ಬೆಳ್ತಂಗಡಿ: ಧಾರ್ಮಿಕ ಪರಿಷತ್ ಸಮಿತಿ ವತಿಯಿಂದ ರಾಜ್ಯದ ಸಿ. ದರ್ಜೆ ದೇವಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರ ಮಹತ್ವಾಕಾಂಕ್ಷಿ ಯೋಜನೆಯಂತೆ ಆಹಾರ ಸಾಮಾಗ್ರಿಗಳನ್ನು ನೀಡಲಾಗುತ್ತಿದ್ದು, ತಾಲೂಕಿನ 40 ದೇವಸ್ಥಾನಗಳಿಗೆ ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ನೇತೃತ್ವದಲ್ಲಿ ವಿತರಿಸಲಾಗುತ್ತಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.
ಅವರು ಬುಧವಾರ ದ.ಕ.ಜಿಲ್ಲಾ ಧಾರ್ಮಿಕ ಪರಿಷತ್ ಸಮಿತಿಯ ಮಾರ್ಗದರ್ಶನದಲ್ಲಿ ಕೊಕ್ಕಡದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವತಿಯಿಂದ 40 ಸಿ ದರ್ಜೆಯ ಸುಮಾರು 130 ಕ್ಕು ಹೆಚ್ಚು ಅರ್ಚಕರು ಮತ್ತು ಸಿಬ್ಬಂದಿಗಳಿಗೆ ಹಾಗೂ 22 ಮಂದಿ ಆಶಾ ಕಾರ್ಯಕರ್ತೆ ಯರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದರು.
ಕೊರೊನ ಮಹಾಮಾರಿಯಿಂದಾಗಿ ದೇವಾಲಯಗಳಲ್ಲಿ ಆದಾಯ ಇಲ್ಲವಾಗಿದೆ. ದೇವಾಲಯಗಳಲ್ಲಿ ಪೂಜಾ ಕೈಂಕರ್ಯ ನಿಲ್ಲಬಾರದು ಎಂಬ ನೆಲೆಯಲ್ಲಿ ಹಾಗೂ ಅಲ್ಲಿ ದುಡಿಯುವವರ ಪರಿಸ್ಥಿತಿ ಕಷ್ಟಕರವಾಗಿದ್ದು ಈ ನಿಟ್ಟಿನಲ್ಲಿ ಧಾರ್ಮಿಕ ಧತ್ತಿ ಸಚಿವರು ರಾಜ್ಯದ ಎಲ್ಲಾ ಸಿ ಗ್ರೇಡ್ ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಆಹಾರ ಸಾಮಾಗ್ರಿ ನೀಡುವಂತೆ ಎಲ್ಲಾ ಎ.ಗ್ರೇಡ್ ದೇವಸ್ಥಾನಗಳಿಗೆ ಆದೇಶ ನೀಡಿದ್ದರು. ಅದರಂತೆ ಧಾರ್ಮಿಕ ಪರಿಷತ್ ದ.ಕ. ಜಿಲ್ಲಾ ಸಮಿತಿ ಸದಸ್ಯ ದೇವೆಂದ್ರ ಹೆಗ್ಡೆ ನೇತೃತ್ವದಲ್ಲಿ ತಾಲೂಕಿನಲ್ಲಿ ಆಹಾರ ಕಿಟ್ ವಿತರಿಸಲಾಗುತ್ತಿದೆ. ಆಹಾರ ಕಿಟ್ ವಿತರಣೆಯ ಜವಾಬ್ದಾರಿ ವಹಿಸಿಕೊಂಡ ದೇವೇಂದ್ರ ಹೆಗ್ಗೆ ಹಾಗೂ ಹರೀಶ್ ರಾವ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದ ಶಾಸಕರು, ಸ್ವಾಸ್ಥ್ಯ ಆರೋಗ್ಯದ ದೃಷ್ಟಿಯಿಂದ ಕೊರೊನ ಮುಕ್ತವಾಗಿಸಲು ಹಾಗೂ ಕಷ್ಟದ ಕಾಲದಲ್ಲೂ ಸೌತಡ್ಕ ದೇವಸ್ಥಾನ ಸೇವಾ ಕೈಂಕರ್ಯ ಶ್ಲಾಘನೀಯ ಎಂದರು.
