ಧರ್ಮಸ್ಥಳ ಸೇವಾ ಸಹಕಾರಿ ಬ್ಯಾಂಕ್ ಕಾರ್ಯನಿರ್ವಾಹಣಾಧಿಕಾರಿ ರವೀಂದ್ರನ್ ಆತ್ಮಹತ್ಯೆಗೆ ಮಾನಸಿಕ ಕಿರುಕುಳವೇ ಕಾರಣ: ವಸಂತ ಬಂಗೇರ ಆರೋಪ

ಬೆಳ್ತಂಗಡಿ: ಧರ್ಮಸ್ಥಳ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನ್ ಅವರ ಆತ್ಮಹತ್ಯೆಗೆ ಆಡಳಿತ ಮಂಡಳಿಯ ಮಾನಸಿಕ ಕಿರುಕುಳವೇ ಕಾರಣ. ಈ ಬಗ್ಗೆ ಉನ್ನತ ಮಟ್ಟದ ನ್ಯಾಯಯುತವಾದ ತನಿಖೆಯಾಗಬೇಕು ಎಂದು ಬೆಳ್ತಂಗಡಿಯ ಮಾಜಿ ಶಾಸಕ ಕೆ. ವಸಂತ ಬಂಗೇರ ಒತ್ತಾಯಿಸಿದ್ದಾರೆ.

ಅವರು ಬೆಳ್ತಂಗಡಿ ಗುರುನಾರಾಯಣ ಸಭಾಭವನದಲ್ಲಿ ಎಪ್ರಿಲ್ 4 ರಂದು ಕರೆದ ಪತ್ರಿಕಾಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದರು.

ಕಳೆದ ಕೆಲವು ವರುಷಗಳಿಂದ ಬಿಜೆಪಿ ನೇತೃತ್ವದ ಆಡಳಿತ ಮಂಡಳಿಯು ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರವೀಂದ್ರನ್ ಅವರಿಗೆ ಮಾನಸಿಕ ಕಿರುಕುಳ ನೀಡಿ ಒತ್ತಾಯ ಪೂರ್ವಕವಾಗಿ ಆಡಳಿತ ಮಂಡಳಿ ಸದಸ್ಯರಿಗೆ ಹಾಗೂ ಬಿಜೆಪಿ ಸದಸ್ಯರಿಗೆ ಬೇಕಾಬಿಟ್ಟಿಯಾಗಿ ಸಾಲ ನೀಡಲು ಒತ್ತಾಯ ಮಾಡಿದ್ದರು. ಅದಕ್ಕೆ ಒಪ್ಪದಿದ್ದಾಗ ಬಲಾತ್ಕರವಾಗಿ ರಾಜೀನಾಮೆ ಕೊಡಿಸಿರುವುದೇ ಈ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಬಂಗೇರ ಆರೋಪಿಸಿದರು.

ಅದಲ್ಲದೆ ಕಳೆದ ಮೂರು-ನಾಲ್ಕು ವರುಷಗಳಿಂದ ಸಹಕಾರಿ ಸಂಘದ ನಿಯಾಮಾವಳಿಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ಆಡಳಿತ ಮಂಡಳಿ ಸದಸ್ಯರಿಗೆ ಸಾಲ ನೀಡುವ ಮೂಲಕ ಆಡಳಿತ ಮಂಡಳಿ ವ್ಯಾಪಕವಾಗಿ ಭ್ರಷ್ಟಚಾರ ನಡೆಸಿದ್ದು ಈ ಬಗ್ಗೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ದ.ಕ. ಜಿಲ್ಲಾ ಸಹಕಾರಿ ಉಪನಿಬಂಧಕರ ನೇತೃತ್ವದಲ್ಲಿ ಪ್ರತ್ಯೇಕವಾದ ತನಿಖೆಯನ್ನು ಕೈಗೊಂಡು ತಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಹೇಳಿದರು.

