ಮಕ್ಕಳ ಮೇಲೆ ಕೊರೊನಾ 3 ನೇ ಅಲೆ ಪ್ರಭಾವ ಜಿಲ್ಲೆಯ ಎಲ್ಲಾ ಮಕ್ಕಳ ತಜ್ಞರ ಜೊತೆ ಸಭೆ: ಕೋಟ ಶ್ರೀನಿವಾಸ ಪೂಜಾರಿ

ಬೆಳ್ತಂಗಡಿ: ಕೋವಿಡ್ ಸಂಧರ್ಭ ಕಠಿಣವಾದ ಸಂಕಷ್ಟ ಪರಿಸ್ಥಿತಿಯನ್ನು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಸಮರ್ಪಕ ರೀತಿಯಲ್ಲಿ ನಿಭಾಯಿಸಿದೆ. ಜನರಲ್ಲಿ ಎರಡನೇ ಅಲೆಯ ಬಳಿಕ ಮೂರನೇ ಅಲೆ ಹೇಗೆ ಯಾವ ರೀತಿ ಎಂಬ ಆತಂಕವಿದೆ. ಜನರು ಯಾವುದೇ ಆತಂಕ ಪಡಬೇಕಾಗಿಲ್ಲ. ಮೂರನೇ ಅಲೆಯ ಕುರಿತು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳ ಸಮಾಲೋಚನೆಯ ಬಳಿಕ ಹೊಸ ಮಾರ್ಗಸೂಚಿ ಮೇರೆಗೆ ತಜ್ಞರ ತಂಡ ಕಾರ್ಯನಿರ್ವಹಿಸಲಿದೆ. ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಸರಕಾರಗಳು ಕ್ರಮ ಕೈಗೊಂಡಿದೆ ಎಂದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಅವರು, ಸೋಮವಾರ ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಳದ ವಠಾರದಲ್ಲಿ ಅಳದಂಗಡಿ ಅರಮನೆ ಹಾಗೂ ಸತ್ಯದೇವತಾ ದೈವಸ್ಥಾನದ ವತಿಯಿಂದ ಅಳದಂಗಡಿ ಹಾಗೂ ನಾರಾವಿ ಜಿ.ಪಂ. ವ್ಯಾಪ್ತಿಯ ಎಲ್ಲಾ 80 ಮಂದಿ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರದಂತೆ ಒಟ್ಟು 2,40,000 ಸಹಾಯಧನ ವಿತರಿಸಿ ಮಾತನಾಡಿದರು.

ಮೇ.25ರ ಮಂಗಳವಾರದಂದು ದ.ಕ. ಜಿಲ್ಲೆಯ ಮಕ್ಕಳ ತಜ್ಞರ ಜೊತೆ ಸಮಾಲೋಚನಾ ಸಭೆ ನಡೆಯಲಿದ್ದು ಎಳೆಯ ಮಕ್ಕಳ ಮೇಲೆ ಬರುವ ಮೂರನೇ ಅಲೆಯನ್ನು ನಿಯಂತ್ರಣದಲ್ಲಿರಿಸಲು ಸರ್ವತಯಾರಿ ರಾಜ್ಯ ಸರಕಾದ ವತಿಯಿಂದ ನಡೆಸಲಾಗುತ್ತಿದೆ ಎಂದ ಸಚಿವರು, ಜಿಲ್ಲೆಯಲ್ಲಿನ ಕೇಂದ್ರ ಸರಕಾರದ ಸ್ವಾಮ್ಯತೆಯ ಉದ್ಯಮಗಳು ಸಂಸದರ ಸಹಕಾರದಲ್ಲಿ ಕೊರೋನಾ ಹತೋಟಿಗೆ ಅಂಬುಲೆನ್ಸ್, ಆಕ್ಸಿಜನ್ ಇತ್ಯಾದಿಗಳನ್ನು ಒದಗಿಸುವ ಕಾರ್ಯ ಮಾಡಿದೆ. ತಾಲೂಕಿನಲ್ಲಿ ಶಾಸಕರು ಕಠಿಣ ಪರಿಸ್ಥಿತಿಯಲ್ಲಿ ಪೂರ್ಣ ಸಮಯವನ್ನು ಮೀಸಲಿಟ್ಟಿದ್ದಾರೆ. ಜೀವವನ್ನು ಪಣವಾಗಿಟ್ಟುಕೊಂಡು ಆಶಾ ಕಾರ್ಯಕರ್ತೆಯವರು ಕಾರ್ಯನಿರ್ವಹಿಸುತ್ತಿದ್ದು ಸರಕಾರ ಇವರಿಗೆ ಯಾವುದೇ ಸೌಲಭ್ಯ ನೀಡಲು ಸಿದ್ದವಾಗಿದೆ. ಆಶಾ ಕಾರ್ಯಕರ್ತೆಯರನ್ನು ಅವಮಾನಿಸುವ ಕೆಲಸ ಯಾರಾದರೂ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಡಿಸಿಯವರಿಗೆ ಹಾಗೂ ಎಸ್‌ಪಿಯವರಿಗೆ ಸೂಚಿಸಲಾಗಿದೆ. ಸರಕಾರ ಅವರ ರಕ್ಷಣೆಗೆ ಬದ್ಧವಾಗಿದೆ ಎಂದರು.

