ಅನಗತ್ಯ ಓಡಾಡುವವರಿಗೆ ಲಾಠಿ ರುಚಿ: ಬೆಳಗ್ಗೆ ಬೆಳ್ತಂಗಡಿಯಲ್ಲಿ ವಾಹನ‌ದಟ್ಟಣೆ:  ಜನದಟ್ಟಣೆ ನಿಯಂತ್ರಣಕ್ಕೆ ಹರಸಾಹಸ‌ಪಟ್ಟ ಪೊಲೀಸರು: ಸಾರ್ವಜನಿಕರಲ್ಲಿ ಅರಿವು ಮೂಡುವುದು‌ ಅವಶ್ಯ

ಬೆಳ್ತಂಗಡಿ: ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕೆ ಮಾರ್ಗಸೂಚಿಗಳು ಸರಕಾರದಿಂದ ಬರುತ್ತಿದ್ದರೂ ಸರಿಯಾದ ಮಾಹಿತಿ ಇಲ್ಲದೆ ಸಾರ್ವಜನಿಕರು ನಿಯಮವನ್ನು ಗಾಳಿಗೆ ತೂರಿ ಓಡಾಟ ನಡೆಸುತ್ತಿದ್ದಾರೆ. ಇದಕ್ಕೆ ಸೋಮವಾರ ಬೆಳ್ತಂಗಡಿಯಲ್ಲಿ ಬೆಳಗ್ಗಿನ ಸಮಯ ರಸ್ತೆಗಳಲ್ಲಿ‌ ಇದ್ದ ವಾಹನ ದಟ್ಟಣೆಯೇ ಸಾಕ್ಷಿಯಾಗಿದೆ.

ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸೋಂಕಿನ ನಿಯಂತ್ರಣಕ್ಕೆ ಹರಸಾಹನ ಪಡುತ್ತಿದೆ. ತಾಲೂಕಿನಲ್ಲಿ ಸರಕಾರದ ಮಾರ್ಗಸೂಚಿಯನ್ನು ಪಾಲಿಸದವರಿಗೆ ಎಚ್ಚರಿಕೆ ಜತೆಗೆ ದಂಡ ವಿಧಿಸುತ್ತಿದೆ. ಆದರೆ ಬೆಳ್ತಂಗಡಿಯಲ್ಲಿ ವೀಕೆಂಡ್ ಕರ್ಫ್ಯೂ ಸಂದರ್ಭ ನಿಯಮ ಪಾಲಿಸಿದ್ದ ಜನತೆ, ಸೋಮವಾರ ಬೆಳಗ್ಗೆ ಮಾತ್ರ ಅದನ್ನು ಗಾಳಿಗೆ ತೂರಿದ್ದಾರೆ. ಟಫ್ ರೂಲ್ಸ್ ಇದ್ದರೂ ವಾಹನಗಳ ಓಡಾಟಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಪೊಲೀಸರು ದಂಡ ವಿಧಿಸಿ, ವಾಹನ ಜಪ್ತಿ ಮಾಡುತ್ತಿದ್ದರೂ ಸಾರ್ವಜನಿಕರು ಮಾತ್ರ ಇನ್ನೂ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಸರಕಾರದ ದಿನಕ್ಕೊಂದು ಮಾರ್ಗಸೂಚಿಯ ಪರಿಣಾಮವೇ ಕಾರಣವಾಗಿರಬಹುದೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಸರಕಾರದ ಮಾರ್ಗಸೂಚಿಯಂತೆ ಬೆಳಗ್ಗೆ 6 ರಿಂದ 10ರ ತನಕ ಅಗತ್ಯ ಸಾಮಾಗ್ರಿಗಾಗಿ ಓಡಾಟ ನಡೆಸಲು ಅನುಮತಿಸಿದೆ. ಇದನ್ನೇ ಬಂಡವಾಳವಾಗಿಸಿಕೊಂಡು ನಿಯಮ ಉಲ್ಲಂಘಿಸಿ ಬೆಳ್ತಂಗಡಿ ನಗರದಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿತ್ತು. ಸಂತೆಕಟ್ಟೆಯ ಸಂತೆ ಮಾರುಕಟ್ಟೆ ಬಳಿ ಅಧಿಕ ಜನ ಸಂದಣಿ ಜತೆಗೆ ಪಾರ್ಕಿಂಗ್ ಮಾಡಲು ಅಸಾಧ್ಯವಾಗುವಷ್ಟು ವಾಹನಗಳಿತ್ತು. ಬೆಳ್ತಂಗಡಿ ಪೊಲೀಸರು ಧ್ವನಿವರ್ಧಕದ ಮೂಲಕ ಎಚ್ಚರಿಕೆಯನ್ನು ನೀಡಿದರು. ಜನ ಸಂದಣಿ ಹಾಗೂ ವಾಹನ ದಟ್ಟಣೆಯನ್ನು 10 ಗಂಟೆಯ ಬಳಿಕ ಕಟ್ಟುನಿಟ್ಟಿನ ಕ್ರಮ ಕೈಗೊಂಡು ತಮ್ಮ ನಿಯಂತ್ರಣಕ್ಕೆ ತಂದಿದ್ದಾರೆ. ಸಮಯ ಮೀರಿ ಅಂಗಡಿ-ಮುಂಗಟ್ಟು ತೆರೆದವರಿಗೆ ಬಿಸಿ ಮುಟ್ಟಿದ್ದರು. ಅನಗತ್ಯ ಓಡಾಟ ನಡೆಸಿದವರಿಗೆ ಲಾಠಿಯ ರುಚಿ ತೋರಿಸಿದ್ದಾರೆ. ನಿಯಮ ಮೀರಿ ಓಡಾಟ ನಡೆಸುತ್ತಿದ್ದರೆ ಇವರನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಎಷ್ಟೇ ಕ್ರಮ ವಹಿಸಿದರೂ ಇಲಾಖೆಯ ಶ್ರಮ ವ್ಯರ್ಥವಾಗುತ್ತಿದೆ.