ಅಧ್ಯಕ್ಷರನ್ನು ನಾನು ಸೋಲಲು ಬಿಡುವುದಿಲ್ಲ ಮೋಸದಿಂದ ಅಧ್ಯಕ್ಷರ ಮೇಲೆ ಒತ್ತಡ ಹೇರಿದದವರ ಮೂವರ ಹೆಸರನ್ನು ಬರೆದಿಟ್ಟು ಇವರನ್ನು ಕ್ಷಮಿಸುವುದಿಲ್ಲ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದು, ಇದಲ್ಲದೆ ನನ್ನ ಮಗಳಿಗೆ ಕ್ಲಾರ್ಕ್ ಕೆಲಸ ಕೊಡಿಸಿ, ಬೊಳಿಯಾರಿನಲ್ಲಿ 0.12 ಎಕ್ರೆ ಮತ್ತು ನನ್ನ ಪಾಲಿನ ಜಾಗ 2 ಎಕ್ರೆ ಜಮೀನು ಬರಬೇಕು.‌ ಅದನ್ನು ಕೊಡಿಸಿ. ಇಡೀ ಜೀವನವನ್ನು ಸಂಘಕ್ಕಾಗಿ ಮೀಸಲಿಟ್ಟ ನಾನು ಅಂತ್ಯಕಾಲದಲ್ಲಿ ಮುಟ್ಠಾಳರಿಂದ ಅವಮಾನಿತನಾಗಲು ಬಯಸುವುದಿಲ್ಲ. ಸನ್ಮೀತ್ರ ಸಹೋದ್ಯೋಗಿಗಳಿಗೆ ಶುಭಾಶಯಗಳು.‌ ಶತ್ರುಗಳನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕೂಡಾ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ

ಅದ್ದರಿಂದ ತಕ್ಷಣ ಆ ಮೂವರನ್ನು ಅಮಾನತುಗೊಳಿಸಿ ಅವರನ್ನು ತನಿಖೆಗೆ ಒಳಪಡಿಸಿ ಬಂಧಿಸಬೇಕು ಎಂದ ಅವರು ಆತ್ಮಹತ್ಯೆ ನಡೆದ ಜಾಗದಲ್ಲಿ ವಿಷದ ಬಾಟಲಿ ಬ್ರೆಡ್ ಹಾಗೂ ಕತ್ತಿ ಚೂರಿ ಪತ್ತೆಯಾಗಿದ್ದು ಈ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಬಂಗೇರ ಒತ್ತಾಯಿಸಿದ್ದಾರೆ.

ಅದಲ್ಲದೆ ಅವರು ನೀಡಿದ ರಾಜೀನಾಮೆ ಪತ್ರ ಹಾಗೂ ಡೆತ್ ನೋಟ್ ನಲ್ಲಿ ಇರುವ ಸಹಿಗೆ ವ್ಯತ್ಯಾಸ ಇದ್ದು ಇದನ್ನೂ ತನಿಖೆಗೊಳಪಡಿಸಬೇಕು. ಒಂದು ವೇಳೆ ಸಮಗ್ರ ತನಿಖೆ ನಡೆಯದಿದ್ದಲ್ಲಿ ಬಿಜೆಪಿಯೇತರ ಸಂಘಟನೆಗಳ ಮೂಲಕ ನ್ಯಾಯಕ್ಕಾಗಿ ಹೋರಾಟ ನಡೆಸಲಾಗುವುದು ಎಂದರು.ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ರಂಜನ್ ಜಿ. ಗೌಡ, ಶೈಲೇಶ್ ಕುಮಾರ್ ಕುರ್ತೋಡಿ, ಮುಖಂಡರುಗಳಾದ ಮನೋಹರ್ ಕುಮಾರ್ ಇಳಂತಿಲ, ವಸಂತ ಬಿ ಕೆ. ಗ್ರೇಸಿಯನ್ ವೇಗಸ್, ಅನಿಲ್ ಪೈ, ಸಿಪಿಐಎಂ ಮುಖಂಡ ಶೇಖರ ಲಾಯ್ಲ, ಜೆಡಿಎಸ್ ಮುಖಂಡೆ ಸಿಂಧೂ ದೇವಿ, ಉಪಸ್ಥಿತರಿದ್ದರು.

error: Content is protected !!