ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮಕ್ತಿ ಮತ್ತು ಸಂಶೋಧನಾ ಕೇಂದ್ರ ಕೋವಿಡ್ ಕೇರ್ ಸೆಂಟರ್: ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೊರೋನಾ ಸೋಂಕಿತರಿಗಾಗಿ ಉಜಿರೆ ಲಾಯಿಲದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರವನ್ನು ಕೋವಿಡ್ ಕೇರ್ ಸೆಂಟರ್‌ಗಾಗಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನೀಡಿದ್ದು, ಅಲ್ಲಿನ ವ್ಯವಸ್ಥೆಯ ಕುರಿತು ಪರಿಶೀಲನೆಗಾಗಿ ಮಂಗಳವಾರ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಾಗೂ ಪುತ್ತೂರು ಉಪ ವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್ ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು.

ದೇಶಾದ್ಯಂತ ಕೋವಿಡ್-19 ಎರಡನೇ ಅಲೆಯ ಅಬ್ಬರದಿಂದ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು, ತಾಲೂಕಿನಲ್ಲಿಯೂ ಸೋಂಕಿತರ ಪ್ರಕರಣಗಳು ಏರಿಕೆಯಾಗುತ್ತಿದೆ. ಕಳೆದ ವರ್ಷವೂ ಉಜಿರೆ ಲಾಯಿಲದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರವನ್ನು ಕೋವಿಡ್ ಕೇರ್ ಸೆಂಟರ್‌ಗೆ ಬಿಟ್ಟು ಕೊಡಲಾಗಿತ್ತು. ಈ ವರ್ಷವೂ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಸೋಂಕಿತರ ಆರೈಕೆಗಾಗಿ ಹಾಗೂ ಚಿಕಿತ್ಸೆಗಾಗಿ ಈ ಕೇಂದ್ರವನ್ನು ವ್ಯವಸ್ಥೆ ಮಾಡಲಾಗಿದೆ. ಮಂಗಳವಾರ ಶಾಸಕ ಹರೀಶ್ ಪೂಂಜ ಅವರು ಆರೋಗ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಹರೀಶ್ ಪೂಂಜ ಅವರು, ತಾಲೂಕಿನಲ್ಲಿ ಕೋವಿಡ್ ಕೇರ್ ಸೆಂಟರ್ ಆಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸರಕಾರಿ ಆಸ್ಪತ್ರೆಯ ವ್ಯವಸ್ಥೆಗಾಗಿ ನೀಡಿದ್ದಾರೆ. ತಾಲೂಕು ಆಸ್ಪತ್ರೆಯಲ್ಲಿ 50 ವೆಂಟಿಲೇಟರ್ ಹಾಸಿಗೆ ಇರುವುದರಿಂದ ಅದರ ಅವಶ್ಯಕತೆ ಇರುವ ಸೋಂಕಿತರನ್ನು ಮಾತ್ರ ಅಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಿಕೊಂಡು, ಯಾವುದೇ ಖಾಯಿಲೆಗಳಿಲ್ಲದ ಕೊರೋನಾ ಸೋಂಕಿತರಿಗಾಗಿ ಇಲ್ಲಿನ ಕೇರ್ ಸೆಂಟರ್‌ನಲ್ಲಿ ದಾಖಲಿಸಲಾಗುತ್ತದೆ. ಇಲ್ಲಿರುವ ಸೋಂಕಿತರಿಗೆ ಇಲ್ಲಿಯೇ ಆಹಾರ ತಯಾರಿಸಿಕೊಡಲಾಗುವುದು. ಇದಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಹಕಾರ ನೀಡುತ್ತಾರೆ.

