ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಸೇವಾ ಕಾರ್ಯ ಶ್ಲಾಘನೀಯ: ಕೋಟ ಶ್ರೀನಿವಾಸ ಪೂಜಾರಿ:  ಕೋವಿಡ್ ಬಗ್ಗೆ ಗಂಭೀರ ಕ್ರಮ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಸ್ತುವಾರಿ ಸಚಿವ ಕೋಟ 

ಬೆಳ್ತಂಗಡಿ : ಕೋವಿಡ್ ನಿಯಂತ್ರಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಸೇವಾ ಕಾರ್ಯ ಶ್ಲಾಘನೀಯ ಈಗಾಗಲೇ ಆಕ್ಸಿಜನ್ ಪೂರೈಕೆಗೆ ವ್ಯವಸ್ಥೆ ಕಲ್ಪಿಸಿರುವುದಲ್ಲದೆ ಎಲ್ಲಾ ರೀತಿಯ ಸಹಕಾರ ನೀಡುವ ಬಗ್ಗೆ ಸಮ್ಮತಿ ಸೂಚಿಸಿದ್ದಾರೆ. ಇದೀಗ ಉಜಿರೆಯಲ್ಲಿ ಕೋವಿಡ್ ಕೇರ್ ಸೆಂಟರ್‌ಗೆ ಅವಕಾಶ ಕೊಟ್ಟಿದ್ದಾರೆ. ಧರ್ಮಸ್ಥಳದ ರಜತಾದ್ರಿ ಕಟ್ಟಡವನ್ನು ಕೋವಿಡ್ ಸೆಂಟರ್‌ಗೆ ನೀಡಲು ಉದ್ದೇಶಿಸಿದ್ದಾರೆ. ಅಲ್ಲದೆ ರಾಜ್ಯದ ಹಲವು ಕಡೆ ಕೋವಿಡ್‌ಗಾಗಿ ಸೌಲಭ್ಯ ಒದಗಿಸಿದ್ದು ಇದಕ್ಕೆ ಸರಕಾರದ ಪರವಾಗಿ ಡಾ. ಹೆಗ್ಗಡೆಯವರನ್ನು ಅಭಿನಂದಿಸುತ್ತಿದ್ದೇನೆ ಎಂದು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.

ಅವರು ಬುಧವಾರ ಬೆಳ್ತಂಗಡಿ ಮಂಜುನಾಥ ಕಲಾಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಉಪಸ್ಥಿತಿಯಲ್ಲಿ ಜಿಲ್ಲಾಡಳಿತ, ಜಿ.ಪಂ. ಹಾಗೂ ಆರೋಗ್ಯ ಇಲಾಖೆ ವತಿಯಿಂದ ಕೋವಿಡ್-19 ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯದಲ್ಲಿ ಕೋವಿಡ್ ಕುರಿತು ಗಂಭೀರ ಕ್ರಮ ಕೈಗೊಳ್ಳಲಾಗುತ್ತಿದ್ದು ಕೇಂದ್ರ ಸರಕಾರದ ಸಹಕಾರದಿಂದ ಎಲ್ಲವೂ ನಿಯಂತ್ರಣದಲ್ಲಿದೆ. ಕೇಂದ್ರ ಸರಕಾರ 40 ಟನ್ ಆಕ್ಸಿಜನ್‌ನ್ನು ಬ್ಯಾರೆಲ್ ಮೂಲಕ ಕಳುಹಿಸಿಕೊಟ್ಟಿದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಅಭಿನಂದಿಸುತ್ತೇನೆ. ಲಸಿಕೆ ಅಥವಾ ಇನ್ನಿತರ ಕಾರಣ ನೀಡಿ ಕರ್ತವ್ಯ ಲೋಪ ಎಸಗಬಾರದು. ಎಲ್ಲಾ ಅಧಿಕಾರಿಗಳು ಒಟ್ಟಾಗಿ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕು. ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಇಲಾಖೆಯಲ್ಲಿ ಸಮನ್ವಯತೆ ಇಲ್ಲದಿದ್ದರೆ ಒಗ್ಗಟ್ಟಿನಿಂದ ಕೆಲಸ ಮಾಡಲು ಸಾಧ್ಯವಿಲ್ಲ. ಕಾರ್ಯಪಡೆ ಸಭೆಯನ್ನು ಕಾಟಾಚಾರಕ್ಕೆ ಮಾಡುವುದಲ್ಲ. ಎಲ್ಲಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ನಿಯತ್ತಿನಿಂದ ಕೆಲಸ ಮಾಡಿದರೆ ಕೋವಿಡ್ ನಿಯಂತ್ರಣ ಮಾಡಬಹುದು. ಜವಾಬ್ದಾರಿ ವಹಿಸಿಕೊಂಡ ಅಧಿಕಾರಿಗಳು ಪ್ರತಿ ಕ್ಷಣವೂ ವರದಿಗಳನ್ನು ತರಿಸಿಕೊಂಡು ಕಟ್ಟುನಿಟ್ಟಾಗಿ ತಮ್ಮ ಕರ್ತವ್ಯವನ್ನು ಪಾಲಿಸಿದರೆ ನಾವು ಹಾಕಿಕೊಂಡ ರೂಪುರೇಷೆಗಳು ಯಶಸ್ವಿಯಾಗುತ್ತದೆ. ಶಾಸಕರ ನೇತೃತ್ವದಲ್ಲಿ ನಡೆಯುವಂತಹ ಟಾಸ್ಕ್‌ಫೋರ್ಸ್ ಸಭೆಗೆ ಎಲ್ಲಾ ಗ್ರಾಮ ಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಒಟ್ಟಾಗಿ ಸೇರಿ ಜಾಗೃತರಾಗಬೇಕು ಎಂದರು.

