‘ಹಿಂಬಾಗಿಲಲ್ಲಿ‌‌’ ಸಂಜೆವರೆಗೆ ನಡೆಯುತ್ತಿದೆ ಭರ್ಜರಿ ವ್ಯಾಪಾರ!: ಹೊರಗೆ ಲಾಕ್, ಒಳಗೆ ವರ್ಕ್!: ಮದ್ಯ, ಮಾಂಸ, ದಿನಸಿ ವಹಿವಾಟು ಬಿಂದಾಸ್: ಹೆಸರಿಗಷ್ಟೇ ಸಮಯ‌ ಸಡಿಲಿಕೆ‌ ನಿಯಮ: ಲಾಕ್ ಡೌನ್ ಮುಂದುವರಿದಲ್ಲಿ ಷರತ್ತು ಪಾಲಿಸುವವರಿಗೂ‌ ಶಿಕ್ಷೆ!: ಸಾರ್ವಜನಿಕರಿಗೂ‌ ಅಪಾಯ‌ ಕಟ್ಟಿಟ್ಟ ಬುತ್ತಿ: ಎಚ್ಚೆತ್ತುಕೊಳ್ಳಬೇಕಿದೆ ಸ್ಥಳೀಯಡಳಿತ, ಪ್ರಬುದ್ಧ ಜನತೆ

ಮಂಗಳೂರು: ಸಧ್ಯ ದ.ಕ. ಜಿಲ್ಲೆಯಲ್ಲಿ ಬೆಳಗ್ಗೆ 6ರಿಂದ 10ರವರೆಗೆ ಅಗತ್ಯ ವಸ್ತುಗಳನ್ನು ಕೊಳ್ಳಲು ನಿಯಮ‌ ಸಡಿಲಿಕೆ ‌ಮಾಡಲಾಗಿದೆ. ಕೇವಲ ಮೆಡಿಕಲ್ ಆಸ್ಪತ್ರೆಗಳಷ್ಟೇ ತೆರೆದಿರುತ್ತವೆ. ಆದರೆ ನಿಯಮಾವಳಿ‌ ಇದ್ದರೂ ಜಿಲ್ಲೆಯ ವಿವಿಧೆಡೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಇಡೀ ದಿನ ಹಿಂಬಾಗಿಲಲ್ಲಿ‌ ಮದ್ಯ, ಮಾಂಸ‌, ದಿನಸಿ, ಹೋಟೆಲ್ ಹಾಗೂ ಇತರ ಅಂಗಡಿಗಳಲ್ಲಿ ವ್ಯಾಪಾರ, ವಹಿವಾಟು ಬಿಂದಾಸ್ ಆಗಿ‌ ನಡೆಯುತ್ತಿದೆ.

ಹೊರಗೆ ಅಂಗಡಿ ಲಾಕ್, ಒಳಗೆ ವರ್ಕ್ ಹಾಗೂ ಸೇಲ್!:

