ಬೆಳ್ತಂಗಡಿ: ತಾಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ನೋಡಿಯೂ ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳಿಗೆ ಇದರಿಂದ ಸಿಗುವ ಪಾಲು ಎಷ್ಟು ಎಂದು ಮಾಜಿ ಶಾಸಕ ವಸಂತ ಬಂಗೇರ ಪ್ರಶ್ನಿಸಿದ್ದಾರೆ.
ಅವರು ಬೆಳ್ತಂಗಡಿ ಗುರುನಾರಾಯಣ ಸಭಾ ಭವನದಲ್ಲಿ ಎಪ್ರಿಲ್ 4 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಆಡಳಿತ ಪಕ್ಷದ ವಿರುದ್ದ ಹರಿಹಾಯ್ದರು.
ಬೆಳ್ತಂಗಡಿ ತಾಲೂಕಿನಾದ್ಯಂತ ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಮಧ್ಯೆಯೂ ನದಿಗಳಿಂದ ಅಕ್ರಮವಾಗಿ ಮರಳು ಮಾಫಿಯಾ ಜೋರಾಗಿ ನಡೆಯುತ್ತಿದೆ. ಈ ಕುರಿತು
ಮಾಹಿತಿ ಇದ್ದರೂ ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಕುರುಡರಂತೆ ವರ್ತಿಸುತಿದ್ದಾರೆ. ಸರ್ಕಾರ, ದ.ಕ. ಜಿಲ್ಲಾಡಳಿತದ ನೀತಿ ನಿಯಮಗಳನ್ನು ಗಾಳಿಗೆ ತೂರಿ ಬಿಜೆಪಿಗರು ಅಕ್ರಮ ಮರಳು ದಂಧೆ ಮಾಡುತಿದ್ದಾರೆ. ಸೇತುವೆ ಅಡಿಭಾಗದಲ್ಲೂ ಮರಳನ್ನು ತೆಗೆಯುತಿದ್ದು ಸೇತುವೆಗಳು ಕುಸಿಯುವ ಭೀತಿಯಲ್ಲಿದೆ. ಪೊಲೀಸ್ ಹಾಗೂ ಕಂದಾಯ ಇಲಾಖೆ ಅಕ್ರಮ ಮರಳು ಸಾಗಾಟಗಾರರ ಜೊತೆಗೆ ಶಾಮಿಲಾಗಿ ಮಾಸಿಕ ಮಾಮೂಲಿ ತೆಗೆದುಕೊಂಡು ಮರಳುಗಾರಿಕೆಗೆ ಸಹಕರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಳಿಯ ಕೃಷಿ ಪತ್ತಿನ ಸಹಕಾರಿ ಸಂಘದ ಪಡಿತರ ಅಂಗಡಿಯಿಂದ ಅನ್ನಭಾಗ್ಯದ ಅಕ್ಕಿಯನ್ನು ವಾರದ ಹಿಂದೆ ಕಳವು ಮಾಡಲಾಗಿದ್ದು ಕಳವು ಮಾಡಲಾದ ಅಕ್ಕಿಯ ಜೊತೆಗೆ ವಾಹನವನ್ನು ಬೆಳ್ತಂಗಡಿ ಪೊಲೀಸರು ಪತ್ತೆಹಚ್ಚಿದ್ದು ರಾಜಕೀಯದ ಒತ್ತಡಕ್ಕೆ ಮಣಿದು ಪೊಲೀಸರು ಮತ್ತು ಕಂದಾಯ ಇಲಾಖೆ ಯಾವುದೇ ಕೇಸು ದಾಖಲಿಸದೇ ಅನ್ನಭಾಗ್ಯ ಅಕ್ಕಿ ಕಳ್ಳತನಕ್ಕೆ ಸಹಕಾರ ನೀಡಿದ್ದಾರೆ. ಇದೇ ರೀತಿಯಾಗಿ ತಾಲೂಕಿನ ವಿವಿಧ ಪಡಿತರ ಅಂಗಡಿಗಳಿಂದ ಅಕ್ಕಿಯನ್ನು ಕಳವು ಮಾಡಲಾಗುತ್ತಿದೆಯೇ ಎಂಬ ಸಂಶಯ ಮೂಡುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ತಾಲೂಕಿನಲ್ಲಿ 900 