ಬೆಳ್ತಂಗಡಿಯಲ್ಲಿ ಖಾಸಗಿ ಆಸ್ಪತ್ರೆಗಳು ಆಕ್ಸಿಜನ್ ಪ್ಲಾಂಟ್ ಮಾಡೊದಾದ್ರೆ ನೆರವು:ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಕೋವಿಡ್ ಗೆ ಸಂಬಂಧಿಸಿ 20 ಹಾಸಿಗೆ ಇದ್ದು, ಹೆಚ್ಚುವರಿ 10 ಹಾಸಿಗೆ ಇಡಲಾಗಿದೆ. ಆದರೆ ಇನ್ನು 50 ಹಾಸಿಗೆಯನ್ನು ನೀಡಿದರೆ ಉತ್ತಮ. ಅಲ್ಲದೆ ಇಲ್ಲಿಯೇ ಒಂದು ಆಕ್ಸೀಜನ್ ಪ್ಲಾಂಟ್‌ಗೆ ಅವಕಾಶ ಮಾಡಿಕೊಡಬೇಕು. ವೆಂಟಿಲೇಟರ್ ಇರುವ ಅಂಬುಲೆನ್ಸ್ ಕೂಡಾ ಅಗತ್ಯವಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸಂಸದರಲ್ಲಿ‌ಮನವಿ‌ ಮಾಡಿದರು.

ತಾಲೂಕಿನ ಖಾಸಗಿ ಆಸ್ಪತ್ರೆಗಳು ಕೊವೀಡ್ ಸಂದರ್ಭ ಉತ್ತಮ‌ ರೀತಿಯ ಸಹಕಾರ ನೀಡುತ್ತಿದ್ದಾರೆ. ತುರ್ತು ಚಿಕಿತ್ಸೆಗಾಗಿ ಆಕ್ಸಿಜನ್ ಕೊರತೆ ನೀಗಿಸಲು ತಾಲೂಕಿನಲ್ಲಿ ಖಾಸಗಿ ಆಸ್ಪತ್ರೆಗಳು ಆಕ್ಸಿಜನ್ ಪ್ಲಾಂಟ್ ಮಾಡುವುದಾದರೆ ದಾನಿಗಳ ಮೂಲಕ ನೆರವು ನೀಡಲಾಗುವುದು ಎಂದು ಶಾಸಕ ಹರೀಶ್ ಪೂಂಜ ಸಭೆಯಲ್ಲಿ ತಿಳಿಸಿದರು.