ಧಾರ್ಮಿಕ ಪರಿಷತ್ ಸಮಿತಿ ದ.ಕ.ಜಿಲ್ಲಾ ಸದಸ್ಯ ದೇವೇಂದ್ರ ಹೆಗ್ಡೆ ಮಾತನಾಡಿ, ಧಾರ್ಮಿಕ ಧತ್ತಿ ಹಾಗೂಮುಜರಾಯಿ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರ ಚಿಂತನೆಯಲ್ಲಿ ಧಾರ್ಮಿಕ ಪರಿಷತ್ ವತಿಯಿಂದ ಜಿಲ್ಲೆಯ ಸಿ ದರ್ಜೆ ದೇವಸ್ಥಾನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರಿಗೆ, ಪರಿಚಾರಕರಿಗೆ ಹಾಗೂ ಸಿಬ್ಬಂದಿಗಳಿಗೆ ಅಕ್ಕಿ ಸಹಿತ ದಿನಸಿ ಸಾಮಾಗ್ರಿಗಳ ವಿತರಣೆ ಕೆಲಸ ನಡೆಯುತ್ತಿದೆ. ತಾಲೂಕಿನ ಶಾಸಕ ಹರೀಶ್ ಪೂಂಜ ಅವರ ಮಾರ್ಗದರ್ಶನದಲ್ಲಿ 40 ಸಿ ದರ್ಜೆಯ ಸುಮಾರು 130 ಮಂದಿಗೆ ಅಹಾರ ಕಿಟ್ ನ್ನು ಸೌತಡ್ಕ ದೇವಸ್ಥಾನದಿಂದ ವಿತರಿಸಲಾಗುತ್ತಿದೆ. ಕೊರೊನ ವಾರಿಯರ್ಸ್ ಕೊಕ್ಕಡ ಹಾಗೂ ಹತ್ಯಡ್ಕ ಪ್ರಾ.ಆರೋಗ್ಯ ಕೇಂದ್ರ ವ್ಯಾಪ್ತಿಯ 22 ಮಂದಿ ಆಶಾ ಕಾರ್ಯಕರ್ತೆಯರಿಗೂ ಆಹಾರ ಕಿಟ್ ನೀಡುತ್ತಿದ್ದೇವೆ.
ತಾಲೂಕಿನಲ್ಲಿ 58 ಸಿ ದರ್ಜೆ ದೇವಸ್ಥಾನ ಹಾಗೂ 7 ಬಿ ದರ್ಜೆ ದೇವಸ್ಥಾನಗಳಿದ್ದು ಇದೀಗ 40 ದೇವಸ್ಥಾನವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಉಳಿದಂತೆ ಆಡಳಿತ ಸಮಿತಿ ರಚನೆ ಆಗದೆ ಇರುವುದರಿಂದ ವಿತರಣೆ ಸಾಧ್ಯವಾಗಿಲ್ಲ. ಅದನ್ನು ಕೂಡಾ ಗಮನದಲ್ಲಿಟ್ಟುಕೊಂಡು ಮುಂದಿನ ದಿನದಲ್ಲಿ ವಿತರಣೆ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದರು.
ಸೌತಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣ ಭಟ್, ಕೊಕ್ಕಡ ಸಿ.ಎ.ಬ್ಯಾಂಕಿನ ಅಧ್ಯಕ್ಷ ಕುಶಾಲಪ್ಪ ಗೌಡ, ಕೊಕ್ಕಡ ಗ್ರಾ.ಪಂ. ಅಧ್ಯಕ್ಷ ಯೋಗೀಶ್, ಅರಸಿನಮಕ್ಕಿ ಗ್ರಾ.ಪಂ. ಅಧ್ಯಕ್ಷ ನವೀನ್ ಹತ್ಯಡ್ಕ, ಸೌತಡ್ಕ ದೇವಸ್ಥಾನದ ಆಡಳಿತ ಸಮಿತಿ ಟ್ರಸ್ಟಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ ಸ್ವಾಗತಿಸಿ, ಟ್ರಸ್ಟಿ ಪುರಂದರ ಗೌಡ ವಂದಿಸಿದರು. ದೇವಳದ ಕಾರ್ಯನಿರ್ವಾಹಣಾಧಿಕಾರಿ ಪಾವಡಪ್ಪ ದೊಡ್ಡಮನಿ ಕಾರ್ಯಕ್ರಮ ನಿರ್ವಹಿಸಿದರು.