ಸ್ಥಳೀಯವಾಗಿ ಜನತೆ ಮಧ್ಯಾಹ್ನ, ಸಂಜೆ ಹೀಗೆ ತಮ್ಮ ಅಗತ್ಯಕ್ಕೆ ತಕ್ಕಂತೆ ‌ನಿರಾಳವಾಗಿ ಸಾಮಗ್ರಿಗಳನ್ನು ಕೊಂಡು ತರುತ್ತಿದ್ದಾರೆ. ಬರೀ ದಿನಸಿ ಮಾತ್ರವಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಮದ್ಯ, ಮಾಂಸ ಮಾರಾಟವೂ ಎಗ್ಗಿಲ್ಲದೆ ಸಾಗಿದೆ. ಹೊರಗಿಂದ ದೊಡ್ಡ ಲಾಕ್ ಇದ್ದರೂ, ಒಳಗೆ ಪ್ಯಾಕಿಂಗ್ ನಂತಹಾ ಕೆಲಸಗಳು ನಡೆಯುತ್ತಿರುತ್ತವೆ. ಜೊತೆಗೆ ವ್ಯಾಪಾರ ವಹಿವಾಟು ಬಿಂದಾಸ್ ಆಗಿ ನಡೆಯುತ್ತಿರುತ್ತದೆ. ಈ ಅಕ್ರಮ ವ್ಯಾಪಾರ ಭರಾಟೆ ಜೊತೆಗೆ ಜೊತೆಗೆ ಕೊರೋನಾ ವೈರಸ್ ಕೂಡ ಉಚಿತವಾಗಿ ಹಂಚಿಕೆಯಾಗುತ್ತಿದೆ. ಇಂಥಹ ಕೆಲ ನಿಯಮ ಪಾಲಿಸದವರಿಂದಾಗಿ ವ್ಯಾಪಾರಸ್ಥರು, ಸಾರ್ವಜನಿಕರು ಸೇರಿ ಇಡೀ ಸಾಮಾಜ ನಿಯಮ ಪಾಲಿಸುತ್ತಿರುವವರೂ ಲಾಕ್ ಡೌನ್ ವಿಸ್ತರಣೆಯಂತಹಾ ಶಿಕ್ಷೆ ಎದುರಿಸಬೇಕಾದ ಸಂದರ್ಭ ಎದುರಾಗಿದೆ.

ಪೊಲೀಸ್ ‌ಕ್ರಮಕ್ಕೂ‌ ಬಗ್ಗುತ್ತಿಲ್ಲ: 

ಕೆಲವೆಡೆ ಫ್ಯಾನ್ಸಿ, ದಿನಸಿ, ಮೊಬೈಲ್ ಶಾಪ್ ಹಾಗೂ ಇತರೆ ‌ಕೆಲವು ಅಂಗಡಿಗಳು ಸಮಯ‌ ಮೀರಿದ ಬಳಿಕವೂ ತೆರೆದಿದ್ದು ಕೆಲವೆಡೆ ಪೊಲೀಸರು ದಾಳಿ‌ ಮಾಡಿ‌‌ ಕ್ರಮ ಕೈಗೊಂಡಿದ್ದಾರೆ. ಆದರೂ ಕೆಲವೆಡೆ ಅಕ್ರಮ ವ್ಯಾಪಾರ ನಡೆಸಲಾಗುತ್ತಿದೆ. ಇಂತಹ ‌ಸಂದರ್ಭದಲ್ಲಿ ಅಕ್ರಮ ನಡೆಸುತ್ತಿರುವ ಅಂಗಡಿಗಳ ಲೈಸೆನ್ಸ್ ಕ್ಯಾನ್ಸಲ್, ಕಠಿಣ ‌ಶಿಕ್ಷೆಗಳನ್ನು ವಿಧಿಸಿ ಸಾರ್ವಜನಿಕರನ್ನು ಕಾಪಾಡಬೇಕಾದ ಅನಿವಾರ್ಯತೆ ಇದೆ. ಜಿಲ್ಲೆಯ ಹಲವು ತಾಲೂಕುಗಳಲ್ಲಿ ಈ ರೀತಿಯ ‌ಅಕ್ರಮ ನಡೆಯುತ್ತಿದ್ದು ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ, ಸುಳ್ಯ ಮಂಗಳೂರಿನ ‌ಹಲವೆಡೆ ಕಟ್ಟುನಿಟ್ಟಾದ ಕ್ರಮಕ್ಕೆ ಜಿಲ್ಲಾಧಿಕಾರಿ ಆದೇಶ ನೀಡಬೇಕಿದೆ.

