ಬೆಳ್ತಂಗಡಿ: ಈಗಾಗಲೇ ಕೊರೊನಾ ಸೋಂಕು ಗ್ರಾಮಗಳಲ್ಲೂ ಹೆಚ್ಚಾಗುತ್ತಿದ್ದು ಈ ಬಗ್ಗೆ ಗ್ರಾಮ ಮಟ್ಟದ ವಿವಿಧ ಸಂಘ ಸಂಸ್ಥೆಗಳು ಸಹಕರಿಸಿದರೆ ಸೋಂಕು ಹರಡುವುದನ್ನು ತಡೆಗಟ್ಟಬಹುದು ಎಂದು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಹಾಗೂ ವಕೀಲರಾದ ಬಿ.ಕೆ.ಧನಂಜಯ ರಾವ್ ತಿಳಿಸಿದರು.
ಅವರು ಲಾಯಿಲ ಸುಬ್ರಮಣ್ಯ ಸ್ಥಾನಿಕ ಸಭಾ ಭವನದಲ್ಲಿ ಲಾಯಿಲ ಗ್ರಾಮ ಪಂಚಾಯತ್ ಟಾಸ್ಕ್ ಫೋರ್ಸ್ ಸಮಿತಿ ವತಿಯಿಂದ ಕೊರೊನಾ ಸೋಂಕು ನಿಯಂತ್ರಣದ ಬಗ್ಗೆ ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ತಾಲೂಕಿನ ಹಲವು ಗ್ರಾಮಗಳಲ್ಲಿ ಕೊರೊನಾ ತಡೆಗಟ್ಟುವಲ್ಲಿ ಆಯಾಯ ಗ್ರಾಮವಾರು ಸಂಘ ಸಂಸ್ಥೆಗಳು ಜಾತಿ ಭೇಧ ರಾಜಕೀಯ ಮರೆತು ಶ್ರಮಿಸುತ್ತಿವೆ. ಈ ಗ್ರಾಮದಲ್ಲೂ ರಾಜಕೀಯ ರಹಿತವಾಗಿ ಎಲ್ಲರೂ ಒಂದಾಗಿ ಕೊರೊನಾ ಮುಕ್ತ ಗ್ರಾಮದ ಸಂಕಲ್ಪ ಮಾಡಿಕೊಂಡು ಕೆಲಸ ಮಾಡಿದರೆ ಶೀಘ್ರದಲ್ಲೇ ನಮ್ಮ ಗ್ರಾಮವೂ ಮಾದರಿಯಾಗಬಹುದು. ಜನರಲ್ಲಿ ಆತ್ಮ ವಿಶ್ವಾಸ ತುಂಬಿಸುವಂತಹ ಕೆಲಸವನ್ನು ವಾರ್ಡ್ ನ ಗ್ರಾಮಪಂಚಾಯತ್ ಸದಸ್ಯರು ಮಾಡುವುದರೊಂದಿಗೆ ನಿಮ್ಮೊಂದಿಗೆ ನಾವಿದ್ಧೇವೆ ಎಂಬ ಭರವಸೆಯನ್ನು ಜನರಿಗೆ ನೀಡಿ ಧೈರ್ಯ ಕೊಡುವಂತಹ ಕೆಲಸವನ್ನು ಮಾಡುವುದಲ್ಲದೆ ಅವರಲ್ಲಿ ಕೊರೊನಾದ ಮುಂಜಾಗರೂಕತೆ ಕ್ರಮಗಳ ಬಗ್ಗೆ ಜಾಗೃತಿಯನ್ನು ಮೂಡಿಸಬೇಕು. ಅದರೊಟ್ಟಿಗೆ ವಾರ್ಡಿಗೆ ಸಂಬಂಧ ಪಟ್ಟ ಸಂಘ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದರು. ಜನರ ಉಸಿರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತೆಯರಿಗೆ ಸದಾ ಬೆಂಬಲವಾಗಿ ನಿಲ್ಲಬೇಕು. ಈ ನಿಟ್ಟಿನಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ನಿಂದಲೂ ಗ್ರಾಮ ಪಂಚಾಯತ್ ಗೆ ಸಹಕಾರ ನೀಡಲಾಗುವುದು ಎಂದರು. ಗ್ರಾಮದಲ್ಲಿ ಯಾರಿಗಾದರೂ ಅಗತ್ಯ ಬಿದ್ದರೆ ಕೊರೊನಾ ಸಂಬಂಧಿಸಿದಂತೆ ಅವರ ಆರೋಗ್ಯದ ಸ್ಥಿತಿಗಳ ಬಗ್ಗೆ ಉಚಿತವಾಗಿ ತಪಾಸಣೆ ಮಾಡುವ ಬಗ್ಗೆ ಮಾಡಿದ ವಿನಂತಿಗೆ ಜ್ಯೋತಿ ಆಸ್ಪತ್ರೆಯವರು ಒಪ್ಪಿಗೆ ಸೂಚಿಸಿದರು.