ತಾಲೂಕು ಆಡಳಿತದಿಂದ ಮೂವರು ವೈದ್ಯರನ್ನು ನೇಮಕ ಮಾಡಲಾಗಿದೆ. ಡಾ. ತಾರಕೇಶ್ವರಿ ಹಾಗೂ ಡಾ. ಅಭಿರಾಮ್ ಅವರನ್ನು ತಾಲೂಕು ಆಸ್ಪತ್ರೆಯಿಂದ ಇಲ್ಲಿಗೆ ನಿಯೋಜಿಸಿದ್ದು, ಡಾ. ನಟೇಶ್ ಶರ್ಮರನ್ನು ಹೊರಗುತ್ತಿಗೆಯಲ್ಲಿ ನಿಯೋಜಿಸಲಾಗಿದೆ. ನರ್ಸ್‌ಗಳನ್ನು, ಡಿ ಗ್ರೂಪ್ ನೌಕರರನ್ನು ತೆಗೆದುಕೊಂಡಿದ್ದೇವೆ. ಕೇಂದ್ರದಲ್ಲಿ ಸುಸಜ್ಜಿತವಾದ ಹಾಸಿಗೆಗಳ ವ್ಯವಸ್ಥೆ, ಅಡುಗೆ ಕೋಣೆ, ಸ್ನಾನಗೃಹ, ಶೌಚಾಲಯಗಳಿದೆ. ಅಲ್ಲದೆ ಇಲ್ಲಿ ಪೂರ್ಣವಾಗಿ ಜನಜಾಗೃತಿ ವೇದಿಕೆ ಸಿಬ್ಬಂದಿಗಳು ಹಾಗೂ ಯೋಜನೆಯ ವಿಪತ್ತು ನಿರ್ವಹಣ ಘಟಕದ ಸ್ವಯಂಸೇವಕರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಅದರ ಜತೆಗೆ ಧರ್ಮಾಧಿಕಾರಿ ಡಾ. ಹೆಗ್ಗಡೆಯವರು ಧರ್ಮಸ್ಥಳದಲ್ಲಿರುವ 300 ರೂಮಿನ 600 ಹಾಸಿಗೆಯ ರಜತಾದ್ರಿ ಅತಿಥಿ ಗೃಹವನ್ನು ಕ್ವಾರೆಂಟೈನ್‌ಗಾಗಿ ಉಪಯೋಗಿಸಬಹುದು ಎಂದು ಸಹಕಾರ ನೀಡಿದ್ದಾರೆ ಎಂದರು.

ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭ ಆಕ್ಷಿಜನ್ ಬೇಕಾದಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗುವುದು. ಇದಕ್ಕಾಗಿ ಅಂಬುಲೇನ್ಸ್ ವ್ಯವಸ್ಥೆ ಕೂಡಾ ಇದೆ. ಹೆಚ್ಚಿನ ಚಿಕಿತ್ಸೆ ಮಂಗಳೂರಿಗೆ ಕರೆದೊಯ್ಯಲು ಕೂಡಾ ಅಂಬುಲೇನ್ಸ್ ವ್ಯವಸ್ಥೆ ಮಾಡಲಾಗುವುದು ಎಂದರು.

ಪುತ್ತೂರು ಉಪವಿಭಾಗಧಿಕಾರಿ ಡಾ.ಯತೀಶ್ ಉಳ್ಳಾಲ್, ತಹಸೀಲ್ದಾರ್ ಮಹೇಶ್ ಜೆ. ತಾಲೂಕು ವೈದ್ಯಾಧಿಕಾರಿ ಡಾ.ಕಲಾಮಧು, ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ತೆ ಆಡಳಿತ ವೈದ್ಯಾಧಿಕಾರಿ ಡಾ.ವಿದ್ಯಾವತಿ, ವೈದ್ಯರುಗಳಾದ ಡಾ.ತಾರಕೇಶ್ವರಿ, ಡಾ.ಅಭಿರಾಮ್ ಗಟ್ಟಿ, ಡಾ.ನಟೇಶ್ ಶರ್ಮ ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಎ., ಜನಜಾಗೃತಿ ವೇದಿಕೆ ಯೋಜನಾಧಿಕಾರಿಗಳಾದ ತಿಮ್ಮಯ ನಾಯ್ಕ್, ಮೋಹನ್ ಕುಮಾರ್, ವಿಪತ್ತು ನಿರ್ವಹಣಾ ಘಟಕದ ಯೋಜನಾಧಿಕಾರಿ ಜೈವಂತ್ ಪಟಗಾರ್, ಕೇಂದ್ರದ ಮೇಲ್ವಿಚಾರಕ ಕಿಶೋರ್, ಜನಜಾಗೃತಿಯ ಶಿಬಿರಾಧಿಕಾರಿಗಳಾದ ದಿವಾಕರ, ನಂದಕುಮಾರ್, ದೇವಿಪ್ರಸಾದ್, ನಾಗರಾಜ್ ಕಂದಾಯ ನಿರೀಕ್ಷಕ ಪ್ರತೀಶ್, ಗ್ರಾಮಕರಣಿಕ ಪ್ರದೀಪ್ ಮೊದಲಾದವರು ಇದ್ದರು.

error: Content is protected !!