ಬೆಳ್ತಂಗಡಿ: ಕೋವಿಡ್ ಸೋಂಕು ಇದ್ದರೂ ರೋಗ ಲಕ್ಷಣ ಇಲ್ಲದ ರೋಗಿಗಳಿಗಾಗಿ ಚಿಕಿತ್ಸೆ ನೀಡಲು ಉಜಿರೆ ಲಾಯಿಲದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದ್ದು, ಅದನ್ನು ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಅಧಿಕೃತವಾಗಿ ಚಾಲನೆ ನೀಡಿದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಾಗೂ ಜಿಲ್ಲಾಡಳಿತದ ಮನವಿ ಮೇರೆಗೆ ಈ ಕೇಂದ್ರವನ್ನು ಕೋವಿಡ್ ಕೇರ್ ಸೆಂಟರ್‌ಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನೀಡಿದ್ದಾರೆ. ಕಳೆದ ವರ್ಷವೂ ಉಜಿರೆ ಲಾಯಿಲದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರವನ್ನು ಕೋವಿಡ್ ಕೇರ್ ಸೆಂಟರ್‌ಗೆ ಬಿಟ್ಟು ಕೊಡಲಾಗಿತ್ತು. ಈ ವರ್ಷವೂ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಸೋಂಕಿತರ ಆರೈಕೆಗಾಗಿ ಹಾಗೂ ಚಿಕಿತ್ಸೆಗಾಗಿ ಈ ಕೇಂದ್ರವನ್ನು ವ್ಯವಸ್ಥೆ ಮಾಡಲಾಗಿದೆ.
ಶಾಸಕ ಹರೀಶ್ ಪೂಂಜ ಮಾತನಾಡಿ, ತಾಲೂಕಿನಲ್ಲಿ ಕೋವಿಡ್ ಕೇರ್ ಸೆಂಟರ್ ಆಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಹೆಗ್ಗಡೆಯವರು ನೀಡಿದ್ದಾರೆ. 200 ಹಾಸಿಗೆಯುಳ್ಳ ಸುಸಜ್ಜಿತವಾದ ಅಡುಗೆ ಕೋಣೆ, ಸ್ನಾನಗೃಹ, ಶೌಚಾಲಯಗಳಿದೆ. ಕೇರ್ ಸೆಂಟರ್‌ನಲ್ಲಿರುವ ರೋಗಿಗಳಿಗೆ ಇಲ್ಲಿಯೇ ಅಡುಗೆ ವ್ಯವಸ್ಥೆ ಮಾಡಲಾಗುತ್ತದೆ. ತಾಲೂಕು ಆಡಳಿತದಿಂದ ೪ ಮಂದಿ ವೈದ್ಯರನ್ನು ನೇಮಕ ಮಾಡಲಾಗಿದೆ. ಡಾ. ತಾರಕೇಶ್ವರಿ ಹಾಗೂ ಡಾ. ಅಭಿರಾಮ್ ಅವರನ್ನು ತಾಲೂಕು ಆಸ್ಪತ್ರೆಯಿಂದ ಇಲ್ಲಿಗೆ ನಿಯೋಜಿಸಿದ್ದು, ಡಾ. ನಟೇಶ್ ಶರ್ಮ, ಡಾ ತುಷಾರ ಅವರನ್ನು ಹೊರಗುತ್ತಿಗೆಯಲ್ಲಿ ನಿಯೋಜಿಸಲಾಗಿದೆ. ನರ್ಸ್‌ಗಳನ್ನು, ಡಿ ಗ್ರೂಪ್ ನೌಕರರ ಜತೆಗೆ ಇಲ್ಲಿ ಜನಜಾಗೃತಿ ವೇದಿಕೆ ಸಿಬ್ಬಂದಿಗಳು ಹಾಗೂ ಯೋಜನೆಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಕರ್ತವ್ಯ ನಿರ್ವಹಿಸುತ್ತಾರೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಜಿಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಜಿಲ್ಲಾ ಆರೋಗ್ಯಧಿಕಾರಿ ಡಾ. ಕಿಶೋರ್ ಕುಮಾರ್, ಜಿಲ್ಲಾ ಪೋಲಿಸ್ ಅಧೀಕ್ಷಕ ಹೃಷಿಕೇಶ್ ಸೋನಾವನೆ, ಪುತ್ತೂರು ಉಪವಿಭಾಗಧಿಕಾರಿ ಡಾ.ಯತೀಶ್ ಉಳ್ಳಾಲ್, ತಹಸೀಲ್ದಾರ್ ಮಹೇಶ್ ಜೆ., ಆಯುಷ್ಮಾನ್ ನೋಡೆಲ್ ಅಧಿಕಾರಿ ಡಾ.ರತ್ನಾಕರ್, ತಾಲೂಕು ವೈದಾಧಿಕಾರಿ ಡಾ.ಕಲಾಮಧು, ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾಯಸ್, ಎಸ್‌ಡಿಎಂ ಮೆಡಿಕಲ್ ಟ್ರಸ್ಟ್ ಕಾರ್ಯದರ್ಶಿ ಶಿಶುಪಾಲ ಪೂವಣಿ, ಎಸ್‌ಡಿಎಂ ಆಸ್ಪತ್ರೆಯ ಅಧಿಕಾರಿ ಜನಾರ್ದನ್, ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆ ಮುಖ್ಯವೈದಾಧಿಕಾರಿ ಡಾ.ವಿದ್ಯಾವತಿ ಹಾಗೂ ಯೋಜನಾಧಿಕಾರಿಗಳು, ಜನಜಾಗೃತಿ ವೇದಿಕೆ ಸಿಬ್ಬಂದಿಗಳು, ಆಪತ್ತು ನಿರ್ವಹಣ ಘಟಕದ ಸ್ವಯಂ ಸೇವಕರು, ವೈದ್ಯರುಗಳು ಹಾಗೂ ಇನ್ನಿತರರು ಇದ್ದರು.