ಶಾಸಕರ ಮನವಿಗೆ ಸ್ಪಂದಿಸಿದ ಸಂಸದ ನಳಿನ್ ಕುಮಾರ್ ಕಟೀಲ್

ಶಾಸಕ ಹರೀಶ್ ಪೂಂಜ ಅವರ ಮನವಿಗೆ ಸ್ಪಂದಿಸಿದ ಸಂಸದ ನಳೀನ್ ಕುಮಾರ್ ಕಟೀಲ್ ಹೆಚ್ಚುವರಿಯಾಗಿ 50 ಹಾಸಿಗೆಗಳನ್ನು ಸಿಆರ್‌ಎಸ್ ಮೂಲಕ ಕುದುರೆಮುಖ ಕಂಪೆನಿಯಿಂದ ನೀಡಲಾಗುತ್ತದೆ. ಅಲ್ಲದೆ ಗೇಲ್ ಕಂಪೆನಿಯಿಂದ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಆಕ್ಸೀಜನ್ ಪ್ಲಾಂಟ್ ನೀಡಲಾಗುವುದು ಎಂದು ಭರವಸೆ ನೀಡಿದ ಸಂಸದರು, ಯಾವುದೇ ಕಾರಣಕ್ಕೂ ಕೊರೊನಾ ಕುರಿತು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಕೇಂದ್ರ ಸರಕಾರ ಈಗಾಗಲೇ ಇದಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದ್ದು, ರಾಜ್ಯದಲ್ಲಿ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಆರ್ಥಿಕ ಸಮಸ್ಯೆ ನೆಪವಾಗಿಸಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

6 ದಿನಗಳ ಕಟ್ಟುನಿಟ್ಟಿನ ಕರ್ಫ್ಯೂಗೆ ಪ್ರಸ್ತಾಪ

ಸಾರ್ವಜನಿಕರು, ಸಂಘಸಂಸ್ಥೆಗಳು ಹಾಗೂ ಇನ್ನಿತರರ ಅಭಿಪ್ರಾಯದಂತೆ 6 ದಿನಗಳ ಸಂಪೂರ್ಣ ಕರ್ಫ್ಯೂ ಮಾಡಿದರೆ ಉತ್ತಮ. ಸೋಂಕಿನ ಚೈನ್ ಲಿಂಕ್ ಕಡಿವಾಣ ಮಾಡಿದರೆ ಕೋವಿಡ್ ಸೋಂಕು ಹರಡುವಿಕೆ ಸಾಧ್ಯವಾದಷ್ಟು ನಿಲ್ಲಿಸಬಹುದು. ಜಿಲ್ಲಾಡಳಿತ ಇದಕ್ಕೆ ಸಾಥ್ ಕೊಡಬೇಕು ಎಂದು ಶಾಸಕ ಹರೀಶ್ ಪೂಂಜ ಸಭೆಯಲ್ಲಿ ಪ್ರಸ್ತಾವಿಸಿದರು. ಇದಕ್ಕೆ ಧ್ವನಿಗೂಡಿಸಿದ ಎಂಎಲ್‌ಸಿ ಹರೀಶ್ ಕುಮಾರ್ ಅವರು, ಕೆಲವೊಂದಕ್ಕೆ 6 ರಿಂದ 10 ಗಂಟೆ, 6 ರಿಂದ 12ಗಂಟೆ, 6 ರಿಂದ ಸಂಜೆ 6ರವರೆಗೆ ಅವಕಾಶ ಮಾಡಿಕೊಡಲಾಗಿದೆ. ಆಡಳಿತ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು. ಚೈನ್ ಲಿಂಕ್ ಬ್ರೇಕ್ ಮಾಡಿದಷ್ಟು ನಿಯಂತ್ರಣ ಸಾಧ್ಯ. ನಿರ್ದಿಷ್ಟ ಕ್ರಮ ಕೈಗೊಳ್ಳಬೇಕು ಎಂದರು.

ಜನತಾ ಕರ್ಫ್ಯೂ ಬೆಳಗ್ಗೆ 6 ರಿಂದ 19 ಗಂಟೆ ತನಕ ಅಗತ್ಯ ವಸ್ತುಗಳಿಗೆ ಖರೀದಿಗೆ ಅವಕಾಶ ನೀಡಿದೆ. ಇದನ್ನು ದುರುಪಯೋಗ ಮಾಡಿಕೊಳ್ಳುವವರೂ ಇದ್ದಾರೆ. ಸಭೆಯಲ್ಲಿ ಪ್ರಸ್ತಾಪವಾದ 6 ದಿನಗಳ ಸಂಪೂರ್ಣ ಕರ್ಫ್ಯೂ ಕುರಿತು ಎರಡು ದಿನ ಅವಕಾಶ ಕೊಡಿ. ಅಧಿಕಾರಿಗಳ, ಜನಪ್ರತಿನಿಧಿಗಳ ಸಭೆ ಕರೆದು, ಜಿಲ್ಲಾಡಳಿತ ಹಾಗೂ ಸಿಎಂ ಬಳಿ ಮಾತನಾಡಿ ಮುಂದಿನ ನಡೆಯ ಕುರಿತು ಚಿಂತನೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.

