಾವಲು ಕಾಯುವ ಮೂಲಕ ಕೊರೊನಾ ಮುಕ್ತ ಕೊಯ್ಯೂರು ನಿರ್ಮಾಣದ ಕನಸನ್ನು ಕಾಣುತಿದ್ದಾರೆ.

ಈ ಬಗ್ಗೆ ಸಾರ್ವಜನಿಕರು ಪ್ರತಿಕ್ರಿಯಿಸಿ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಕೊಯ್ಯೂರು ಗ್ರಾಮ ಪಂಚಾಯತ್ ಮಹತ್ವದ ಹೆಜ್ಜೆಯಿರಿಸಿದ್ದು ಗ್ರಾಮದ ಜನರ ಸುರಕ್ಷತೆಯ ಹಿನ್ನೆಲೆಯಲ್ಲಿ ಅತ್ಯುತ್ತಮ ಕಾರ್ಯವಾಗಿದೆ ಆಯಾಯ ವಾರ್ಡ್ ಗಳಲ್ಲಿ ಸ್ವಯಂ ಸೇವಕರ ತಂಡ ರಚಿಸಿಕೊಂಡು ಬಹಳ ವ್ಯವಸ್ಥಿತ ರೀತಿಯಲ್ಲಿ ಗ್ರಾಮವನ್ನು ರಕ್ಷಿಸುವಂತಹ ಕೆಲಸವನ್ನು ಮಾಡುತಿದ್ದಾರೆ. ಅದರಲ್ಲೂ ಕೊಯ್ಯೂರಿನ ಬೀಟ್ ಪೊಲೀಸ್ ವೃಷಭ್ ಇವರು ದಿನದ ಹೆಚ್ಚಿನ ಸಮಯವನ್ನು ಮೀಸಲಿರಿಸಿ ಗ್ರಾಮದ 8 ಕಡೆಗಳಲ್ಲಿರುವ ಚೆಕ್ ಪೋಸ್ಟ್ ಗಳ ಕಾರ್ಯವನ್ನು ವ್ಯವಸ್ಥಿತ ರೀತಿಯಲ್ಲಿ ಗಮನಿಸುತಿದ್ದಾರೆ. ಇವರ ಕಾರ್ಯಕ್ಕೆ ಇಡೀ ಕೊಯ್ಯೂರು ಗ್ರಾಮದ ಜನರು ಶ್ಲಾಘನೆ ವ್ಯಕ್ತಪಡಿಸುತಿದ್ದಾರೆ. ಕಣ್ಣಿಗೆ ಕಾಣದ ಸೋಂಕು ವಿರುದ್ದ ಹಾಗೂ ಗ್ರಾಮದ ಜನರ ಆರೋಗ್ಯದ ಕಡೆ ಕಾಳಜಿ ವಹಿಸಿದ ಗ್ರಾಮ ಪಂಚಾಯತ್ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.ಇವರ ಈ ಕಾರ್ಯ ಎಲ್ಲರಿಗೂ ಮಾದರಿಯಾಗಿ ಕೊರೊನಾ ಮುಕ್ತ ಸಮಾಜ ನಿರ್ಮಾಣವಾಗಲಿ ಎಂಬುವುದು ಪ್ರಜಾಪ್ರಕಾಶ ನ್ಯೂಸ್ ನ ಹಾರೈಕೆಯಾಗಿದೆ.

error: Content is protected !!