ಬ್ಲಾಕ್ ಫಂಗಸ್ ತಡೆಗಟ್ಟಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿ: ಡಿಕೆ ಶಿವಕುಮಾರ್

ಬೆಳ್ತಂಗಡಿ: ರಾಜ್ಯ ಸರಕಾರ ಬ್ಲಾಕ್ ಫಂಗಸ್ ಹಾಗೂ ವೈಟ್ ಫಂಗಸ್‌ನ್ನು ಪ್ರತಿರೋಧಿಸಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹಿಸಿದರು.

ಅವರು ಸೋಮವಾರ ಧರ್ಮಸ್ಥಳದ ಹೆಲಿಪಾಡ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಸಚಿವರುಗಳಲ್ಲಿ ಗೊಂದಲ ಹೇಳಿಕೆಗಳು ನಡೆಯುತ್ತಿದೆ. ಫಂಗಸ್‌ಗಳ ಕುರಿತು ಸರಕಾರದ ಬಳಿಯೇ ಸ್ಪಷ್ಟವಾದ ಮಾಹಿತಿಗಳಿಲ್ಲವಾಗಿದೆ. ರಾಜ್ಯದಲ್ಲಿ ಇನ್ನೂ ಸಮರ್ಪಕವಾದ ಚಿಕಿತ್ಸೆ ನೀಡಲಾಗುತ್ತಿಲ್ಲ. ಜನರೂ ಗಾಬರಿಯಾಗಿದ್ದಾರೆ. ಕೇಂದ್ರ ಸಚಿವ ಸದಾನಂದ ಗೌಡ ಅವರಿಗೆ ಮನವಿ ಮಾಡುತ್ತೇನೆ. ಗುಜರಾತ್‌ಗೆ ಕೇಂದ್ರ ಸರಕಾರ ಔಷಧಿಯನ್ನು ನೀಡಿರುವಂತೆ ನಮ್ಮ ಜನರ ಪ್ರಾಣ ಉಳಿಸುವುದಕ್ಕೆ ಇಲ್ಲಿಯೂ ತರಿಸಿಟ್ಟುಕೊಳ್ಳಬೇಕು. ಕೂಡಲೇ ನಮ್ಮ ರಾಜ್ಯದಲ್ಲಿ ಬ್ಲಾಕ್ ಮತ್ತು ವೈಟ್ ಫಂಗಸ್‌ಗಳ ಕುರಿತು ಮುಂಜಾಗ್ರತೆಗಾಗಿ ಸರಕಾರಗಳು ಕ್ರಮ ಕೈಗೊಳ್ಳಬೇಕು. ಕೋವಿಡ್ ನಿಯಂತ್ರಣಕ್ಕೆ ಸಹಕಾರ ಕೊಟ್ಟಂತೆ ಇದಕ್ಕೂ ಸಹಕಾರ ನೀಡುತ್ತೇವೆ ಎಂದು ಹೇಳಿದರು.

ಚಿಕ್ಕಮಗಳೂರಿನಲ್ಲಿ ದಲಿತ ಯುವಕನಿಗೆ ಪೋಲೀಸ್ ಠಾಣೆಯಲ್ಲಿ ಮೂತ್ರ ಕುಡಿಸಿದ ಪ್ರಕರಣದಲ್ಲಿ ಕೇವಲ ತನಿಖೆಯ ನಾಟಕವಾಡಿ ಪ್ರಕರಣವನ್ನು ಮುಗಿಸಲು ಮುಂದಾಗುತ್ತಿದೆ ಎಂದು ಆರೋಪಿಸಿದ ಅವರು ಎಸ್.ಸಿ. ಮತ್ತು ಎಸ್.ಟಿ ಆಯೋಗದವರು ಈಗ ಎಲ್ಲಿದ್ದಾರೆ. ಸಮಾಜ ಕಲ್ಯಾಣ ಸಚಿವರೂ ಈ ಕುರಿತು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಮಾನವ ಹಕ್ಕುಗಳ ಆಯೋಗವೂ ಈ ಕುರಿತು ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದರು.

