ನಾಗರಿಕ ಸಮಾಜದಲ್ಲಿ ಅನಾಗರಿಕ ವರ್ತನೆ ತೋರಿದ ಪೊಲೀಸ್ ಅಧಿಕಾರಿಯನ್ನು ಜೈಲಿಗಟ್ಟಿ : ಚಂದು ಎಲ್

ಬೆಳ್ತಂಗಡಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ (ಅಂಬೇಡ್ಕರ್ ವಾದ) ಇದರ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನೆಮನೆಯಲ್ಲಿ ರಾಜ್ಯಾದ್ಯಂತ ನಡೆದ ಪ್ರತಿಭಟನೆಯ ಅಂಗವಾಗಿ ತಾಲೂಕಿನ ವಿವಿಧೆಡೆ ಸೋಮವಾರ ಪ್ರತಿಭಟನೆ ನಡೆಯಿತು.

ಚಿಕ್ಕಮಗಳೂರು ಜಿಲ್ಲೆಯ ಗೋಣಿಬೀಡು ಪೋಲಿಸ್ ಠಾಣೆಯ ಉಪ ನಿರೀಕ್ಷಕ ಅರ್ಜುನ್ ನನ್ನು ಸೇವೆಯಿಂದ ಅಮಾನತು ಮಾಡಿ , ಬಂಧಿಸಿ, ಜೈಲಿಗಟ್ಟಬೇಕು , ಕೋವಿಡ್ ಸಂಬಂಧಿತ ಎಲ್ಲಾ ಚಿಕಿತ್ಸೆಯನ್ನು ಉಚಿತಗೊಳಿಸಬೇಕು , ಎಲ್ಲರಿಗೂ ತುರ್ತಾಗಿ ವ್ಯಾಕ್ಸಿನ್ ವ್ಯವಸ್ಥೆ ಮಾಡಬೇಕು , ಎಲ್ಲಾ ಬಡಕುಟುಂಬಗಳಿಗೂ ಸಮಗ್ರ ದಿನಸಿ ಹಾಗೂ ಮಾಸಿಕ 5000 ನೆರವು ನೀಡಬೇಕು , ದುಡಿಯುವವರನ್ನು ಕಳೆದುಕೊಂಡ ಕುಟುಂಬಗಳಿಗೆ 5 ಲಕ್ಷ ಪರಿಹಾರ ನೀಡಬೇಕು , ಸರ್ಕಾರಿ ನಿರ್ಲಕ್ಷ್ಯದಿಂದ ಚಾಮರಾಜನಗರದಲ್ಲಿ ಸಾವನ್ನಪ್ಪಿದ 37 ಜನರ ಕುಟುಂಬಗಳಿಗೆ ತಲಾ 10 ಲಕ್ಷದಂತೆ ಪರಿಹಾರ ನೀಡಬೇಕು ಮತ್ತು ಈ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.

ಲಾಯಿಲ ಗ್ರಾಮದ ನಿನ್ನಿಕಲ್ಲು ನಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ದಸಂಸ (ಅಂಬೇಡ್ಕರ್ ವಾದ)ದ ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್ ” ಗೋಣಿಬೀಡು ಘಟನೆಯಿಂದ ಇಡೀ ನಾಗರಿಕ ಸಮಾಜ ತಲೆತಗ್ಗಿಸುಂತಾಗಿದೆ. ನಾಗರಿಕ ಸಮಾಜದಲ್ಲಿ ಅನಾಗರಿಕವಾಗಿ ವರ್ತಿಸಿರುವ ಅನಾಗರಿಕ ಅರ್ಜುನನ್ನು ಸೇವೆಯಿಂದ ವಜಾಗೊಳಿಸಿ ಜೈಲಿಗಟ್ಟದಿದ್ದರೆ ಲಾಕ್ ಡೌನ್ ಉಲ್ಲಂಘಿಸಿ ಇಡೀ ರಾಜ್ಯಾದ್ಯಂತ ಜೈಲ್ ಭರೋ ಪ್ರತಿಭಟನೆ ನಡೆಸಬೇಕಾದೀತು. ಅರ್ಜುನ್ ಮೇಲೆ ಕ್ರಿಮಿನಲ್ ಕೇಸ್ ದಾಖಲಾದರೂ ಇನ್ನೂ ಬಂಧಿಸದಿರುವುದು ನಮ್ಮ ರಾಜ್ಯದ ದುರಂತ. ನಮ್ಮ ಸಹನೆಯ ಕಟ್ಟೆ ಒಡೆಯುವ ಮೊದಲು ಅರ್ಜುನ್ ನನ್ನು ಜೈಲಿಗಟ್ಟದಿದ್ದರೆ ಮುಂದಾಗುವ ಅನಾಹುತಕ್ಕೆ ರಾಜ್ಯದ ಬಿಜೆಪಿ ಸರ್ಕಾರ ನೇರ ಹೊಣೆಯಾದೀತು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ದಸಂಸ (ಅಂಬೇಡ್ಕರ್ ವಾದ) ದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಬಿ.ಕೆ ವಸಂತ ಮಾತನಾಡುತ್ತಾ ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ಲಾಕ್ ಡೌನ್ ಘೋಷಿಸುವ ಮೂಲಕ ಹಸಿವಿನ ಸಾವನ್ನು ಆಹ್ವಾನಿಸುವ ಅಮಾನವೀಯ ಕ್ರಮವನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದ ಅವರು ಕೇರಳ, ತಮಿಳುನಾಡು ಮಾದರಿಯಲ್ಲಿ ರಾಜ್ಯದ ಜನತೆಗೂ ಪರಿಹಾರ ಘೋಷಿಸಿ , ನಿತ್ಯೋಪಯೋಗಿ ವಸ್ತುಗಳನ್ನು ಉಚಿತವಾಗಿ ನೀಡುವ ಜೊತೆಗೆ ಕೋವಿಡ್ 19 ಉಚಿತ ಚಿಕಿತ್ಸೆ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ದಸಂಸ (ಅಂಬೇಡ್ಕರ್ ವಾದ) ಗ್ರಾಮ ಶಾಖೆಯ ಮುಖಂಡರುಗಳಾದ ಹರೀಶ್ ಎಲ್ ನೆನಪು , ಸಂದೇಶ್ ಎಲ್ , ಹರೀಶ್ ಕುಮಾರ್ ಎಲ್ , ಹರ್ಷಿತ್ ಲಾಯಿಲಬೈಲು , ಹರೀಶ್ ನಿನ್ನಿಕಲ್ಲು , ಹರ್ಷಿತ್ ನಿನ್ನಿಕಲ್ಲು , ಅಕ್ಷಯ್ ಕುಮಾರ್, ಅಕ್ಷತ್ ಕುಮಾರ್ , ಅಪ್ಪಿಲತಾ , ತಾಲೂಕು ಮುಖಂಡರುಗಳಾದ ಪ್ರಭಾಕರ್ ಶಾಂತಿಕೋಡಿ , ಶೀನಪ್ಪ ಮಲೆಬೆಟ್ಟು , ಉಮೇಶ್ ಮಲೆಬೆಟ್ಟು , ಪ್ರಶಾಂತ್ ಮಲೆಬೆಟ್ಟು , ಪ್ರಶಾಂತ್ ಪುಂಜಾಲಕಟ್ಟೆ ,ಸತೀಶ್ ಅರ್ವ , ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಶೇಖರ್ ಲಾಯಿಲ ಉಪಸ್ಥಿತರಿದ್ದರು.

error: Content is protected !!