ಗ್ರಾಮದಲ್ಲಿ ಆರೋಗ್ಯ ಕಾರ್ಯಕರ್ತೆಯರಿಗೆ, ಆಶಾ ಕಾರ್ಯಕರ್ತೆಯರಿಗೆ, ಮನೆ ಮನೆಗೆ ಹೋಗಿ ಜನರ ಆರೋಗ್ಯ ತಪಾಸಣೆ ನಡೆಸಲು ವಾಹನದ ಅವಶ್ಯಕತೆ ಇದ್ದು ಈ ಬಗ್ಗೆ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ ತನ್ನ ವಾಹನವನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದರು. ಅದಲ್ಲದೆ ಒಂದು ಅಟೋ ರಿಕ್ಷಾವನ್ನೂ ಬಾಡಿಗೆ ಆಧಾರದಲ್ಲಿ ಪಡೆದುಕೊಳ್ಳುವ ಬಗ್ಗೆಯೂ ಸೂಚಿಸಲಾಯಿತು.
ಪರವೂರಿನಿಂದ ನಮ್ಮ ಗ್ರಾಮಕ್ಕೆ ಬರುವವರ ಬಗ್ಗೆ ಮಾಹಿತಿಯನ್ನು ಕಡ್ಡಾಯವಾಗಿ ಸ್ಥಳೀಯರು ಸಂಬಂಧ ಪಟ್ಟವರಿಗೆ ನೀಡಬೇಕು ಗ್ರಾಮ ಪಂಚಾಯತ್ ನಲ್ಲಿ ಕಾರ್ಯನಿರ್ವಹಿಸಲು ಗ್ರಾಮ ಮಟ್ಟದ ಕಾಲ್ ಸೆಂಟರ್ ತೆರದು ಜನರಿಂದ ಬರುವ ಎಲ್ಲ ಮಾಹಿತಿಗಳನ್ನು ಪಡೆದು ತಕ್ಷಣ ಸ್ಪಂದಿಸಿ ಬೇಕಾದ ವ್ಯವಸ್ಥೆ ಮಾಡಬೇಕು. ಪಂಚಾಯತ್ ವ್ಯಾಪ್ತಿಯ ಎಲ್ಲಾ ಅಂಗಡಿ ಮಾಲಕರಿಗೆ ಜನರು ಗುಂಪು ಸೇರದಂತೆ ನೋಡಿಕೊಳ್ಳಲು ಸೂಚಿಸುವುದಲ್ಲದೆ ಮಾಸ್ಕ್ ಧರಿಸದವರಿಗೆ ಪಂಚಾಯತ್ ವತಿಯಿಂದ ದಂಡನೆ ವಿಧಿಸಿ ಎಚ್ಚರಿಕೆ ನೀಡಬೇಕು ಅದಲ್ಲದೆ ರೇಶನ್ ಅಂಗಡಿಗಳಲ್ಲೂ ಎಚ್ಚರಿಕೆಯಿಂದ ಪಡಿತರ ವಿತರಣೆ ಬಗ್ಗೆ ಕ್ರಮ ವಹಿಸಬೇಕು ಎಂಬ ಅಭಿಪ್ರಾಯಗಳೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಲಹೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಲಾಯಿಲ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಆರ್. ತಾಲೂಕು ಪಂಚಾಯತ್ ಸಂಯೋಜಕ ಜಯಾನಂದ, ವಿಮುಕ್ತಿ ಸಂಸ್ಥೆಯ ಫಾ! ವಿನೋದ್, ಪಂಚಾಯತ್ ಸದಸ್ಯರುಗಳು, ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು.ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆ ಮತ್ತು ಕೋವಿಡ್ ವಾರಿಯರ್ಸ್ ಗಳು ಭಾಗವಹಿಸಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೆಂಕಟಕೃಷ್ಣರಾಜ ಸ್ವಾಗತಿಸಿದರು ಕಾರ್ಯದರ್ಶಿ ಪುಟ್ಟಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.