ಬೆಳ್ತಂಗಡಿ: ಕೇಂದ್ರಸರಕಾರ ಕಳೆದ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಕಾರ್ಮಿಕ ರೈತ ವಿರೋಧಿಯಾಗಿರುವ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡುವ ಮೂಲಕ ಅನ್ನದಾತ ರೈತರ ಹಾಗೂ ದೇಶದ ಸಂಪತ್ತು ಸೃಷ್ಟಿಸುವ ಕಾರ್ಮಿಕರ ಬೆನ್ನೆಲುಬು , ಪಕ್ಕೆಲುಬು ಮುರಿಯಲು ಪ್ರಯತ್ನಸಿದೆ. ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ , ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಆರೋಪಿಸಿದರು.
ಅವರು ಸಿಪಿಐಎಂ ಹಾಗೂ ರೈತಸಂಘಟನೆಗಳ ನೇತೃತ್ವದಲ್ಲಿ ಬೆಳ್ತಂಗಡಿಯಲ್ಲಿ ಬ್ಲಾಕ್ ಡೇ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ಪ್ರತಿಭಟಿಸಿ ರೈತರು ದೆಹಲಿಯ ನಾಲ್ಕು ಪ್ರಮುಖ ಕಡೆಗಳಲ್ಲಿ ನಡೆಸುತ್ತಿರುವ ಐತಿಹಾಸಿಕ ಹೋರಾಟಕ್ಕೆ 6 ತಿಂಗಳಾಗಿದೆ. ಆದರೆ ಇಂದಿಗೂ ಕೇಂದ್ರ ಸರ್ಕಾರ ನರಸತ್ತವರಂತೆ ವರ್ತಿಸುತ್ತಿದೆ. ಯಾವುದೇ ಕಾರಣಕ್ಕೂ ಕಾಯ್ದೆಯನ್ನು ಹಿಂಪಡೆಯುವ ವರೆಗೆ ರೈತರ ಹೋರಾಟ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಕೇಂದ್ರ ಸರಕಾರ ಕೊರೋನಾ ಎದುರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಸರಕಾರದ ವೈಫಲ್ಯದಿಂದಾಗಿ ಜನಸಾಮಾನ್ಯರು ಜೀವ ಕಳೆದುಕೊಳ್ಳಬೇಕಾಗಿ ಬರುತ್ತಿದೆ. ಇದೀಗ ರೋಗದ ವಿರುದ್ದ ಹಾಗೂ ಸರಕಾರದ ವಿರುದ್ದ ಒಟ್ಟಿಗೆ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.
ಕೃಷಿಮಸೂದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ,ಕೊರೋನಾ ನಿಭಾಯಿಸುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.
ಬೆಳ್ತಂಗಡಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ಶಿವಕುಮಾರ್ ಎಸ್. ಎಂ , ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಹರಿದಾಸ್ ಎಸ್. ಎಂ , ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ ಶೇಖರ್ ಎಲ್ , ಜನವಾದಿ ಮಹಿಳಾ ಸಂಘಟನೆಯ ಸುಕನ್ಯಾ ಹೆಚ್ , ಆಶಾ ಸುಜೀತ್ , ಡಿವೈಎಫ್ಐ ಮುಖಂಡರಾದ ಸುಜೀತ್ ಉಜಿರೆ , ಭರತ್ ಕುಮಾರ್, ಎಸ್ಎಫ್ಐ ಮುಖಂಡ ಸುಹಾಸ್ ಬೆಳ್ತಂಗಡಿ ಉಪಸ್ಥಿತರಿದ್ದರು.