ಬೆಳ್ತಂಗಡಿ 26 ವರ್ಷಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿ ಮರಳಿ ಮನೆಗೆ: ಬೆಳ್ತಂಗಡಿ ತಾಲೂಕಿನ ಬೆಳಾಲು ನಿವಾಸಿ ಶಿವಪ್ಪ ಪೂಜಾರಿ

ಬೆಳ್ತಂಗಡಿ: ಕಾಣೆಯಾದ ವ್ಯಕ್ತಿಯೊಬ್ಬ ಒಂದೆರಡಲ್ಲ 26 ವರ್ಷಗಳ ಬಳಿಕ ಕುಟುಂಬವನ್ನು ಸೇರಿದ ಘಟನೆ ಬೆಳಾಲು ಗ್ರಾಮದ ಓಡಿಪ್ರೊಟ್ಟು ಮನೆಮಂದಿಯ ಅತ್ಯಮೂಲ್ಯ ಸಂತಸದ ಕ್ಷಣಕ್ಕೆ ಕಾರಣವಾಗಿದೆ.

ಬೆಳಾಲು ಗ್ರಾಮದ ಓಡಿಪ್ರೊಟ್ಟು ಮನೆಯ ಕೊರಗಪ್ಪ ಪೂಜಾರಿಯವರ ಪುತ್ರ ಶಿವಪ್ಪ ಪೂಜಾರಿ ಮರಳಿ ಮನೆ ಸೇರಿದವರು. ಶಿವಪ್ಪ ಅವರು ತನಗೆ 20 ವರ್ಷ ವಯಸ್ಸಿದ್ದಾಗ ಮನೆ ತೊರೆದಿದ್ದರು. ಇದೀಗ ಅವರಿಗೆ 46 ವರ್ಷ ವಯಸ್ಸಾಗಿದ್ದು ಅಂದರೆ 26 ವರ್ಷಗಳಿಂದ ಕಾಣೆಯಾಗಿದ್ದು ಅವರು ಮರಳಿ ಮನೆ ಸೇರಿದಂತಾಗಿದೆ.

ಶಿವಪ್ಪ ಪೂಜಾರಿಯವರು ತಮ್ಮ 18ನೇ ವಯಸ್ಸಿನಲ್ಲಿಯೇ ಮನೆ ಬಿಟ್ಟು ತೆರಳಿದ್ದರು. ಬಡತನದ ಸನ್ನಿವೇಶದಿಂದ ಮನೆ ಬಿಟ್ಟು ಹೋಗಿದ್ದ ಅವರು ಆರಂಭದಲ್ಲಿ ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಈ ವೇಳೆ ಮನೆಯವರ ಸಂಪರ್ಕದಲ್ಲಿದ್ದರು. ಬಳಿಕ ಉದ್ಯೋಗ ಅರಸುತ್ತಾ ತರಿಕೆರೆ, ಮೈಸೂರುಕಡೆಗಳಲ್ಲಿ ನೆಲೆಸಿದ್ದು, ಮನೆಮಂದಿ ಸಂಪರ್ಕಕ್ಕೆ ಸಿಗದೆ ಹೋಗಿದ್ದರು. ಹುಡುಕಾಟ ನಡೆಸಿದರೂ ಮಗ ಸಿಗದೆ ಇದ್ದಾಗ ಬರುವ ನಿರೀಕ್ಷೆಯಲ್ಲೆ ದಿನಕಳೆದಿದ್ದರು. ಆದರೆ ಸುಽರ್ಘ ಸಮಯದ ಬಳಿಕ ಮಗ ಮರಳುತ್ತಾನೆ ಎಂಬ ನಿರೀಕ್ಷೆ ಮನೆ ಮಂದಿಯಲ್ಲಿರಲಿಲ್ಲ.

ಊರಿನ ಯುವಕರ ನೆರವು

ಪ್ರಸ್ತುತ ಮೈಸೂರಿನ ಹೋಟೆಲೊಂದರಲ್ಲಿ ಬಾಣಸಿಗನಾಗಿ ಕರ್ತವ್ಯನಿರ್ವಹಿಸುತ್ತಿದ್ದ ಶಿವಪ್ಪ ಅವರು ತರೀಕೆರೆಯ ಮೀನಾಕ್ಷಿಯವರೊಂದಿಗೆ ವಿವಾಹವಾಗಿದ್ದೇನೆ ಎಂದು ಹೇಳುತ್ತಿದ್ದು, ಪುತ್ರ ಪ್ರಸನ್ನ ಕುಮಾರ್, ಮಗಳು ಪ್ರಾರ್ಥನಾರೊಂದಿಗೆ ವಾಸ್ತವ್ಯವಿದ್ದರಂತೆ. ಇದೀಗ ಲಾಕ್‌ಡೌನ್ ಘೋಷಣೆಯಾಗಿದ್ದು, ಮೈಸೂರಿನಲ್ಲಿ ಹೋಟೆಲುಗಳು ಮುಚ್ಚಿರುವುದರಿಂದ ಲಾರಿಯಲ್ಲಿ ಬಂಟ್ವಾಳಕ್ಕೆ ಬಂದಿದ್ದರು.