ಸಂಸದ ನಳೀನ್ ಕುಮಾರ್ ಕಟೀಲು ಅವರು, ದ.ಕ.ಜಿಲ್ಲೆಯಲ್ಲಿ ಕೊರೋನಾ ರೋಗಿಗಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ವೆನ್‌ಲಾಕ್‌ನಲ್ಲಿ ವೆಂಟಿಲೇಟರ್ 12 ಮಾತ್ರ ಇದ್ದದ್ದು ಈಗ 130 ಇವೆ. ದ.ಕ. ಜಿಲ್ಲೆಯಲ್ಲಿ ಸಚಿವ ಕೋಟ ಅವರ ನೇತೃತ್ವದಲ್ಲಿ ಕೋವಿಡ್‌ಗೆ ಕಡಿವಾಣ ಹಾಕಿದ್ದು, ನಿಯಂತ್ರಣದಲ್ಲಿದೆ. ರಾಜ್ಯದಲ್ಲೇ ಪ್ರಪ್ರಥಮವಾಗಿ ಉಸ್ತುವಾರಿ ಸಚಿವರು ಜಿಲ್ಲೆಯ ಎಲ್ಲಾ ಕಾರ್ಯಪಡೆಯೊಂದಿಗೆ ವಿಡಿಯೋ ಸಂವಾದದ ಮೂಲಕ ರೋಗವನ್ನು ಹತೋಟಿಯಲ್ಲಿಡಲು ಪ್ರಯತ್ನಪಟ್ಟಿದ್ದಾರೆ. ಎಲ್ಲಾ ಸಂಘ ಸಂಸ್ಥೆಗಳು ಸೇರಿ ಪ್ರಯತ್ನ ಪಡುತ್ತಿದ್ದಾರೆ. ಅತಿ ಹೆಚ್ಚಿನ ಮನೆಗಳ ದರ್ಶನ ಮಾಡುತ್ತಿರುವವರು ಆಶಾ ಕಾರ್ಯಕರ್ತೆಯರು. ಅವರಿಗೆ ನೆರವಾಗುವುದು ಮಾನವೀಯ ಕೆಲಸ. ಇದನ್ನು ಅಳಂದಗಡಿಯ ಅರಸರು, ಶಿವಪ್ರಸಾದ ಅಜಿಲರು ಮಾಡುತ್ತಿರುವುದು ಮಾದರಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಅಳದಂಗಡಿ ಅರಮನೆ ಡಾ| ಪದ್ಮಪ್ರಸಾದ ಅಜಿಲರು, ಪ್ರತಿ ಪಂಚಾಯತಿಗೊಂದರಂತೆ ಅಂಬ್ಯುಲೆನ್ಸ್ ಇರುವಂತೆ ಸರಕಾರ ಚಿಂತನೆ ನಡೆಸಬೇಕು. ಆಶಾ ಕಾರ್ಯಕರ್ತೆಯರಿಗೆ ಯಾವುದೇ ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಮಾಡಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆ ಮನವಿಯನ್ನು ಸಚಿವರಿಗೆ ನೀಡಿದರು. ಪ್ರಾ. ಆರೋಗ್ಯ ಕೇಂದ್ರಕ್ಕೆ ಆಗತ್ಯ ಮಾತ್ರೆಗಳನ್ನು ಅರಮನೆಯ ವತಿಯಿಂದ ನೀಡಿದರು.

ವೇದಿಕೆಯಲ್ಲಿ ಶಾಸಕ ಹರೀಶ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಧಾರ್ಮಿಕ ಪರಿಷತ್ ದ.ಕ. ಜಿಲ್ಲಾ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಬಿಜೆಪಿ ಮಂಡಲಾಧ್ಯಕ್ಷ ಜಯಂತ್ ಕೋಟ್ಯಾನ್ ಉಪಸ್ಥಿತರಿದ್ದರು.

ಸತ್ಯದೇವತೆ ದೈವಸ್ಥಾನದ ಆಡಳಿತೆದಾರ ಶಿವಪ್ರಸಾದ ಅಜಿಲ ಸ್ವಾಗತಿಸಿ, ಪ್ರಸ್ತಾವಿಸಿದರು. ಸದಾನಂದ ಪೂಜಾರಿ ಉಂಗಿಲಬೈಲು ವಂದಿಸಿದರು. ಮೋಹನದಾಸ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!