ಸಂಚಾರಿ ಸ್ವಾಬ್ ಟೆಸ್ಟ್ ವಾಹನಕ್ಕೆ ಶಾಸಕ ಹರೀಶ್ ಪೂಂಜ ಚಾಲನೆ: ತಾಲೂಕಿನ 8 ಜಿ.ಪಂ. ಕ್ಷೇತ್ರಗಳಲ್ಲಿ ವಾಹನಗಳಿಂದ ಕಾರ್ಯನಿರ್ವಹಣೆ: ಮನೆಗಳಿಗೆ ತೆರಳಿ ಸ್ವಾಬ್ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷಾ ಕೇಂದ್ರಕ್ಕೆ‌ ರವಾನೆ: ಗ್ರಾಮಿಣ ಪ್ರದೇಶದಲ್ಲಿ ಸೋಂಕು ಹರಡುವಿಕೆ ಕಡಿವಾಣಕ್ಕೆ ವ್ಯವಸ್ಥೆ

ಬೆಳ್ತಂಗಡಿ: ಕೊರೋನಾ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೋವಿಡ್-19 ಸೋಂಕಿತರ ಪರೀಕ್ಷೆಗಾಗಿ ಬೆಳ್ತಂಗಡಿ ತಾಲೂಕಿನ 8 ಜಿ.ಪಂ. ಕ್ಷೇತ್ರಗಳಿಗೆ ತಲಾ ಒಂದರಂತೆ ಸಂಚಾರಿ ಸ್ವಾಬ್ ಟೆಸ್ಟ್ ವಾಹನಕ್ಕೆ ಶಾಸಕ ಹರೀಶ್ ಪೂಂಜ ಅವರು ಮೇ. 18ರಂದು ಬೆಳ್ತಂಗಡಿ ಶ್ರೀಮಂಜುನಾಥಸ್ವಾಮಿ ಕಲಾಭವನದ ವಠಾರದಲ್ಲಿ ಚಾಲನೆ ನೀಡಿದರು.

ಗ್ರಾಮಿಣ ಪ್ರದೇಶದಲ್ಲಿ ವ್ಯಾಪಕವಾಗಿ ಸೋಂಕು ಹರಡುವುದನ್ನು ತಡೆಯಲು ಈ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಪರೀಕ್ಷೆ ನಡೆಸಲು ಪ್ರತಿ ವಾಹನದಲ್ಲಿ ಆರೋಗ್ಯ ಇಲಾಖೆಯ ಸಿಬಂದಿ ಮತ್ತು ಆಶಾಕಾರ್ಯಕರ್ತೆಯರು ಮನೆಗೆ ತೆರಳಿ ಸ್ವಾಬ್ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷಾ ಕೇಂದ್ರಕ್ಕೆ ತಲುಪಿಸಲಾಗುತ್ತದೆ. ಪ್ರತಿ ವಾಹನದಲ್ಲಿ ಓರ್ವ ಲ್ಯಾಬ್ ಟೆಕ್ನಿಷಿಯನ್, ಡಾಟಾ ಎಂಟ್ರಿ ಸಿಬ್ಬಂದಿ ಹಾಗೂ ವಾಹನದ ಚಾಲಕರನ್ನು ನೇಮಿಸಲಾಗಿದೆ. ಮಧ್ಯಾಹ್ನದೊಳಗೆ ಸ್ವಾಬ್ ಪಡೆಯುವ ಜತೆಗೆ ಶೀಘ್ರ ವರದಿ ಪಡೆಯಲೂ ಸಹಕಾರಿಯಾಗಲಿದೆ. ಸಾರ್ವಜನಿಕರು ಆರೋಗ್ಯ ಇಲಾಖೆಯವರಿಗೆ ಸಹಕರಿಸಬೇಕು ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.

ತಾಲೂಕು ಆರೋಗ್ಯಧಿಕಾರಿ ಡಾ. ಕಲಾಮಧು ಮಾತನಾಡಿ, ಆರೋಗ್ಯ ಇಲಾಖೆಯ ಮನವಿಗೆ 8 ವಾಹನಗಳ ವ್ಯವಸ್ಥೆ ಶಾಸಕರು ನೀಡಿರುವುದು ಅಭಿನಂದನೀಯ. ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರು ಯಾವುದೇ ಭಯವಿಲ್ಲದೆ ನಿರ್ಭೀತಿಯಿಂದ ಪರೀಕ್ಷೆ ಮಾಡಿಸಿಕೊಳ್ಳಿ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಸದಸ್ಯ ಶರತ್ ಕುಮಾರ್ ಶೆಟ್ಟಿ, ಮೇಲಂತಬೆಟ್ಟು ಗ್ರಾ.ಪಂ. ಸದಸ್ಯ ಚಂದ್ರರಾಜ್, ಬಿಜೆಪಿ ಪ್ರಮುಖ್ ಬಾಲಕೃಷ್ಣ ಶೆಟ್ಟಿ ಸವಣಾಲು, ತಹಸೀಲ್ದಾರ್ ಮಹೇಶ್ ಜೆ., ತಾ.ಪಂ. ಇಒ ಕುಸುಮಾಧರ್ ಬಿ., ತಾ.ಆಸ್ಪತ್ರೆ ಆಡಳಿತ ವೈದಾಧಿಕಾರಿ ಡಾ. ವಿದ್ಯಾವತಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್., ಆರೋಗ್ಯ ಇಲಾಖೆ ಸಂಯೋಜಕ ಅಜಯ್, ಲ್ಯಾಬ್ ಟೆಕ್ನಿಶನ್ ಮಹಾಂತೇಶ್ ಇದ್ದರು.

error: Content is protected !!