ಬಂಟ್ವಾಳ ಸಮೀಪದ ಮಾರಿಪಳ್ಳ ಬಸ್ ನಿಲ್ದಾಣದಲ್ಲಿ ಶಿವಪ್ಪ ಪೂಜಾರಿಯವರು ಅಸ್ವಸ್ಥಗೊಂಡು ಬಿದ್ದಿದ್ದರು. ತಕ್ಷಣ ಸ್ಥಳೀಯರು ಆರೈಕೆ ಮಾಡಿ ಊಟ ಕೊಡಿಸಿ ಮನೆ ವಿಚಾರಿಸುವಾಗ ಬೆಳಾಲಿನಲ್ಲಿರುವ ತಮ್ಮ ಮನೆಯವರ ಬಗ್ಗೆ ತಿಳಿಸಿದ್ದರು. ತಕ್ಷಣ ಸ್ಥಳೀಯರೊಬ್ಬರು ವಾಟ್ಸ್‌ಪ್‌ನಲ್ಲಿ ಅವರ ವಿವರ, ಫೋಟೋ ಹಾಕಿದ್ದರು. ವಾಟ್ಸ್‌ಪ್ ಬಳಗದಲ್ಲಿ ಬೆಳಾನಲಿನ ಯುವಕರು ಮನೆಮಂದಿಯನ್ನು ಸಂಪರ್ಕಿಸಿದಾಗ ಕಾಣೆಯಾಗಿದ್ದ ವಿಚಾರ ಖಾತ್ರಿಯಾಗಿತ್ತು.

ತಕ್ಷಣ ತಾರಿದಡಿ ಆದಂ, ಆದರ್ಶನಗರದ ಉಸ್ಮಾನ್, ಕಬೀರ್, ಪರಂಗಿಪೇಟೆಯ ಮುಸ್ತಪ ಕೌಸರಿ ಅವರ ನೆರವಿನೊಂದಿಗೆ ಮೇ 6ರಂದು ಶಿವಪ್ಪರವರ ಓಡಿಪ್ರೊಟ್ಟು ಮನೆಯ ಸಹೋದರರು, ಸಂಬಂಧಿಕರು ಬಂಟ್ವಾಳಕ್ಕೆ ಹೋಗಿ ಮನೆಗೆ ಕರೆದುಕೊಂಡು ಬಂದಿದ್ದರು.

ಶಿವಪ್ಪ ಅವರ ತಂದೆ, ತಾಯಿ ಇಬ್ಬರೂ ಮೂರು ತಿಂಗಳ ಹಿಂದೆ ಮೃಪಟ್ಟಿದ್ದಾರೆ. ಅವರಿಗೆ ಮೂವರು ಸಹೋದರು, ಇಬ್ಬರು ಸಹೋದರಿಯರಿದ್ದು ಈಗ ಹಳೇ ಮನೆಯಲ್ಲಿ ಸಹೋದರನೊಂದಿಗೆ ವಾಸವಿದ್ದಾರೆ. ಕೋವಿಡ್ ಕಾರಣದಿಂದ ಪ್ರತ್ಯೇಕ ವಾಸ್ತವ್ಯ ಕಲ್ಪಿಸಿದ್ದಾರೆ. ಕಳೆದ 26 ವರ್ಷಗಳಿಂದ ನಾಪತ್ತೆಯಾಗಿದ್ದ ಮನೆ ಮಗ ಮರಳಿರುವ ಸಂತೋಷದಲ್ಲಿ ಕುಟುಂಬವಿದ್ದು, ಇತ್ತ ಶಿವಪ್ಪ ಅವರು ಮನೆ ಮಂದಿಯೊಂದಿಗೆ ಸಂತೋಷವಾಗಿ ಸಮಯ ಕಳೆಯುತ್ತಿದ್ದಾರೆ.

error: Content is protected !!