ಅಕ್ರಮ ಮದ್ಯ ಮಾರಾಟ: 

ಮದ್ಯ ಮಾರಾಟಕ್ಕೆ ಬೆಳಗ್ಗೆ ಸಮಯ ನಿಗದಿಪಡಿಸಲಾಗಿದೆ. ಆದರೆ ಜಿಲ್ಲೆಯ‌ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಸಂಜೆಯೂ ಹಿಂಬಾಗಿಲ ಮೂಲಕ ಮದ್ಯ ಅಕ್ರಮವಾಗಿ ಮಾರಾಟ ‌ಮಾಡುತ್ತಿರುವ ಕುರಿತು ಮಾಹಿತಿ ಲಭಿಸಿದೆ. ಮುಖ್ಯವಾಗಿ ‌ದಿನನಿತ್ಯದ ಗ್ರಾಹಕರು ಫೋನ್ ಮೂಲಕ‌ ಸಂಪರ್ಕಿಸಿ ಅಥವಾ ಮಧ್ಯವರ್ತಿಗಳ ಮೂಲಕ ಮಾರಾಟ ಮಾಡಲಾಗುತ್ತಿದೆ. ಆದರೆ ಹೊರಜಗತ್ತಿಗೆ ಯಾವುದೇ ಮಾಹಿತಿ ಲಭಿಸದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ.

ಮಾಂಸ ‘ಹೋಂ ಡೆಲಿವರಿ’!: 

ಮಾಂಸ ಪ್ರಿಯರು ಮನೆಯಲ್ಲೇ ಇದ್ದು ತಮಗೆ ಬೇಕಾದ ಸಂದರ್ಭದಲ್ಲಿ(ಸಂಜೆಯೂ) ನೇರವಾಗಿ ಮಾಂಸ ಖರೀದಿ ಮಾಡುತ್ತಿದ್ದಾರೆ. ಇನ್ನು ‌ಕೆಲ ಪ್ರದೇಶದಲ್ಲಿ ಹೋಂ ಡೆಲಿವರಿ ಸೌಲಭ್ಯವೂ ಇದ್ದು, ಮಾಂಸ ವ್ಯಾಪಾರಿಗಳು ಲಾಕ್ ಡೌನ್ ಸಮಯದಲ್ಲಿ ಅಕ್ರಮವಾಗಿ ಮಾಂಸ ತಲುಪಿಸುತ್ತಿರುವ ಕುರಿತು ‌ಮಾಹಿತಿ ಲಭಿಸಿದೆ. ಇನ್ನೂ ‌ಕೆಲ‌‌ ಮಾಂಸ ಮಾರಾಟಗಾರರು ತುರ್ತು ಅಗತ್ಯ ಅಥವಾ ಗ್ರಾಹಕರು ಬಯಸಿದಲ್ಲಿ ಕತ್ತರಿಸದೆ, ‌ಇಡೀ‌‌ ಕೋಳಿ‌ಯನ್ನೇ ತಲುಪಿಸುವ ವ್ಯವಸ್ಥೆಯೂ‌ ಇದೆ. ಮಟನ್, ಪೋರ್ಕ್, ಮೀನು, ಒಣ ಮೀನನ್ನೂ ಇದೇ ರೀತಿ ತಲುಪಿಸುವ ‌ಕುರಿತು‌ ಮಾಹಿತಿ ‌ಲಭಿಸಿದೆ.

ದಿನಸಿ ಮಳಿಗೆ, ಹೋಟೆಲ್ ಓಪನ್: 

ದಿನ ಬಳಕೆ ವಸ್ತುಗಳನ್ನು ವ್ಯಾಪಾರ ಮಾಡುವ ಮಳಿಗೆಗಳು ‌ಹಿಂಬಾಗಿಲ‌ ಮೂಲಕ‌ ಗ್ರಾಮೀಣ ಪ್ರದೇಶಗಳಲ್ಲಿ ‌ವಸ್ತುಗಳನ್ನು ವಿತರಣೆ ಮಾಡುತ್ತಿವೆ. ಕೆಲವೆಡೆ ಗ್ರಾಮೀಣ ಪ್ರದೇಶಗಳಲ್ಲಿ ಸಂಜೆಯೂ ಬಿಂದಾಸ್ ಆಗಿ‌ ಮುಂಬಾಗಿಲನ್ನು ತೆರೆದು ಸಂಜೆಯೂ ವ್ಯಾಪಾರ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.‌ ಕೆಲ ಹೋಟಲ್ ಗಳು ಸಂಜೆಯೂ ತೆರೆದು ವ್ಯವಹಾರ ಮಾಡುತ್ತಿರುವ ಮಾಹಿತಿ ಲಭಿಸಿದೆ.

