ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕಂಟೈನ್ಮೆಂಟ್ ಪ್ರದೇಶದ 129 ಕುಟುಂಬಕ್ಕೆ ಆಹಾರ ಕಿಟ್ ವಿತರಣೆ

ಬೆಳ್ತಂಗಡಿ: ಕೊರೊನಾ ಸೋಂಕಿತ ಕಂಟೈನ್ಮೆಂಟ್ ಪ್ರದೇಶ ಎಂದು ಘೋಷಿಸಲಾದ ಬೆಳ್ತಂಗಡಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಸುದೆಮುಗೇರು ಹಾಗೂ ಕಳಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಕಟ್ಟೆ ಪ್ರದೇಶದ 129 ಕುಟುಂಬಗಳಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನಿರ್ದೇಶನದ ಮೇರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಭಾನುವಾರ ಅಗತ್ಯ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು.

ಯೋಜನಾಧಿಕಾರಿ ಜಯಕರ ಶೆಟ್ಟಿ ಮಾತನಾಡಿ, ಕೂಲಿ ಕಾರ್ಮಿಕರಿಗೆ ಲಾಕ್ ಡೌನ್ ಸಮಯದಲ್ಲಿ ಅಗತ್ಯ ಆಹಾರಗಳಿಗೆ ಸಮಸ್ಯೆಯಾಗಿದೆ. ಸೀಲ್‌ಡೌನ್ ಸಂದರ್ಭ 15 ದಿವಸ ಹೊರಹೋಗಲು ಕಷ್ಟಸಾಧ್ಯವಾದ್ದರಿಂದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಅವರ ಸೂಚನೆ ಮೇರೆಗೆ 15 ದಿವಸಕ್ಕೆ ಬೇಕಾಗುವ ಆಹಾರ ಒದಗಿಸಲಾಗುತ್ತಿದೆ. ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಎಲ್ ಎಚ್. ಮಂಜುನಾಥ್ ಅವರ ನೇತೃತ್ವದಲ್ಲಿ ತಾಲೂಕಿನ ಸುದೆಮುಗೇರು ಪ್ರದೇಶದ 93 ಕುಟುಂಬ ಮತ್ತು ಕಳಿಯ ಗ್ರಾಮದ ಮಾವಿನಕಟ್ಟೆ ಪ್ರದೇಶದ 36 ಕುಟುಂಬ ಸೇರಿ 129 ಕುಟುಂಬಗಳಿಗೆ ಅಕ್ಕಿ ಮತ್ತು ದಿನ ಬಳಕೆಯ ವಸ್ತುಗಳ ಆಹಾರ ಕಿಟ್ ವಿತರಿಸಲಾಗಿದೆ ಎಂದರು.

ಈಗಾಗಲೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರಾಜ್ಯದ ತಾಲೂಕಿಗಳಿಗೆ ಕೋವಿಡ್ ಸಂಬಂಧಿಸಿ 350 ವಾಹನಗಳನ್ನು ಒದಗಿಸಲಾಗಿದೆ. ಬೆಳ್ತಂಗಡಿಯಲ್ಲಿ 2 ವಾಹನ ಕಾರ್ಯಾಚರಿಸುತ್ತಿದೆ. ವಿಶ್ವದಿಂದ ಕೊರನಾ ನಿರ್ಮೂಲನೆಯಾಗುವಲ್ಲಿ ಎಲ್ಲರ ಸಹಕಾರ ಅಗತ್ಯ. ಪ್ರತಿಯೊಬ್ಬರು ನೆರವಿನ ಹಸ್ತ ಚಾಚುವ ಮೂಲಕ ಬಡವರಿಗೆ ಆಸರೆಯಾಗೋಣ ಎಂದರು.

ಸುದೆಮುಗೇರು ಆಹಾರ ಕಿಟ್ ವಿತರಣೆ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯ ಜಗದೀಶ್, ಶ್ರೀ ಕ್ಷೇ ಧ. ಒಕ್ಕೂಟದ ಅಧ್ಯಕ್ಷ ಸೀತಾರಾಮ್ ಆರ್. ಕಾರ್ಯದರ್ಶಿ ಸುಮಂತ್, ಸೇವಾ ಪ್ರತಿನಿಧಿ ಉಷಾ ಪ್ರಮೋದ್, ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಜಗನ್ನಾಥ ಮತ್ತು ಹನೀಫ್, ಯೋಜನಾ ಕಾರ್ಯಕರ್ತರು ಹಾಗೂ ಕಳಿಯ ಮಾವಿನಕಟ್ಟೆ ಪ್ರದೇಶದಲ್ಲಿ ಕಿಟ್ ವಿತರಣೆ ಸಂದರ್ಭ ಕಳಿಯ ಒಕ್ಕೂಟದ ಅಧ್ಯಕ್ಷ ಪ್ರಕಾಶ್ ಮೇರ್ಲ, ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಸಚಿನ್, ಗಣೇಶ್, ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !!