ಬೆಳ್ತಂಗಡಿ: ತಾಲೂಕಿನ ಬೆಳ್ತಂಗಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸುಧೆಮುಗೇರು ಪ.ಜಾತಿ ಕಾಲೋನಿ ಪ್ರದೇಶದ 6 ಮನೆಗಳಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿತ್ತು. ಈ ನಿಟ್ಟಿನಲ್ಲಿ ಈ ಪ್ರದೇಶದ 78 ಮನೆಗಳನ್ನು ಬೆಳ್ತಂಗಡಿ ಪ.ಪಂ. ಕಂಟೋನ್ಮೆಂಟ್ ಪ್ರದೇಶ ಎಂದು ಘೋಷಣೆ ಮಾಡಿ ಸುಧೆಮುಗೇರು ಪರಿಸರವನ್ನು ಸಂಪರ್ಕಿಸುವ ರಸ್ತೆಗಳನ್ನು ಬಂದ್ ಮಾಡಲಾಗಿದೆ.
ಈ ಪ್ರದೇಶದ ಮನೆಗಳಿಗೆ ಮಾಜಿ ಶಾಸಕ ಕೆ.ವಸಂತ ಬಂಗೇರ, ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘ ಹಾಗೂ ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷದ ಸಹಕಾರದೊಂದಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆಯನ್ನು ಸೋಮವಾರ ಮಾಡಲಾಯಿತು.
ಕಂಟೋನ್ಮೆಂಟ್ ಘೋಷಿಸಿದ ಬಳಿಕ ನಗರಾಡಳಿತ ಹಾಗೂ ತಾಲೂಕು ಆಡಳಿತದ ಅಧಿಕಾರಿಗಳ ಸ್ಪಂದನೆ ಸರಿಯಾಗಿ ಸಿಕ್ಕಿಲ್ಲ ಎಂದು ಮಾಜಿ ಶಾಸಕರ ಬಂಗೇರ ಅವರಲ್ಲಿ ಈ ಭಾಗದ ಜನರು ಸಮಸ್ಯೆ ಹೇಳಿಕೊಂಡರು. ತಕ್ಷಣ ತಹಸೀಲ್ದಾರ್, ಪ.ಪಂ. ಮುಖ್ಯಾಧಿಕಾರಿ, ತಾಲೂಕು ಆರೋಗ್ಯಾಧಿಕಾರಿ ಸೇರಿದಂತೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಕೇವಲ ಆರು ಮನೆಗಳಲ್ಲಿ ಪಾಸಿಟಿವ್ ಪ್ರಕರಣಕ್ಕೆ ಸಂಬಂಧಿಸಿದ 78 ಮನೆಗಳನ್ನು ಕಂಟೋನ್ಮೆಂಟ್ ವಲಯ ಎಂದು ಘೋಷಿಸಿ, ಯಾವುದೇ ನಿತ್ಯೋಪಯೋಗಿ ಆಹಾರ ಪದಾರ್ಥಗಳನ್ನು ನೀಡದೆ ಇರುವುದು ಸರಿಯಲ್ಲ ಎಂದ ಅವರು, ತಕ್ಷಣವೇ ಪ.ಪಂ. ನಿಂದ ಆಹಾರ ಪದಾರ್ಥಗಳನ್ನು ಒದಗಿಸಲು ಒತ್ತಾಯಿಸಿದರು.
ಮಾಜಿ ಶಾಸಕ ಕೆ.ವಸಂತ ಬಂಗೇರ, ಸಿಪಿಐ(ಎಂ) ಪಕ್ಷದ ತಾಲೂಕು ಕಾರ್ಯದರ್ಶಿ ಶಿವಕುಮಾರ್ ಎಸ್. ಎಂ., ಮುಖಂಡರಾದ ಶೇಖರ್ ಎಲ್., ಸುಕನ್ಯಾ ಹರಿದಾಸ್, ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘದ ಅಧ್ಯಕ್ಷ ಹರಿದಾಸ್ ಎಸ್.ಎಂ., ಶ್ರಮಶಕ್ತಿ ಸ್ವಸಹಾಯ ಗುಂಪುಗಳ ಒಕ್ಕೂಟದ ಸಂಯೋಜಕ ಸಂಜೀವ ಆರ್. ಉಜಿರೆ, ದಿನೇಶ್ ಓಡಿಲ್ನಾಳ, ಯುವರಾಜ್, ಪ.ಪಂ. ಸದಸ್ಯ ಜಗದೀಶ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಎ.ಜೆ ಅಜೇಯ್ ಜಾಕೋಬ್, ಕಾಂಗ್ರೆಸ್ ಪ.ಜಾತಿ ಘಟಕದ ತಾಲೂಕು ಅಧ್ಯಕ್ಷ ಬಿ.ಕೆ.ವಸಂತ್, ಧರ್ಣಪ್ಪ ಕರ್ಕೇರ ಮೊದಲಾದವರು ಇದ್ದರು.