ಸ್ಥಳೀಯಡಳಿತದ ಕುಮ್ಮಕ್ಕು: 

ಹೀಗೆ‌ ಲಾಕ್ ಡೌನ್ ಸಮಯಯದಲ್ಲೂ ಹಿಂಬಾಗಿಲ ಮೂಲಕ ವ್ಯಾಪಾರ ಮಾಡುತ್ತಿರುವ ಮಾಹಿತಿ ಸ್ಥಳೀಯಾಡಳಿತ, ಸ್ಥಳೀಯ ಜನಪ್ರತಿನಿಧಿಗಳಿಗೆ ಮಾಹಿತಿ ಇದ್ದರೂ ಜಾಣ ಕುರುಡರಾಗುತ್ತಿದ್ದಾರೆ. ಒಳ ಒಪ್ಪಂದ, ಓಟ್ ಬ್ಯಾಂಕ್ ರಾಜಕೀಯ, ಡೀಲಿಂಗ್ ಮೂಲಕ ಯಾರೂ ಈ ವ್ಯಾಪಾರಕ್ಕೆ ತಡೆ ಒಡ್ಡುವವರಿಲ್ಲ ಎಂಬಂತಾಗಿದೆ.

ಕೊರೋನಾ ‘ಮನೆ ಮನೆಗೆ’:

ದ.ಕ. ಜಿಲ್ಲೆಯಲ್ಲಿ ಕೊರೋನಾ ದಿನದಿಂದ ದಿನಕ್ಕೆ ಕಡಿಮೆಯಾಗುತ್ತದೆ ‌ಎಂಬ ನಿರೀಕ್ಷೆ ಇದ್ದರೂ ನಿರೀಕ್ಷಿತ ‌ಮಟ್ಟದಲ್ಲಿ ಪ್ರಕರಣಗಳ ಸಂಖ್ಯೆ ಗಣನೀಯ ‌ಪ್ರಮಾಣದಲ್ಲಿ ಇಳಿಕೆ ಕಂಡಿಲ್ಲ. ಸೋಮವಾರವೂ 800ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ರೀತಿ ‌ನಿಯಮ ಮೀರಿ ವ್ಯಾಪಾರ, ವಹಿವಾಟು ನಡೆಸುತ್ತಿರುವುದರಿಂದ ಕೊರೋನಾ ಪ್ರಕರಣ ಗಂಭೀರ ಪ್ರಮಾಣದಲ್ಲಿ ಹೆಚ್ಚುವ ಸಾಧ್ಯತೆ ಇದೆ. ಈ ಹಿಂಬಾಗಿಲ ‌ವ್ಯಾಪಾರ ಮೂಲಕ ‌ಕೊರೋನಾವನ್ನೇ ಮನೆಮನೆಗೆ‌ ಹೋಂ ಡೆಲಿವರಿ ಮಾಡಿದಂತೆ ಕಂಡು ಬರುತ್ತಿದೆ. ಏಕೆಂದರೆ, ಈ‌ ಅಕ್ರಮ ವ್ಯಾಪಾರ ಸಂದರ್ಭದಲ್ಲಿ ಸೋಂಕಿತರೂ‌ ವ್ಯಾಪಾರಸ್ಥರ ಪ್ರಾಥಮಿಕ ಸಂಪರ್ಕಕ್ಕೆ ಬರುವ ಸಾಧ್ಯತೆ ಹೆಚ್ಚು.

