ಬೆಳ್ತಂಗಡಿ: ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ನೂಕುನುಗ್ಗಲನ್ನು ತಪ್ಪಿಸುವ ಸಲುವಾಗಿ ರಾಜ್ಯಸರ್ಕಾರ ಕೊರೊನಾ ಕರ್ಫ್ಯೂ ಮಾರ್ಗಸೂಚಿಯಲ್ಲಿ ಮತ್ತೆ ಸಡಿಲಿಕೆ ಮಾಡಲಾಗಿದ್ದು, ಎಪಿಎಂಸಿ, ದಿನಸಿ ಅಂಗಡಿಗಳಿಗೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆ ವರೆಗೆ ತೆರೆಯಲು ಅವಕಾಶ ನೀಡಲಾಗಿದೆ.
ಈ ಮೊದಲು ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಮಾರಾಟ ಮಾಡಲು ಅವಕಾಶ ನೀಡಲಾಗಿತ್ತು. ಮಾರಾಟದ ಸಮಯವನ್ನು ವಿಸ್ತರಿಸಿ ಪರಿಷ್ಕೃತ ಮಾರ್ಗಸೂಚಿ ಹೊರಡಿಸಲಾಗಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಆಗುತ್ತಿರುವ ಜನಸಂದಣಿ, ನೂಕು ನುಗ್ಗಲನ್ನು ತಪ್ಪಿಸಲು ನಾಳೆಯಿಂದ ಅನ್ವಯವಾಗುವಂತೆ ಎಲ್ಲಾ ರೀತಿಯ ಸಂತೆ, ವಾರದ ಸಂತೆಗಳನ್ನು ನಿರ್ಬಂಧಿಸಲಾಗಿದೆ. ಇದರ ಬದಲಿಗೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೂ ಹಾಪ್‌ಕಾಮ್ಸ್, ಎಲ್ಲಾ ಹಾಲಿನ ಬೂತ್ಗಳು, ತಳ್ಳುವಗಾಡಿ ಮೂಲಕ ಹಣ್ಣು, ತರಕಾರಿಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡದೆ, ಮಾರುಕಟ್ಟೆ ಬೆಲೆಗೆ ಮಾರಾಟ ಮಾಡುವುದಕ್ಕೆ ಅನುಮತಿ ನೀಡಲಾಗಿದೆ.