ಬೆಂಗಳೂರು: ಹಲವಾರು ಏಳು ಬೀಳುಗಳ ಮೂಲಕ ಸಾಗುತ್ತಿದ್ದ ಕನ್ನಡ ಬಿಗ್ ಬಾಸ್ ಶೋ ಸರಕಾರದ ಆದೇಶ ಹಾಗೂ ಕೋವಿಡ್ ನಿಯಮ ಪಾಲನೆ ದೃಷ್ಟಿಯಿಂದ ತನ್ನ ಶೋವನ್ನು 71ದಿನಗಳ ಪಯಣದೊಂದಿಗೆ ಸ್ಥಗಿತಗೊಳಿಸಲು ಕಲರ್ಸ್ ಕನ್ನಡ ತೀರ್ಮಾನಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕಲರ್ಸ್ ಕನ್ನಡ ವಾಹಿನಿಯ ಬ್ಯೂಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್, “ಬಿಗ್ ಬಾಸ್ ಮನೆಯೊಳಗಡೆ ಇರುವ ಮಂದಿಗೆ ಸದ್ಯ ಕೋವಿಡ್ ವಿಷಯದಲ್ಲೊ ಹೊರಗೆ ನಡೆಯುತ್ತಿರುವ ಸಂಕಷ್ಟ, ಸಂಕಟಗಳು ತಿಳಿಯುತ್ತಿಲ್ಲ. ಹೊರಗಿನ ಪರಿಸ್ಥಿತಿಯನ್ನು ನೋಡುತ್ತಿದ್ದರೆ ನಿಜಕ್ಕೂ ಮನಸ್ಸಿಗೆ ತುಂಬಾ ಬೇಜಾರು ಆಗುತ್ತದೆ. ಸ್ಪರ್ಧಿಗಳೀಗ ಐಸೋಲೇಷನ್ ನಲ್ಲಿ ಇರುವುದರಿಂದ ಸುರಕ್ಷಿತವಾಗಿದ್ದಾರೆ. ಅವರನ್ನು ನಾಳೆ ಮನೆಯ ಹೊರಗೆ ಕರೆದು ಸುರಕ್ಷಿತವಾಗಿ ಅವರವರ ಮನೆಗೆ ಕಳುಹಿಸಿ ಕೊಡುತ್ತೇವೆ” ಎಂದು ತಮ್ಮ ಸೋಷಿಯಲ್ ಮೀಡಿಯಾ ಖಾತೆಯ ಮೂಲಕ ತಿಳಿಸಿದ್ದಾರೆ.
ಕಳೆದ ಹಲವು ವಾರಗಳಿಂದ ನಟ ಕಿಚ್ಚ ಸುದೀಪ್ ಅನಾರೋಗ್ಯ ಹಾಗೂ ರಾಜ್ಯ ಸರಕಾರದ ನಿಯಮಾವಳಿಗಳಿಂದಾಗಿ ವಾರಾಂತ್ಯದ ವಿಶೇಷ ಎಪಿಸೋಡ್ ಸರಳವಾಗಿ ನಡೆದಿತ್ತು. ಬಳಿಕ ಸುದೀಪ್ ಅವರು ಸ್ಪರ್ಧಿಗಳಿಗೆ ತಮ್ಮ ವಯಕ್ತಿಕ ಸಂದೇಶವನ್ನು ತಿಳಿಸಿದ್ದರು.
ರಾಜ್ಯದಲ್ಲಿ ಕೊರೋನಾ ಹೆಚ್ಚಾಗುತ್ತಿದ್ದು, ಮೇ 10ರಿಂದ ಸರಕಾರ ವಿಶೇಷ ನಿಯಮಾವಳಿ ರೂಪಿಸಿದೆ. ಇದೀಗ ಬಿಗ್ ಬಾಸ್ ಶೋ ತನ್ನ 8 ನೇ ಆವೃತ್ತಿಯನ್ನು ಅರ್ಧಕ್ಕೆ ರದ್ದುಗೊಳಿಸುತ್ತಿರುವ ಬಗ್ಗೆ ಸುದ್ದಿ ಹೊರ ಬಂದಿರುವುದು ಬಿಗ್ ಬಾಸ್ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.