ಬೆಂಗಳೂರು: ಕೊರೊನಾ ಎರಡನೇ ಅಲೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಚಾರಿ ಕ್ಲಿನಿಕ್ ಒಳಗೊಂಡಿರುವ ‘ವೈದ್ಯರ ನಡೆ, ಹಳ್ಳಿಗಳ ಕಡೆ’ ಎಂಬ ಕಾರ್ಯಕ್ರಮ ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್-19 ವೈರಾಣು ಸೋಂಕನ್ನು ತಡೆಗಟ್ಟಲು ಅಂತಿಮ ವರ್ಷದ ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿರುವ ತರಬೇತಿ ವಿದ್ಯಾರ್ಥಿಗಳು, ಬಿ.ಎಸ್.ಸಿ ನರ್ಸಿಂಗ್, ಬಿ.ಡಿ.ಎಸ್, ಎಂ.ಡಿ.ಎಸ್, ಆಯುಷ್ ಪದವೀಧರ ವೈದ್ಯರ ಸೇವೆಯನ್ನು ಎರವಲು ಪಡೆಯಲಾಗುವುದು. ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಒಂದೇ ಕಡೆ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಲಭ್ಯವಿದ್ದು, ಭೌತಿಕ ಪರೀಕ್ಷೆ, ಗಂಟಲು ಮಾದರಿ ಪರೀಕ್ಷೆ ನಡೆಸುವುದು ಮತ್ತು ಸ್ಥಳದಲ್ಲಿಯೇ ಸೂಕ್ತ ಚಿಕಿತ್ಸೆ ನೀಡುವುದು ಹಾಗೂ ಅವಶ್ಯಕತೆಯುಳ್ಳವರಿಗೆ ವೈದ್ಯಕೀಯ ಕಿಟ್‌ಗಳನ್ನು ವಿತರಿಸುವುದು ಮೊದಲಾದ ಉದ್ದೇಶಗಳಿಗಾಗಿ ಸಂಚಾರಿ ಕ್ಲಿನಿಕ್ ಒಳಗೊಂಡಿರುವ ‘ವೈದ್ಯರ ನಡೆ, ಹಳ್ಳಿಗಳ ಕಡೆ’ ಎಂಬ ಕಾರ್ಯಕ್ರಮವನ್ನು ಜಾರಿಗೊಳಿಸಿದೆ.
ಕಾರ್ಯಕ್ರಮದ ಮಾರ್ಗಸೂಚಿ ಏನು?
- ಈ ಕಾರ್ಯಕ್ರಮವನ್ನು ಪ್ರಾರಂಭಿಸುವ ಪೂರ್ವದಲ್ಲಿ ಕನಿಷ್ಠ ಎರಡು ದಿನಗಳ ಮುಂಚಿತವಾಗಿ ಸಂಬಂಧಿಸಿದ ಗ್ರಾಮ ಪಂಚಾಯಿತಿಗಳು ಈ ಕುರಿತು ಗ್ರಾಮಸ್ಥರಿಗೆ ವ್ಯಾಪಕ ಪ್ರಚಾರ ನೀಡಬೇಕು.
- ಮೆಡಿಕಲ್ ಕಿಟ್ಗಳ ಸಮೇತ ‘ವೈದ್ಯರ ನಡೆ ಹಳ್ಳಿಯ ಕಡೆ’ ವಿನೂತನ ಕಾರ್ಯಕ್ರಮಕ್ಕೆ ನಿಯೋಜಿಸಲ್ಪಡುವ ತಂಡದ ವೈದ್ಯರು, ಆರೋಗ್ಯ ಸಿಬ್ಬಂದಿ ಕೋವಿಡ್-19 ರೋಗದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು.
- ಆಯಾ ಸ್ಥಳಗಳಲ್ಲಿನ ಮನೆಗಳಿಗೆ ಭೇಟಿ ನೀಡಿ ಕೋವಿಡ್-19 ಗೆ ಸಂಬಂಧಪಟ್ಟ ಸೋಂಕಿನ ಲಕ್ಷಣಗಳಿವೆಯೇ? ಎಂಬುದನ್ನು ತಪಾಸಣೆ ಮಾಡಬೇಕು.
- ಸೋಂಕಿನ ಲಕ್ಷಣವಿದ್ದಲ್ಲಿ ಸ್ಥಳದಲ್ಲಿಯೇ ರ್ಯಾಪಿಡ್ ಆಂಟಿಜೆನ್ (RAT) ಪರೀಕ್ಷೆಯನ್ನು ಮಾಡಬೇಕು.