ಖಾಸಗಿ ಕ್ಲಿನಿಕ್ ಬಗ್ಗೆಯೂ ಗಮನ ಹರಿಸಿ: ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.

ತಾಲೂಕಿನ ಪ್ರತಿಯೊಂದು ಪಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿರುವ ಎಲ್ಲಾ ಖಾಸಗಿ ಕ್ಲಿನಿಕ್ ಕಡೆ ಗಮನ ನೀಡಬೇಕು. ಜ್ವರ, ಶೀತ, ಕೆಮ್ಮು ಮೊದಲಾದ ಕಾಯಿಲೆಗಳಿಗೆ ಔಷಧ ತೆಗೆದುಕೊಂಡು ಮನೆಯಲ್ಲಿರುತ್ತಾರೆ. ಪ್ರತಿ ಗ್ರಾಮಮಟ್ಟದಲ್ಲಿ ಜಾಗೃತಿ ಮೂಡಿಸಿ ಗಂಟಲದ್ರವ ಪರೀಕ್ಷೆ ಮಾಡಿಸಿಕೊಳ್ಳಲು ತಿಳಿಸಬೇಕು. ಸೋಂಕು ಹರಡುವಿಕೆಗೆ ಕಡಿವಾಣ ಹಾಕಲು ಸಾಧ್ಯ ಎಂದು ಎಲ್ಲಾ ಮೆಡಿಕಲ್ ಅಧಿಕಾರಿಗಳಿಗೆ ಸೂಚಿಸಿದರು.

ಸರಕಾರದ ನಿರ್ದೇಶನ ಹಾಗೂ ಆದೇಶದಂತೆ ತಾಲೂಕಿನ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪದವಿ, ಪದವಿಪೂರ್ವ, ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಕಾಲೇಜಿನ ಉಪನ್ಯಾಸಕರು, ಶಿಕ್ಷಕರು ಕೂಡಾ ಕರ್ತವ್ಯದಲ್ಲಿ ಭಾಗಿಯಾಗಬೇಕು. ಶಾಲೆಗಳನ್ನು, ಹಾಸ್ಟೆಲ್‌ಗಳನ್ನು ಕೋವಿಡ್ ಕೇರ್ ಸೆಂಟರ್ ಆಗಿ ಬಳಸಬಹುದು. ವಾಹನ ವ್ಯವಸ್ಥೆಗೆ, ವೈದ್ಯರ ನೇಮಕಕ್ಕೆ ಹಾಗೂ ಇನ್ನಿತರ ತುರ್ತು ಕಾರ್ಯಗಳಿಗೆ ಜಿಲ್ಲಾಡಳಿತದಿಂದ ಅಗತ್ಯವಾಗಿ ಹಣ ಬಿಡುಗಡೆ ಮಾಡಲಾಗುವುದು ಎಂದರು.

ಗ್ರಾ.ಪಂ ಟಾಸ್ಕ್ ಪೋರ್ಸ್ ಪ್ರತಿದಿನ ಸಭೆ ಸೇರಬೇಕು: ಜಿ.ಪಂ. ಸಿಇಒ ಕುಮಾರ್

ಪ್ರತಿ ಗ್ರಾ.ಪಂ.ನಲ್ಲಿ ಟಾಸ್ಕ್ ಪೋರ್ಸ್ ಬೆಳಗ್ಗೆ 9 ಗಂಟೆಗೆ ಪ್ರತಿದಿನ ಸಭೆ ನಡೆಸಬೇಕು. ಚರ್ಚೆ ನಡೆಸಿ, ವರದಿಯನ್ನು ತಾಲೂಕಿಗೆ ಕಳುಹಿಸಬೇಕು. ಮನೆಮನೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಬೇಕು. ಗಂಟಲದ್ರವ ಮಾದರಿಯನ್ನು ಅದೇ ದಿನ ಮಂಗಳೂರಿನ ಲ್ಯಾಬ್‌ಗೆ ಕಳುಹಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸರ್ಕಾರದ ಮಾರ್ಗಸೂಚಿ ಉಲ್ಲಂಘನೆ ಮಾಡಿದರೆ ದಂಡ:ಎಸ್ ಪಿ.