ಅಮಾಯಕರಿಗೆ ಕಿರಿಕಿರಿ:

ಸರಕಾರದ ಮಾರ್ಗಸೂಚಿಯನ್ನು ಮೀರಿ ಅನಗತ್ಯ ಓಡಾಟ ನಡೆಸುವವರಿಂದ ಅಗತ್ಯ ಸಾಮಾಗ್ರಿಗಳಿಗಾಗಿ ಬಂದವರಿಗೆ ಸಮಸ್ಯೆಯಾಗುತ್ತಿದೆ. ಪೊಲೀಸರು ತಾಳ್ಮೆಯಿಂದ ವರ್ತಿಸಿದರೂ ನಿಯಮವನ್ನು ಉಲ್ಲಂಘಿಸಿದವರ ನಡುವೆ ಅಮಾಯಕರೂ ಬಲಿಪಶುವಾಗುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಜನತೆಗೆ ಸರಿಯಾದ ಮಾಹಿತಿ ರವಾನೆ ಆಗುತ್ತಿಲ್ಲ, ದಿನಕ್ಕೊಂದು, ಘಳಿಗೆಗೊಂದು ಬದಲಾಗುತ್ತಿರುವ ಮಾರ್ಗಸೂಚಿಯಿಂದಾಗಿ ಸಾರ್ವಜನಿಕರಲ್ಲೂ ಗೊಂದಲವಿದೆ. ಒಂದೇ ತೆರನಾದ ಮಾರ್ಗಸೂಚಿ ಸರಕಾರ ಅಥವಾ ಜಿಲ್ಲಾಡಳಿತ ನೀಡಿದರೆ ಅದನ್ನು ಗ್ರಾಮ ಮಟ್ಟದಲ್ಲಿ ಸಾರ್ವಜನಿಕರಿಗೆ ತಲುಪುವಂತಾಗಬೇಕು. ಭಾನುವಾರ ತನಕ ವಾಹನದಲ್ಲಿ ಬರುವಂತಿಲ್ಲ ಎಂಬ ಮಾಹಿತಿ ಇದ್ದರೂ, ಭಾನುವಾರ ರಾತ್ರಿ ಅಗತ್ಯ ಸಾಮಾಗ್ರಿಗಳಿಗಾಗಿ ವಾಹನ ಬಳಸಬಹುದು ಮಾರ್ಗಸೂಚಿಯಿಂದಾಗಿ ವಾಹನ ದಟ್ಟಣೆ ಉಂಟಾಗಿದೆ.

ಸರಕಾರದ ಮಾರ್ಗಸೂಚಿಯನ್ವಯ ಪೊಲೀಸ್ ಇಲಾಖೆ ಸಿಬ್ಬಂದಿಗಳ ಕೊರತೆ ಇದ್ದರೂ ಹಗಲಿರುಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಯಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಚೆಕ್ ಪೋಸ್ಟ್‌ಗಳು, ಪಿಕಟಿಂಗ್ ಪಾಯಿಂಟ್ ಹಾಕಲಾಗಿದ್ದರೂ ಓಡಾಟ ಮಾಡುತ್ತಿದ್ದಾರೆ. ಇಲಾಖೆಯಿಂದ ಸಾಧ್ಯವಾದಷ್ಟು ಸರಕಾರದ ಸುತ್ತೋಲೆಯನ್ನು ಪಾಲಿಸುತ್ತಿದ್ದೇವೆ. ಇಲಾಖೆ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ, ಸಾರ್ವಜನಿಕರಲ್ಲಿ ಕೊರೋನಾ ಸೋಂಕಿನ ಕುರಿತು ಅರಿವಾಗಿ ಜಾಗೃತಿ ಮಾಡಿದರೆ ಮಾತ್ರ ಕಡಿವಾಣ ಬರಲು ಸಾಧ್ಯ ಎಂಬುದು ಪೊಲೀಸ್ ಅಧಿಕಾರಿಗಳ ಅಭಿಪ್ರಾಯವಾಗಿದೆ.

error: Content is protected !!