ಉಜಿರೆ ಎಸ್‌ಡಿಎಂ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಉಚಿತ ಹೆರಿಗೆ, ಚಿಕಿತ್ಸೆ: ಕೋವಿಡ್ ಸಂದರ್ಭ ಆರೋಗ್ಯ ಕಾಳಜಿ ವಹಿಸಲು ಕ್ರಮ: ಸರಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಿಂದ ಅನುಮತಿ ಪತ್ರ ಅವಶ್ಯ

ಧರ್ಮಸ್ಥಳ: ಕೋವಿಡ್ ವಿರುದ್ಧ ಹೋರಾಟದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗಣನೀಯವಾದ ಕೊಡುಗೆ ನೀಡುತ್ತಿದ್ದು, ತನ್ನ ಗ್ರಾಮಾಭಿವೃದ್ಧಿ ಯೋಜನೆ ಕೇಂದ್ರದ ಮೂಲಕ ಸೋಂಕಿತರ ಚಿಕಿತ್ಸೆಗಾಗಿ ಕೋವಿಡ್ ಕೇರ್ ಸೆಂಟರ್ ಹಾಗೂ ವಾಹನ ಸೇವೆ ನಡೆಸುತ್ತಿದೆ. ಇದೀಗ ಸಾಮಾಜಿಕ ಕಳಕಳಿ ಮೆರೆದಿದ್ದು, ಆರೋಗ್ಯ ಬಿಕ್ಕಟ್ಟು ಎದುರಾಗಿರುವ ಇಂತಹ ಸಂದರ್ಭದಲ್ಲಿ ಗರ್ಭಿಣಿಯರ ಆರೋಗ್ಯ ಸಂರಕ್ಷಣೆಗಾಗಿ ಕಾರ್ಯನಿರ್ವಹಿಸಲು ಮುಂದಾಗಿದೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವಿ. ಹೆಗ್ಗಡೆಯವರು, ಗರ್ಭಿಣಿಯರ ಹೆರಿಗೆಗೆ ಅನಾನುಕೂಲ ಆಗಬಾರದೆಂಬ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಿದ್ದು, ತಾಲೂಕು ಹಾಗೂ ಸುತ್ತ-ಮುತ್ತಲಿನ ಗರ್ಭಿಣಿ ಸ್ತ್ರೀಯರು ಚಿಕಿತ್ಸೆ ಪಡೆಯಲು ಅರ್ಹರಾಗಿರುತ್ತಾರೆ.

ಸರ್ಕಾರಿ ಆಸ್ಪತ್ರೆಗಳನ್ನು ಕೋವಿಡ್ ಸೋಂಕಿತರ ಶುಶ್ರೂಷೆಗಾಗಿ ಮೀಸಲಿಟ್ಟಿದ್ದು, ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಿರುತ್ತದೆ. ಈ ನಿಟ್ಟಿನಲ್ಲಿ ಗರ್ಭಿಣಿಯರ ಚಿಕಿತ್ಸೆ ಹಾಗೂ ಹೆರಿಗೆಗೆ ಸಮಸ್ಯೆಯಾಗುವ ಸಂಭವವಿದ್ದು, ಇದಕ್ಕೆ ಪರಿಹಾರವಾಗಿ ಸರಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಿಂದ ಅನುಮತಿ ಪತ್ರ ಪಡೆದು ಬಂದಲ್ಲಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ಉಚಿತ ಹೆರಿಗೆ ಸೌಲಭ್ಯ ನೀಡಲಾಗುವುದು. ಇದರ ಸದುಪಯೋಗ ಪಡೆದುಕೊಳ್ಳುವಂತೆ ಆಸ್ಪತ್ರೆಯ ನಿರ್ದೇಶಕ ಎಂ. ಜನಾರ್ದನ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!