ಸರಕಾರದ ಮಾರ್ಗಸೂಚಿ ಉಲ್ಲಂಘನೆ ಮಾಡಿದವರ ಮೇಲೆ ದಂಡ ವಿಧಿಸಲಾಗುವುದು. ಮಾರ್ಗಸೂಚಿ ಮೀರಿ ಅಂಗಡಿ-ಮುಂಗಟ್ಟು ತೆರೆದರೆ ಹಾಗೂ ಅನಗತ್ಯ ಓಡಾಟದ ವಾಹನವನ್ನು ಜಪ್ತಿ ಮಾಡುವಂತೆ ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಹೃಷಿಕೇಶ್ ಸೋನಾವನೆ ಸೂಚಿಸಿದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಸ್ತಾಪವಾದ ಇನ್ನಿತರ ಮುಖ್ಯ ವಿಚಾರಗಳು

  • ಕೋವಿಡ್‌ನಿಂದ ಮೃತ ಪಟ್ಟರೆ ಉಚಿತವಾಗಿ ವಾಹನದಲ್ಲಿ ಸಾಗಾಟ, ಅಂತ್ಯ ಸಂಸ್ಕಾರಕ್ಕೆ ಎಸ್‌ಡಿಆರ್‌ಎಫ್ ಬಳಕೆ
  • 108 ಅಂಬುಲೆನ್ಸ್ ಸಹಿತ , ಖಾಸಗಿ ಅಂಬುಲೆನ್ಸ್ ಬಳಕೆ
  • ಕೊಕ್ಕಡ ಆಸ್ಪತ್ರೆ ಕಟ್ಟಡ ಪೂರ್ಣವಾಗಿಲ್ಲ. ತಕ್ಷಣ ವರದಿ ನೀಡುವಂತೆ ಡಿಸಿಯಿಂದ ಅಧಿಕಾರಿಗಳಿಗೆ ಆದೇಶ
  • ಉಜಿರೆ ಎಸ್‌ಡಿಎಂ ಮತ್ತು ಬೆನಕ ಆಸ್ಪತ್ರೆಯಲ್ಲಿ ಕೋವಿಡ್ ಮಾತ್ರ ಆಯುಷ್ಮಾನ್ ಭಾರತ್
  • ಕೋವಿಡ್ ಕೇರ್ ಸೆಂಟರ್‌ನಲ್ಲಿ ಉತ್ತಮ ಪೌಷ್ಟಿಕ ಆಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ
  • ಗಂಟಲದ್ರವ ಪರೀಕ್ಷೆ ಮಾಡಿಸಿದವರ ಸಂಪೂರ್ಣ ವಿಳಾಸ ತೆಗೆದುಕೊಳ್ಳಬೇಕು
  • ಪರೀಕ್ಷೆ ಮಾಡಿಸಿಕೊಂಡವರು ವರದಿ ಬರುವ ತನಕ ಹೊರಗೆ ಓಡಾಟ ಮಾಡಬಾರದು
  •  ಸೋಂಕಿತರ ಪ್ರೈಮರಿ ಹಾಗೂ ಸೆಕೆಂಡರಿ ಪರಿಚಯಸ್ಥರ ಕಡ್ಡಾಯ ಗಂಟಲದ್ರವ ಪರೀಕ್ಷೆಗೆ ಒಳ ಪಡಿಸಬೇಕು

ಸಭೆಯಲ್ಲಿ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು. ಖಾಸಗಿ ಆಸ್ಪತ್ರೆಯ ವೈಧ್ಯಾಧಿಕಾರಿಗಳು, ಪ್ರಮುಖರು ಸಲಹೆ ಸೂಚನೆ ನೀಡಿದರು.

ಸಭೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಪ್ರತಾಪ್‌ಸಿಂಹ ನಾಯಕ್, ಕೆ. ಹರೀಶ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಮತ್ತು ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!