- ರ್ಯಾಪಿಡ್ ಆಂಟಿಜೆನ್ ಪರೀಕ್ಷೆ ಪಾಸಿಟಿವ್ ಇದ್ದಲ್ಲಿ ಟ್ರಯಾಜಿಂಗ್ ಮಾಡಿ ರೋಗಿಯ ಗುಣಲಕ್ಷಣದ ಮೇಲೆ, ರೋಗಿಯು ಆಸ್ಪತ್ರೆಗೆ ದಾಖಲಾಗಬೇಕೇ? ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯಬೇಕೆ ಅಥವಾ ಹೂಂ ಐಸೋಲೇಷನ್ನಲ್ಲಿ ಇರಬೇಕೇ? ಎಂಬುದರ ಬಗ್ಗೆ ಸೂಕ್ತ ನಿರ್ಧಾರವನ್ನು ತಂಡದ ವೈದ್ಯರು ತೆಗೆದುಕೊಂಡು, ಬಳಿಕ ಸೋಂಕಿತರಿಗೆ ಮೆಡಿಕಲ್ ಕಿಟ್ ವಿತರಿಸಿ ಸೂಕ್ತ ಮಾಹಿತಿಯನ್ನು ನೀಡಬೇಕು.
- ಪಾಸಿಟಿವ್ ಬಂದಂತಹ ರೋಗಿಯೊಂದಿಗೆ ಸಂಪರ್ಕ ಹೊಂದಿದವರನ್ನೂ ಸಹ ಪರೀಕ್ಷೆಗೆ ಒಳಪಡಿಸಬೇಕು.
- ಗ್ರಾಮೀಣ ಪ್ರದೇಶದಲ್ಲಿ ಗೃಹ ಆರೈಕೆ (Home Isolator) ವ್ಯವಸ್ಥೆ ಮಾಡಲು ಅನುಕೂಲ ಹೊಂದಿರುವಂತಹವರಿಗೆ ಮಾತ್ರ ಹೂಂ ಐಸೋಲೇಷನ್‌ಗೆ ಅವಕಾಶ ಕಲ್ಪಿಸಬೇಕು.
- ಹೊಂ ಐಸೋಲೇಷನ್ ನಲ್ಲಿರಲು ವ್ಯವಸ್ಥೆ ಇಲ್ಲದಂತಹ ಕುಂಟುಂಬಗಳ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು.
- ತಂಡದವರು ಭೇಟಿ ನೀಡುವ ಸ್ಥಳಗಳಲ್ಲಿರುವ “ಹೋಂ ಐಸೋಲೇಷನ್’ ರೋಗಿಗಳನ್ನು ತಪಾಸಣೆ ಮಾಡಿ ‘ಕ್ಯಾರಂಟೈನ್ ವಾಚ್’ ಆಪ್‌ನಲ್ಲಿ ಭರ್ತಿ ಮಾಡಬೇಕು.
- ಕೋವಿಡ್ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತದ ವತಿಯಿಂದ ಅಗತ್ಯ ವೈದ್ಯಕೀಯ ಕಿಟ್‌ಗಳನ್ನು ವೈದ್ಯರು, ದಾದಿಯರು, ಎ.ಎನ್.ಎಂ, ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರಿಗೆ ನೀಡಬೇಕು.
- ಸ್ಥಳೀಯ ಆಶಾ ಕಾರ್ಯಕರ್ತೆಯರು ಎನ್-95 ಮತ್ತು ಇತರೆ ಪಿಪಿಇ ಕಿಟ್ ಧರಿಸಿ ಗ್ರಾಮದ ಪ್ರತಿಯೊಂದು ಮನೆಗೆ ಭೇಟಿ ನೀಡಿ, ವ್ಯಕ್ತಿಗಳನ್ನು ಸಂದರ್ಶಿಸಿ ಕೋವಿಡ್-19 ವೈರಾಣು ಲಕ್ಷಣಗಳಿರುವ ಬಗ್ಗೆ, ಕಂಡುಬಂದಲ್ಲಿ ಅವರನ್ನು ಸೂಕ್ತ ತಪಾಸಣೆಗೆ ಒಳಪಡಿಸಲು ಸಂಚಾರಿ ಕ್ಲಿನಿಕ್ ತಂಡಕ್ಕೆ ಶಿಫಾರಸು ಮಾಡಬೇಕು.
