ಬೆಳ್ತಂಗಡಿಯಲ್ಲಿ ಅನಗತ್ಯ ಓಡಾಟಕ್ಕೆ ಬ್ರೇಕ್: ಪೊಲೀಸರಿಂದ ಟಫ್ ರೂಲ್ಸ್: ಕಾನೂನು ಉಲ್ಲಂಘಿಸಿದವರ ಮೇಲೆ ಪ್ರಕರಣ ದಾಖಲು-ವಾಹನ ಜಪ್ತಿ

ಬೆಳ್ತಂಗಡಿ: ಕೊರೋನಾ ಕರ್ಫ್ಯೂ ಜ್ಯಾರಿಯಾಗಿ ವಾರ ಕಳೆದರೂ ಸೋಂಕು ಕಡಿಮೆಯಾಗುತ್ತಿಲ್ಲ. ಸೋಂಕು ನಿಯಂತ್ರಣಕ್ಕೆ ದ.ಕ. ಜಿಲ್ಲೆಯಲ್ಲಿ ಸಾರ್ವಜನಿಕರ ಓಡಾಟ ನಿರ್ಬಂಧಕ್ಕೆ ಮತ್ತಷ್ಟು ಬಿಗು ನಿಧಾರ ಕೈಗೊಳ್ಳಲಾದ ಹಿನ್ನಲೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿಯೂ ಟಫ್ ರೂಲ್ಸ್ ಜ್ಯಾರಿ ಮಾಡಲಾಗಿದೆ. ತಾಲೂಕಿನಲ್ಲಿ ಅನಗತ್ಯವಾಗಿ ಓಡಾಡುತ್ತಿರುವವರ ವಿರುದ್ದ ಹಾಗೂ ವಾಹನಗಳನ್ನು ತಪಾಸಣೆ ನಡೆಸಿ ಪೋಲೀಸರು ದಂಡ ವಿಧಿಸುವ ಕೆಲಸ ಆರಂಭಿಸಿದ್ದಾರೆ.

ಶುಕ್ರವಾರ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 9 ಗಂಟೆಯವರೆಗೆ ಮಾತ್ರ ಅವಕಾಶ ನೀಡಿದ್ದರೂ ಹತ್ತು ಗಂಟೆಯ ವರೆಗೂ ಪೇಟೆಯಲ್ಲಿ ವಾಹನ ಸಂಚಾರ ದಟ್ಟವಾಗಿತ್ತು, 10ಗಂಟೆ ಬಳಿಕ ಬಂದ ಪ್ರತಿಯೊಂದು ಪೋಲೀಸರು ತಪಾಸಣೆ ನಡೆಸಿ ಮಾಹಿತಿಪಡೆದುಕೊಂಡೇ ಕಳುಹಿಸುತ್ತಿದ್ದರು.

ಅನಗತ್ಯವಾಗಿ ಬೈಕ್‌ನಲ್ಲಿ ತಿರುಗಾಡುತ್ತಿದ್ದವರನ್ನು ಪೋಲೀಸರು ಹಿಂದಕ್ಕೆ ಕಳುಹಿಸಿದರು. ಕೆಲವರಿಗೆ ಲಾಠಿಯ ರುಚಿಯೂ ಸಿಕ್ಕಿತ್ತು. ಅನಗತ್ಯ ಸಂಚಾರ ನಡೆಸುತ್ತಿದ್ದವರಿಗೆ ಕೋವಿಡ್ ನಿಯಮ ಉಲ್ಲಂಘಿಸಿದ ಕುರಿತು ದಂಡವನ್ನೂ ವಿಧಿಸಲಾಯಿತು. ಸಂಚಾರ ನಿಯಮಗಳನ್ನು ಉಲ್ಲಂಘಿಸಿದವರಿಗೆ ಹಾಗೂ ಮಾಸ್ಕ್ ಹಾಕದೆ ಸಂಚರಿಸುತ್ತಿದ್ದವರೂ ದಂಡ ಕಟ್ಟಬೇಕಾಯಿತು. ಉಜಿರೆಯಲ್ಲಿ ಬೆಳ್ತಂಗಡಿ ಸಂಚಾರಿ ಠಾಣೆಯ ಪೋಲೀಸರು ಕಟ್ಟು ನಿಟ್ಟಿನ ವಾಹನತಪಾಸಣೆ ನಡೆಸಿದರು.