ಕ್ಕಿಂತಲೂ ಅಧಿಕ ಕೊರೊನಾ ಸೋಂಕು ಇದ್ದರೂ ತಾಲೂಕಿನ ಹಲವೆಡೇ ಸಾಂಸ್ಕ್ರತಿಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಇದರಿಂದಾಗಿ ಪ್ರಕರಣ ಹೆಚ್ಚಾಗಲು ಕಾರಣವಾಗಿದೆ. ನೆರಿಯದಲ್ಲಿ ಗ್ರಾಮ ಸಹಾಯಕ ಹರೀಶ್ ಎಂಬಾತನ ನೇತೃತ್ವದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದ್ದು ನೆರಿಯದಲ್ಲಿ ಸೋಂಕು ಹೆಚ್ಚಾಗಲು ಕಾರಣವಾಗಿದೆ. ಈ ಬಗ್ಗೆ ತನಿಖೆ ನಡೆಸಿ ಗ್ರಾಮ ಸಹಾಯಕನ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಕೋವಿಡ್ -19 ಪ್ರಾರಂಭವಾಗಿ 1 ವರ್ಷ ಕಳೆದರೂ ತಾಲೂಕು ಸಮುದಾಯ ಆರೋಗ್ಯ ಕೇಂದ್ರವನ್ನು ಹೊರತುಪಡಿಸಿ ತಾಲೂಕಿನಾದ್ಯಂತ ಇರುವ ಸರಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವಲ್ಲಿ ಶಾಸಕರು ವಿಫಲವಾಗಿದ್ದು ತಾಲೂಕಿನ ಹಲವಾರು ಆಸ್ಪತ್ರೆಗಳಲ್ಲಿ ವೈದ್ಯರು ಸೇರಿದಂತೆ ಸಿಬ್ಬಂದಿಗಳ ಕೊರತೆಯಿದೆ. ಈ ಬಗ್ಗೆ ಶಾಸಕರು ಕಳೆದೊಂದು ವರುಷಗಳಿಂದ ಮೌನವಹಿಸಿದ್ದು ಇದೀಗ ಸೂಕ್ತ ಚಿಕಿತ್ಸೆಗಾಗಿ ರೋಗಿಗಳು ಪರದಾಡುವಂತಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ರಂಜನ್. ಜಿ. ಗೌಡ ಮಾತನಾಡಿ, ಎಲ್ಲಾ ಕಡೆ ಕೊರೊನಾದಿಂದ ಜನ ಸಾಯುತಿದ್ದಾರೆ. ಲಾಕ್ ಡೌನ್ ಘೋಷಣೆಯಾದರೂ ಬೆಳ್ತಂಗಡಿಯಲ್ಲಿ ಮಾತ್ರ ಮುನ್ನೂರರಿಂದ ಐನ್ನೂರು ಜನರು ಸೇರಿಕೊಂಡು ಕಾರ್ಯಕ್ರಮ ನಡೆಯುತ್ತಿದೆ. ಆ ಕಾರ್ಯಕ್ರಮಗಳಲ್ಲಿ ಶಾಸಕರೂ ಭಾಗವಹಿಸುತಿದ್ದಾರೆ. ಒಂದು ವೇಳೆ ತಾಲೂಕಿನಲ್ಲಿ ಅಪಾಯ ಸಂಭವಿಸಿದರೆ ಶಾಸಕರೇ ಉತ್ತರಿಸಬೇಕು. ಜವಾಬ್ದಾರಿಯುತ ಶಾಸಕರಾಗಿ ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಎಷ್ಟು ಸರಿ. ಹಾಗಾದರೆ ಈ ಲಾಕ್ ಡೌನ್ ಕಾನೂನು ಬಡವರಿಗೆ ಅಥವಾ ರೈತರಿಗೆ ಮಾತ್ರ ಸೀಮಿತವೇ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಶೈಲೇಶ್ ಕುಮಾರ್ ಕುರ್ತೋಡಿ, ಮನೋಹರ್ ಇಳಂತಿಲ ವಸಂತ ಬಿ.ಕೆ. ಶೇಖರ್ ಲಾಯ್ಲ, ಗ್ರೇಸಿಯನ್ ವೇಗಸ್ ಮೊದಲಾದವರು ಉಪಸ್ಥಿತರಿದ್ದರು.