ಲಾಯಿಲ ಮಳೆಗೆ ಕೊಚ್ಚಿ ಹೋದ ತಾತ್ಕಾಲಿಕ ಮಣ್ಣಿನ ಸೇತುವೆ

ಬೆಳ್ತಂಗಡಿ : ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಅಕಾಲಿಕ ಮಳೆಯಾಗುತ್ತಿದ್ದು, ತಾಲೂಕಿನ ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಿಂದ ತಾಲೂಕಿನ ಲಾಯಿಲ ಗ್ರಾಮದ ಬಜಕ್ರೆಸಾಲು ಹಳ್ಳ ಎಂಬಲ್ಲಿ ಹೊಸ ಸೇತುವೆಯ ಕಾಮಗಾರಿ ನಡೆಯುತ್ತಿದ್ದು, ಜನರ ಅನುಕೂಲತೆಗಾಗಿ ಇಲ್ಲಿ ಹಾಕಲಾಗಿದ್ದ ತಾತ್ಕಾಲಿಕ ಮಣ್ಣಿನ ಸೇತುವೆ ಮಳೆಯ ನೀರಿಗೆ ಕೊಚ್ಚಿಕೊಂಡು ಹೋಗಿದೆ.

ಗ್ರಾಮ ಸಡಕ್ ಯೋಜನೆಯಡಿ ಲಾಯಿಲ-ಕನ್ನಾಜೆ-ಕರ್ನೋಡಿ-ಮುಂಡೂರು ಸಂಪರ್ಕ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಇದರ ಮಧ್ಯೆ ಲಾಯಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಕ್ರೆಸಾಲು ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ ಕಾಮಗಾರಿಗಳು ಆರಂಭವಾಗಿದ್ದವು. ಇಲ್ಲಿನ ಹಳೆಯ ಕಿಂಡಿ ಅಣೆಕಟ್ಟಿನ ಸೇತುವೆಯನ್ನು ಕೆಡವಿ ಜನರ ಬಹು ವರ್ಷದ ಬೇಡಿಕೆಯಾಗಿ ವಾಹನ ಸಂಚಾರದ ನೂತನ ಸೇತುವೆ ನಿರ್ಮಾಣವಾಗುತ್ತಿದೆ. ಇಲ್ಲಿನ ಸೋಮವತಿ ನದಿಯ ಉಪ ನದಿ ಬಜಕ್ರೆಸಾಲು ಹಳ್ಳಕ್ಕೆ ಮಣ್ಣು ಹಾಕಿ ತಾತ್ಕಾಲಿಕ ಸಂಪರ್ಕ ರಸ್ತೆಯನ್ನು ನಿರ್ಮಿಸಲಾಗಿತ್ತು. ಅದರೆ ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ಈ ರಸ್ತೆ ಕೊಚ್ಚಿಕೊಂಡು ಹೋಗಿ ನದಿಯ ಇನ್ನೊಂದು ಬದಿಗೆ ಹೋಗುವ ಸಂಪರ್ಕ ಕಡಿತಗೊಂಡಿದೆ.

ಅಕಾಲಿಕ ಮಳೆಯಿಂದ ತಾತ್ಕಾಲಿಕ ಮಣ್ಣಿನ ರಸ್ತೆ ಸಂಪರ್ಕ ಕಡಿತದಿಂದ ಕನ್ನಾಜೆ ಸೇರಿದಂತೆ ಈ ಭಾಗದ ಜನರಿಗೆ ಪರ್ಯಾಯ ರಸ್ತೆ ಇರುವ ಕಾರಣ ಯಾವುದೇ ಸಮಸ್ಯೆ ಇಲ್ಲವಾಗಿದೆ. ಬೆಳ್ತಂಗಡಿ ನಗರಕ್ಕೆ ಬರಬೇಕಾದರೆ ಈ ಹಿಂದೆ ಇದ್ದ ರಸ್ತೆಯನ್ನೇ ಬಳಸಬೇಕಾಗಿದೆ.

ಗುರುವಾಯನಕರೆಯಲ್ಲಿ ಟ್ರಾಫಿಕ್ ಜಾಮ್ ಆದರೆ ವೇಣೂರು, ನಾರಾವಿ ಭಾಗದ ಜನರಿಗೆ ಸಮಸ್ಯೆ ಆಗುವ ನಿಟ್ಟಿನಲ್ಲಿ ಬದಲಿ ರಸ್ತೆಯ ಯೋಜನೆಯನ್ನು ಶಾಸಕ ಹರೀಶ್ ಪೂಂಜ ಅವರು ವಿಶೇಷ ಮುತುವರ್ಜಿಯಲ್ಲಿ ಅನುದಾನ ಬಿಡುಗಡೆಗೊಳಿಸಿದ್ದರು. ಬಹುತೇಕ ರಸ್ತೆ ಕಾಮಗಾರಿ ಕಾಮಗಾರಿಗಳು ಪೂರ್ಣಗೊಂಡಿದ್ದು, ಸೇತುವೆ ಕಾಮಗಾರಿ ಇತ್ತೀಚೆಗೆ ಆರಂಭಗೊಂಡಿತ್ತು. ಅಕಾಲಿಕ ಮಳೆಯ ನೀರಿನಿಂದಾಗಿ ತಾತ್ಕಾಲಿಕವಾಗಿ ಜನರ ಅನುಕೂಲಕ್ಕಾಗಿ ನಿರ್ಮಿಸಿದ ಮಣ್ಣಿನ ಸಂಪರ್ಕ ಸೇತುವೆ ಕಡಿತಗೊಂಡಿದೆ.

error: Content is protected !!