ನಮ್ಮ ರಾಜ್ಯದ ಕಾನೂನು ಏನು, ಸರೋಜಿನಿ ಮಹಿಷಿ ಏನು ಹೇಳುತ್ತದೆಯೆಂದರೆ ನಮ್ಮವರಿಗೆ ಉದ್ಯೋಗ ನೀಡಬೇಕು. ನಮ್ಮವರಿಗೆ ಬೆರಳೆಣಿಕೆ ಜನರಿಗೆ ಉದ್ಯೋಗ ನೀಡಿದರೆ ಸಾಲದು. ನಮ್ಮ ಕರಾವಳಿ ಹಾಗೂ ಮಲೆನಾಡು ಜನರು ಹೋರಾಟ ಮಾಡಬೇಕಾಗುತ್ತದೆ. ಎಂ.ಆರ್.ಪಿ.ಎಲ್‌ನಲ್ಲಿ ಹೊರ ರಾಜ್ಯದವರಿಗೆ ಉದ್ಯೋಗ ನೀಡುವುದನ್ನು ಕೂಡಲೇ ಸ್ಥಗಿತಗೊಳಿಸಿ ಎಂದು ಒತ್ತಾಯಿಸಿದ ಅವರು, ರಾಜ್ಯದಲ್ಲಿ ಯುವಕರಿಗೆ ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ಈಗಾಗಲೇ ಲಕ್ಷಾಂತರ ಮಂದಿಗೆ ಉದ್ಯೋಗ ಕಳೆದುಕೊಂಡಿದ್ದಾರೆ, ಇಂತಹ ಸಂದರ್ಭದಲ್ಲಿ ಹೊರಗಿನ ರಾಜ್ಯದವರಿಗೆ ಕರೆದುಕೊಂಡು ಬಂದು ಕೆಲಸ ಕೊಡಿಸುವುದು ಸರಿಯಲ್ಲ. ಹೋರಾಟ ಮಾಡಬೇಕಾದ ಪರಿಸ್ಥಿತಿ ಬರಬಹುದು. ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಸಚಿವ ಸದಾನಂದ ಗೌಡರು ಯುವಕರ ಹಿತರಕ್ಷಣೆಗೆ ಕೂಡಲೇ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.

ನಮ್ಮ ಶಾಸಕರ ನಿಧಿಯಿಂದ 100 ಕೋಟಿ ರೂ. ನಲ್ಲಿ ಲಸಿಕೆ ಕೊಡಬೇಕೆಂದು ತೀರ್ಮಾನ ಮಾಡಿದ್ದೇವೆ. ಕೆಲವು ಕಂಪೆನಿಗಳ ಜತೆ ಮಾತನಾಡಿದ್ದೇವೆ. ಈಗಾಗಲೆ ಸರಕಾರದ ಮುಂದೆ ಕಾಂಗ್ರೆಸ್ ಪಕ್ಷ ಪ್ರಸ್ತಾವನೆಯನ್ನು ಇಟ್ಟಿದೆ. ಸರಕಾರ ಒಪ್ಪಿಗೆ ನೀಡಿದರೆ ನಮ್ಮ ಬಳಿ ಇರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಇದಕ್ಕಾಗಿ ಉಪಯೋಗಿಸಲಿದ್ದೇವೆ. ಎಲ್ಲರಿಗೂ ವಾಕ್ಸಿನ್ ಒದಗಿಸಬೇಕು ಎಂಬುದೇ ನಮ್ಮ ಉದ್ದೇಶವಾಗಿದೆ ಎಂದ ಅವರು, ನ್ಯಾಚುರೋಪತಿ ವೈದ್ಯರ ಸಲಹೆ ಪಡೆಯುವ ದೃಷ್ಟಿಯಿಂದ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಮಾಜಿ ಶಾಸಕ ಕೆ. ವಸಂತ ಬಂಗೇರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ರಂಜನ್ ಜಿ ಗೌಡ, ಶೈಲೇಶ್ ಕುಮಾರ್, ಯುವ ಘಟಕದ ಅಭಿನಂದನ್ ಹಾಗೂ ಇತರರು ಇದ್ದರು.

error: Content is protected !!