ರೋಗಿಗಳಿಗೆ ಆಕ್ಸೀಜನ್ ಕೊರತೆಯಾಗದಂತಿರಲು ಆಕ್ಸೀಜನ್ ಪ್ಲಾಂಟ್: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕೇಂದ್ರದ ಸಾರ್ವಜನಿಕ ಆಸ್ಪತ್ರೆಗೆ ರಾಜ್ಯ ಸರ್ಕಾರದ ವಿಶೇಷ ಅನುದಾನದಿಂದ ಮಂಜೂರಾಗಿರುವ ಸುಮಾರು 82 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಆಕ್ಸಿಜನ್ ಘಟಕದ ಶಿಲಾನ್ಯಾಸವನ್ನು ಕರ್ನಾಟಕ ರಾಜ್ಯ ಸರ್ಕಾರದ ಮುಜರಾಯಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸೋಮವಾರ ನೆರವೇರಿಸಿದರು.

ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು, ರಾಜ್ಯದಲ್ಲಿ 31 ಆಕ್ಸಿಜನ್ ಘಟಕಗಳಿವೆ. ದ.ಕ. ಜಿಲ್ಲೆಯಲ್ಲಿ 7 ಆಸ್ಪತ್ರೆಗಳಲ್ಲಿ ಘಟಕಗಳನ್ನು ಸ್ಥಾಪಿಸಲಾಗುವುದು. ಇಲ್ಲಿನ ಪ್ಲಾಂಟ್‌ಗೆ ಕೊಯಮತ್ತೂರಿಂದ ಟ್ರೈಡೆಂಟ್ ಕಂಪೆನಿ ಯಂತ್ರೋಪಕರಣ ಸರಬರಾಜು ಮಾಡುತ್ತಿದ್ದು, ಇಲ್ಲಿ 82 ಲಕ್ಷ ರೂ. ವೆಚ್ಚದಲ್ಲಿ 500 ಚದರ ಅಡಿಯ ಹೊಸತಾದ ಕಟ್ಟಡದಲ್ಲಿ ಒಂದು ನಿಮಿಷದಲ್ಲಿ 390 ಲೀ. ಆಕ್ಸಿಜನ್ ಉತ್ಪಾದಿಸುವ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಆಗಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಂಜಿನಿಯರಿಂಗ್ ವಿಭಾಗದಿಂದ ಘಟಕ ನಿರ್ಮಾಣಕ್ಕೆ ಬೇಕಾಗುವ ಎಲ್ಲ ಸಿದ್ಧತೆಗಳನ್ನು ಕೈಗೊಂಡಿದ್ದು ಜೂನ್ ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಲು ರಾಜ್ಯ ಸರಕಾರ ಸೂಚಿಸಿದ್ದು ಜೂನ್ ಅಂತ್ಯಕ್ಕೆ ಪೂರ್ಣವಾಗಲಿದೆ. ಯಾವುದೇ ಸಂದರ್ಭದಲ್ಲಿ ರೋಗಿಗಳಿಗೆ ಆಕ್ಸಿಜನ್ ಕೊರತೆಯಾಗದಂತಿರಲು ರಾಜ್ಯ ಸರಕಾರ ಈ ವ್ಯವಸ್ಥೆ ಮಾಡುತ್ತಿದೆ ಎಂದು ಹೇಳಿದರು.

ಶಾಸಕ ಹರೀಶ್ ಪೂಂಜ ಅವರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರ ಸಹಕಾರದಿಂದ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ದ.ಕ. ಜಿಲ್ಲೆಯ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ 82 ಲಕ್ಷ ರೂ. ವೆಚ್ಚದ ಆಕ್ಸಿಜನ್ ಘಟಕ ನಿರ್ಮಿಸಲು ಕೊಟ್ಟಿದ್ದಾರೆ. ಇಂದು ಶಿಲಾನ್ಯಾಸ ನೆರವೇರಿಸಿದ್ದು, ಆದಷ್ಟು ಶೀಘ್ರದಲ್ಲಿ ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಘಟಕ ಸ್ಥಾಪನೆ ಮಾಡಿ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.

ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಮತ್ತು ಕೆ. ಹರೀಶ್ ಕುಮಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಜನಿ ಕುಡ್ವ ಉಪಾಧ್ಯಕ್ಷ ಜಯಾನಂದ ಗೌಡ, ಸದಸ್ಯ ಶರತ್ ಕುಮಾರ್, ತಹಸೀಲ್ದಾರ್ ಮಹೇಶ್ ಜೆ., ಇಒ ಕುಸುಮಾಧರ್, ತಾಲೂಕು ಆರೋಗ್ಯಾಧಿಕಾರಿ ಡಾ. ಕಲಾಮಧು, ತಾಲೂಕು ಆಸ್ಪತ್ರೆ ಆಡಳಿತ ವೈದಾಧಿಕಾರಿ ಡಾ. ವಿದ್ಯಾವತಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ರಾಜೇಶ್ ಶೆಟ್ಟಿ, ತುಕರಾಮ್, ಆಸ್ಪತ್ರೆಯ ವೈದ್ಯರುಗಳು, ದಾದಿಯರು, ಸಿಬ್ಬಂದಿವರ್ಗದವರು ಮೊದಲಾದವರು ಉಪಸ್ಥಿತರಿದ್ದರು.

error: Content is protected !!