ನಿಯಮ ಪಾಲಿಸುವವರಿಗೆ ‘ಬರೆ-ಹೊರೆ’:

ಸರಕಾರ ಲಾಕ್ ಡೌನ್ ವಿಧಿಸಿದೆ, ಅಗತ್ಯ ಸಾಮಗ್ರಿಗಷ್ಟೇ ಬೆಳಗ್ಗೆ 10 ಗಂಟೆಯೊಳಗೆ ಹೊರಗೆ ಹೋಗಿ ಬಂದರೆ ಸಾಕು ಎಂದು‌ ಮನೆಯೊಳಗೆ ‌ಕೂತು ಸರಕಾರದ ನಿಯಮ ಕಟ್ಟು ನಿಟ್ಟಾಗಿ‌ ಪಾಲಿಸುವವರಿಗೂ ಗಾಯದ ಮೇಲೆ ಬರೆ ಎಂಬಂತೆ ಹೆಚ್ಚುವರಿ ಲಾಕ್ ಡೌನ್ ಶಿಕ್ಷೆಯ ಹೊರೆ ಪಕ್ಕಾ ಆದಂತೆ ಕಂಡುಬರುತ್ತಿದೆ. ನಿಯಮ ಮೀರುತ್ತಿರುವ ಕೆಲವರಿಂದಾಗಿ‌ ಪ್ರಾಮಾಣಿಕ ವ್ಯಕ್ತಿಗಳೂ ಶಿಕ್ಷೆ ಅನುಭವಿಸುವಂತಾಗಿದೆ‌.

ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಿದೆ: 

ಯಾರೋ‌ ಬೆರಳೆಣಿಕೆ ಮಂದಿ ಮಾಡುವ ತಪ್ಪಿನಿಂದ ಇಡೀ ಸಮಾಜ‌ ಗಂಭೀರ ಸಮಸ್ಯೆ ಎದುರಿಸುವ ಆಪತ್ತು ಇದೆ‌. ಆದ್ದರಿಂದ ಸಾರ್ವಜನಿಕರು ಈ ರೀತಿ ಅಕ್ರಮ ಎಸಗುವವರ ವಿರುದ್ಧ ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸಬೇಕಿದೆ‌‌. ಜೊತೆಗೆ ‌ನಿಯಮ ಪಾಲನೆ ಮೂಲಕ ತಮ್ಮನ್ನು ತಾವು ‌ಕಾಪಾಡಿಕೊಳ್ಳಬೇಕಿದೆ.

ಜಿಲ್ಲಾಡಳಿತ, ಪೊಲೀಸ್ ಸಹಕಾರ ಅಗತ್ಯ:

ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಅಕ್ರಮ ಎಸಗುತ್ತಿರುವ ವ್ಯಕ್ತಿಗಳ ವಿರುದ್ಧ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕಿದೆ. ಅಕ್ರಮ ಎಸಗುವವರಿಗೆ ದೀರ್ಘಾವಧಿ ಪರಿಣಾಮ ಬೀರುವ ಶಿಕ್ಷೆ ವಿಧಿಸಬೇಕಾದ ಅಗತ್ಯತೆಯಿದೆ‌. ಆಗಲೇ ನಿಯಮ ಪಾಲಿಸುತ್ತಿರುವ ಪ್ರಾಮಾಣಿಕರ ನಡೆಗೂ ಬೆಲೆ ನೀಡಿದಂತಾಗುತ್ತದೆ.

ಕೋಟ್ಯಾಧಿಪತಿಗಳಿಂದ ಹಿಡಿದು ‌ಕಡು ಬಡವರವರೆಗೆ ಎಲ್ಲರೂ ‌ಕೊರೋನಾ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರಕಾರದ ನಿಯಮ ಪಾಲನೆ ಮೂಲಕ ಸಾರ್ವಜನಿಕರು ಆದಷ್ಟು ಶೀಘ್ರವಾಗಿ ಕೊರೋನಾ ‌ಸೋಂಕು ಹರಡುವಿಕೆ ತಡೆಗಟ್ಟಲು ಕೈಜೋಡಿಸಬೇಕಿದೆ. ಕೊರೋನಾ ಸೋಂಕಿನ ಜೊತೆಗೆ ಕೊರೋನಾ ಹರಡುತ್ತಿರುವ ಸಮಾಜ ಘಾತಕ ಶಕ್ತಿಗಳ ವಿರುದ್ಧವೂ ಹೋರಾಡಬೇಕಿದೆ.

error: Content is protected !!