ಸುದೆಮುಗೇರು ಪ್ರದೇಶಕ್ಕೆ ಸೋಮವಾರ ಸಂಜೆ ತಹಶೀಲ್ದಾರ್, ಅಧಿಕಾರಿಗಳ‌ ಭೇಟಿ: ರಸ್ತೆಗೆ ಅಳವಡಿಸಿದ್ದ ತಡೆಬೇಲಿ ತೆರವು: ಆರು ಮನೆಗಳನ್ನು ಮಾತ್ರ ಕಂಟೋನ್ಮೆಂಟ್ ವಲಯ ಎಂದು ಘೋಷಣೆ

ಬೆಳ್ತಂಗಡಿ: ನಗರ ಪಂಚಾಯತ್ ವ್ಯಾಪ್ತಿಯ ಕಂಟೋನ್ಮೆಂಟ್ ವಲಯ ಎಂದು ಘೋಷಿಸಿರುವ ಸುದೆಮುಗೇರು ಪ್ರದೇಶಕ್ಕೆ ತಹಶೀಲ್ದಾರರು ಸೇರಿದಂತೆ ಅಧಿಕಾರಿಗಳ ತಂಡ ಭೇಟಿ ನೀಡಿ ರಸ್ತೆಗೆ ಅಳವಡಿಸಲಾಗಿದ್ದ ತಡೆಬೇಲಿಯನ್ನು ತೆರವು ಮಾಡಿ , ಕೇವಲ ಆರು ಮನೆಗಳನ್ನು ಕಂಟೋನ್ಮೆಂಟ್ ವಲಯ ಎಂದು ಘೋಷಿಸಿದರು.

ಬೆಳಗ್ಗೆ ಮಾಜಿ ಶಾಸಕ ಕೆ.ವಸಂತ ಬಂಗೇರ ಹಾಗೂ ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್‌ ಪಕ್ಷದ ನಾಯಕರುಗಳಾದ ಶಿವಕುಮಾರ್ ಎಸ್. ಎಂ., ಶೇಖರ್ ಲಾಯಿಲ ಮೊದಲಾದವರು ಭೇಟಿ ನೀಡಿ ಅಲ್ಲಿನ ಮೂಲಭೂತ ಸಮಸ್ಯೆಗಳ ಬಗ್ಗೆ ತಹಶಿಲ್ದಾರ್ ಹಾಗೂ ಆರೋಗ್ಯಾಧಿಕಾರಿಗಳ ಗಮನ ಸೆಳೆದಿದ್ದರು. ಕೋವಿಡ್ 19 ಪಾಸಿಟಿವ್ ಇರುವ ಆರು ಮನೆಗಳ ಬದಲಾಗಿ ಇಡೀ ಪ್ರದೇಶವನ್ನೇ ಕಂಟೋನ್ಮೆಂಟ್ ವಲಯ ಎಂದು ಗುರುತಿಸಿ, ಯಾವುದೇ ಆಹಾರ ಪದಾರ್ಥಗಳನ್ನು ನೀಡದಿರುವುದು ಸರಿಯಲ್ಲ. ತಕ್ಷಣವೇ ಇಲ್ಲಿನ ಜನರಿಗೆ ಮೂಲಭೂತ ಅಗತ್ಯಗಳನ್ನು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸೋಮವಾರ ಸಂಜೆ ಬೆಳ್ತಂಗಡಿ ತಹಶೀಲ್ದಾರ್ ಮಹೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಕಲಾಮಧು , ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ , ನ.ಪಂ ಆರೋಗ್ಯಾಧಿಕಾರಿ ಯೋಗೀಶ್ ಅವರ ತಂಡ ಸುದೆಮುಗೇರು ಪ್ರದೇಶಕ್ಕೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿದ ಬಳಿಕ ಸುದೆಮುಗೇರು ಸಂಪರ್ಕಿಸುವ ರಸ್ತೆಗಳಿಗೆ ಅಳವಡಿಸಲಾದ ತಡೆ ಬೇಲಿಯನ್ನು ತೆರವುಗೊಳಿಸಿದರು. ಬುಧವಾರ ಇನ್ನಷ್ಟು ಜನರ ಕೋವಿಡ್ 19 ಪರೀಕ್ಷಾ ವರದಿ ಬರಲಿದ್ದು ಕೋವಿಡ್-19 ಪಾಸಿಟಿವ್ ವರದಿ ಬರುವ ಮನೆಗಳನ್ನು ಕಂಟೋನ್ಮೆಂಟ್ ವಲಯಕ್ಕೆ ಸೇರಿಸಲಾಗುತ್ತದೆ ಎಂದು ತಹಶೀಲ್ದಾರ್ ಮಹೇಶ್ ತಿಳಿಸಿದರು. ಅದಕ್ಕೆ ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿದರು.

error: Content is protected !!