ತಾಲೂಕಿನಲ್ಲಿ ಅನಗತ್ಯ ಓಡಾಟ ನಡೆಸುವವರ ವಿರುದ್ಧ ದಂಡ ವಿಧಿಸಲಾಗುತ್ತಿದೆ. ವಾಹನಗಳ ಮೇಲೆ ನಿಗಾ ವಹಿಸಲಾಗಿದೆ. ಬೆಳ್ತಂಗಡಿ ಎಸ್‌ಐ ನಂದಕುಮಾರ್, ಪುಂಜಾಲಕಟ್ಟೆ ಎಸ್‌ಐ ಸೌಮ್ಯ, ಧರ್ಮಸ್ಥಳ ಎಸ್‌ಐ ಪವನ್ ನಾಯಕ್, ವೇಣೂರು ಎಸ್‌ಐ ಲೋಲಾಕ್ಷ ಹಾಗೂ ಸಂಚಾರಿ ಠಾಣೆ ಎಸ್‌ಐ ಓಡಿಯಪ್ಪ ಅವರ ನೇತೃತ್ವದಲ್ಲಿ ಸಂತೆಕಟ್ಟೆ, ಕೊಕ್ಕಡ, ನಾರಾವಿ, ಚಾರ್ಮಾಡಿ, ಬಾಂಬಿಲ, ಸಬರಬೈಲು ಬಳಿ ಚೆಕ್ ಪಾಯಿಂಟ್ ಹಾಗೂ ಕಕ್ಕಿಂಜೆ, ಉಜಿರೆ, ಲಾಯಿಲ, ಇಂದಬೆಟ್ಟು, ಗುರುವಾಯನಕೆರೆ, ಕರಿಮಣೇಲು, ಪುಂಜಾಲಕಟ್ಟೆ, ಅಳದಂಗಡಿಯಲ್ಲಿ ಟಿಕೆಟಿಂಗ್ ಪಾಯಿಂಟ್ ಮಾಡಲಾಗಿದ್ದು, ಆಯಾಯ ಕಡೆಯಲ್ಲಿ ಸಿಬಂದಿಗಳನ್ನು ನಿಯೋಜಿಸಲಾಗಿದೆ. ಅನಗತ್ಯ ಓಡಾಟ ನಡೆಸಿದ ವಾಹನಗಳನ್ನು ಆಯಾಯ ಠಾಣಾ ವ್ಯಾಪ್ತಿಯಲ್ಲಿ ಜಪ್ತಿ ಮಾಡಲಾಗಿದೆ. ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗಿದೆ. ಕಾನೂನು ಮೀರಿ ಅಂಗಡಿ ತೆರೆದು ವ್ಯಾಪಾರ ನಡೆಸಿದವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ತಿಳಿಸಿದ್ದಾರೆ.

ಶುಕ್ರವಾರ ಮೊದಲ ದಿನವೇ ಬೆಳ್ತಂಗಡಿ ಠಾಣೆಯಲ್ಲಿ 17 ವಾಹನವನ್ನು ಜಪ್ತಿ ಮಾಡಲಾಗಿದ್ದು, ಎರಡು ಅಂಗಡಿಗಳ ವಿರುದ್ಧ ಪ್ರಕರಣ ದಾಖಲಿಸಿ, 25 ಮಾಸ್ಕ್ ಇಲ್ಲದವರ ವಿರುದ್ಧ ದಂಡ ವಿಧಿಸಿದ್ದಾರೆ. ಧರ್ಮಸ್ಥಳ ಠಾಣೆಯಲ್ಲಿ ಒಂದು ಅಂಗಡಿ ವಿರುದ್ದ ಪ್ರಕರಣ, 4 ವಾಹನ ಜಪ್ತಿ, 40 ಮಾಸ್ಕ್ ಪ್ರಕರಣ ದಾಖಲಾಗಿದೆ. ಪುಂಜಾಲಕಟ್ಟೆ ಠಾಣೆಯಲ್ಲಿ 6 ವಾಹನ ಜಪ್ತಿ, 15 ವಾಹನಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ 2 ವಾಹನವನ್ನು ಜಪ್ತಿ ಮಾಡಲಾಗಿದೆ.

ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿತ್ತು. ಬೆಳ್ತಂಗಡಿ ಹಾಗೂ ಉಜಿರೆಯಲ್ಲಿ ವಾಹನಗಳ ದಟ್ಟಣೆ ಎಂದಿನಂತೆ ಹೆಚ್ಚಿದ್ದರೂ ಪೋಲೀಸರು ತಪಾಸಣೆಯನ್ನು ಬಿಗಿ ಗೊಳಿಸಿದ ಕಾರಣ ವಾಹನಗಳ ಓಡಾಟ ತೀರಾ ಕಡಿಮೆಯಾಗಿತ್ತು. ಸರಕಾರಿ ಕಚೇರಿಗಳಿಗೆ, ಆರೋಗ್ಯ ಇಲಾಖೆ ಹಾಗೂ ಅಗತ್ಯವಾಗಿ ಇರುವವರಿಗೆ ಅವಕಾಶ ನೀಡಲಾಗಿದ್ದು, ಉಳಿದಂತೆ ಕಟ್ಟುನಿಟ್ಟಿನ ವಾಹನ ತಪಾಸಣೆ ಆರಂಭಿಸಿದ್ದು ಮೊದಲ ದಿನ ದಂಡ ವಿಧಿಸಲಾಗಿದೆ. ಇನ್ನೂ ಸರಕಾರದ ಮಾರ್ಗಸೂಚಿಗಳನ್ನು ಪಾಲಿಸದೆ ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಜಪ್ತಿ ಮಾಡುವುದಾಗಿ ಪೋಲೀಸರು ಎಚ್ಚರಿಕೆ ನೀಡಿದ್ದಾರೆ.

error: Content is protected !!