- ಕೋವಿಡ್-19 ಸೋಂಕಿತರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋವಿಡ್ ಕೇರ್ ಸೆಂಟರ್ ಅಥವಾ ಸೂಕ್ತ ಆಸ್ಪತ್ರೆಗಳಿಗೆ ದಾಖಲಿಸಲು ಅನುಕೂಲವಾಗುವಂತೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಅಂಬುಲೆನ್ಸ್ ಅಥವಾ ಅಂಬುಲೆನ್ಸ್ ಮಾದರಿಯಲ್ಲಿ ಸಿದ್ಧಪಡಿಸಿದ ವಾಹನವನ್ನು ಕಾಯ್ದಿರಿಸಬೇಕು.
- ಮೊಬೈಲ್ ಕ್ಲಿನಿಕ್ ತಂಡ ಒಂದು ವಾರದಲ್ಲಿ ತಾಲ್ಲೂಕಿನಲ್ಲಿರುವ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ, ಸಾರ್ವಜನಿಕರಿಗೆ, ಸೋಂಕು ಪೀಡಿತರಿಗೆ ಸೋಂಕು ಲಕ್ಷಣಗಳಿರುವವರಿಗೆ ಅಲ್ಲದೇ ಶೀತ, ಕೆಮ್ಮು, ಮೈ-ಕೈ ನೋವು ಇರುವವರಿಗೆ ರ್ಯಾಪಿಡ್ ಆಂಟಿಜೆನ್ (RAT) ಪರೀಕ್ಷೆಗೆ ಒಳಪಡಿಸಿ ಸೋಂಕು ದೃಢಪಟ್ಟವರಿಗೆ ಸ್ಥಳದಲ್ಲಿಯೇ ಮೆಡಿಕಲ್ ಕಿಟ್‌ಗಳನ್ನು ನೀಡಿ ಚಿಕಿತ್ಸೆ ಪ್ರಾರಂಭಿಸಬೇಕು.
- ರೋಗಲಕ್ಷಣಗಳಿದ್ದು, ನೆಗೆಟಿವ್ ವರದಿ ಬಂದ ಪಕ್ಷದಲ್ಲಿ ಗಂಟಲು ಮತ್ತು ಮೂಗಿನ ದ್ರವ ಸಂಗ್ರಹಿಸಿ ಆರ್ಟಿಸಿಪಿಸಿಆರ್ (RTCPCR) ಪರೀಕ್ಷೆಗೆ ಒಳಪಡಿಸುವುದು ಹಾಗೂ ಕನಿಷ್ಠ ವೈದ್ಯಕೀಯ ಚಿಕಿತ್ಸೆ ಪ್ರಾರಂಭಿಸಬೇಕು.
- ಮೊಬೈಲ್ ಕ್ಲಿನಿಕ್ ವಾಹನವು ಪ್ರತಿ ದಿನ 3-4 ಹಳ್ಳಿಗಳಿಗೆ ಭೇಟಿ ನೀಡಿ, ಸ್ಥಳದಲ್ಲಿಯೇ ಕೋವಿಡ್ ತಪಾಸಣೆಯನ್ನು ಕೈಗೊಳ್ಳುವಂತೆ ಗುರಿ ನಿಗದಿಪಡಿಸಿ ಮುಂದಿನ ಅವಧಿಯಲ್ಲಿ ಯಾವ ಗ್ರಾಮಕ್ಕೆ ಭೇಟಿ ನೀಡಬೇಕು ಎಂಬುದರ ಬಗ್ಗೆ ಯೋಜನೆ ರೂಪಿಸಿಕೊಳ್ಳಬೇಕು.
- ಪ್ರತಿ ಗ್ರಾಮ ಮಟ್ಟದಲ್ಲಿ ಸ್ಥಳೀಯ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ಕರ ವಸೂಲಿಗಾರರು, ಗ್ರಾಮ ಲೆಕ್ಕಿಗರು, ಪಂಚಾಯತಿ ಅಭಿವೃದ್ಧಿ ಅಧಿಕಾರಿ/ಕಾರ್ಯದರ್ಶಿಗಳನ್ನೊಳಗೊಂಡ ಟಾಸ್ಕ್ ಫೋರ್ಸ್ ತಂಡವನ್ನು ರಚಿಸಲಾಗಿದ್ದು, ಮೊಬೈಲ್ ಕ್ಲಿನಿಕ್ ಸಿಬ್ಬಂದಿಗಳು ಈ ಟಾಸ್ಕ್ ಫೋರ್ಸ್ ತಂಡದೊಂದಿಗೆ ಸಮನ್ವಯ ಸಾಧಿಸಿ, ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿ, ಅವಶ್ಯಕ ಕ್ರಮ ಕೈಗೊಳ್ಳಬೇಕು.