ಧರ್ಮಸ್ಥಳ: ಧರ್ಮಸ್ಥಳ ಗ್ರಾಮ ಪಂಚಾಯತ್ ವತಿಯಿಂದ ಇಲ್ಲಿಯ ಪ್ರತಿ ವಾರ್ಡ್ ಗಳಲ್ಲಿ ಕೋವಿಡ್ ಬಗ್ಗೆ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು ಅಶೋಕನಗರದಲ್ಲಿ ಜಾಗೃತಿ ಕಾರ್ಯಕ್ರಮ ಮೇ 17ರಂದು ಜರುಗಿತು.
ಧರ್ಮಸ್ಥಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಆಕಾಶ್‌ರವರು ಜನರಿಗೆ ಕೋವಿಡ್ ರೋಗ ಹರಡದಂತೆ ವಹಿಸಬಹುದಾದ ಮುಂಜಾಗೃತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಅಶೋಕನಗರದಲ್ಲಿ ಮೂರು ಕೋವಿಡ್ ಪಾಸಿಟಿವ್ ಪ್ರಕರಣ ಕಂಡುಬಂದಿದ್ದು ಧರ್ಮಸ್ಥಳ ಗ್ರಾಮ ಪಂಚಾಯತ್ ಎಲ್ಲರಿಗೂ ಸೂಕ್ತ ವ್ಯವಸ್ಥೆಯನ್ನು ಕೈಗೊಂಡಿದೆ. ಆದರೂ ಇಲ್ಲಿ ಅನೇಕ ಮನೆಗಳು ಹತ್ತಿರ ಹತ್ತಿರವಿದ್ದು ಕೋವಿಡ್ ಹರಡುವ ಭೀತಿ ಹೆಚ್ಚಿದ್ದು ಈ ಬಗ್ಗೆ ಮುಂಜಾಗೃತಾ ಕ್ರಮಗಳನ್ನು ವಹಿಸುವಂತೆ ಮತ್ತು ಜನರಲ್ಲಿ ಇನ್ನೂ ಹೆಚ್ಚಿನ ಜಾಗೃತಿಯನ್ನು ಮೂಡಿಸುವಂತೆ, ಸಾಧ್ಯವಿದ್ದಲ್ಲಿ ಸ್ಯಾನಿಟೈಶೇಷನ್ ಮಾಡುವಂತೆ ಮತ್ತು ಡೆಂಗ್ಯೂ, ಮಲೇರಿಯಾ ಮುಂತಾದ ರೋಗಗಳ ತಡೆಗಾಗಿ ಫಾಗಿಂಗ್ ವ್ಯವಸ್ಥೆಯನ್ನೂ ಮಾಡುವಂತೆ ಆದಿದ್ರಾವಿಡ ಸಮಾಜ ಸೇವಾ ಸಂಘದ ವತಿಯಿಂದ ಗ್ರಾಮ ಪಂಚಾಯತ್‌ಗೆ ಮನವಿ ಸಲ್ಲಿಸಲಾಗಿತ್ತು. ಅಲ್ಲದೇ ಈ ಕಾರ್ಯದಲ್ಲಿ ಆದಿದ್ರಾವಿಡ ಸಂಘಟನೆಯು ಗ್ರಾಮ ಪಂಚಾಯತ್‌ಗೆ ಸಂಪೂರ್ಣ ಸಹಕಾರ ನೀಡುವುದಾಗಿಯೂ ಮನವಿಯಲ್ಲಿ ತಿಳಿಸಲಾಗಿತ್ತು.
ಗ್ರಾ.ಪಂ. ಅಧ್ಯಕ್ಷೆ ಜಯಾ ಮೋನಪ್ಪ ಗೌಡ, ಉಪಾಧ್ಯಕ್ಷ ಶ್ರೀನಿವಾಸ ರಾವ್, ಸದಸ್ಯರಾದ ಗಾಯತ್ರಿ ಹೆಗ್ಡೆ, ಸುನೀತಾ, ಸುಧಾಕರ ಗೌಡ ಕೆ., ದಿನೇಶ್ ರಾವ್, ಹರ್ಷಿತ್ ಜೈನ್, ರವಿ ಕುಮಾರ್, ರಾಮಚಂದ್ರ ರಾವ್, ಹರೀಶ್ ಸುವರ್ಣ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮೇಶ್ ಕೆ., ಸಿಬ್ಬಂದಿಗಳಾದ ಶೇಖರ್ ವಿ., ವೀರಪ್ಪ, ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ ಧರ್ಮಸ್ಥಳ ವಲಯ ಘಟಕದ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ರಘು, ಮಹಿಳಾ ಘಟಕದ ಅಧ್ಯಕ್ಷೆ ಹೊನ್ನಮ್ಮ, ಅನಿತಾ ಹಾಗೂ ಸದಸ್ಯರು ಉಪಸ್ಥಿತರಿದ್ದರು.