ವೀರೇಂದ್ರ ಹೆಗ್ಗಡೆಯವರ ಚಿಂತನೆ ಶ್ಲಾಘನೀಯ: ಸಚಿವ ಅರವಿಂದ ಲಿಂಬಾವಳಿ

ಬೆಳ್ತಂಗಡಿ: ಮಲೆನಾಡಿನ ಪರಿಸರದಲ್ಲಿ ಆನೆ, ಮಂಗ, ನವಿಲು, ಹಂದಿ ಇತ್ಯಾದಿ ವನ್ಯಪ್ರಾಣಿಗಳ ಕಾಟದಿಂದಾಗಿ ರೈತರ ಕೃಷಿ ನಾಶವಾಗುತ್ತಿದೆ. ಇದಕ್ಕಾಗಿ ಅರಣ್ಯದಲ್ಲಿನ ಖಾಲಿ ಜಾಗಗಳಲ್ಲಿ ಅಥವಾ ಅರಣ್ಯದ ಗಡಿಭಾಗದಲ್ಲಿ ಹಣ್ಣು ನೀಡುವ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಯೋಜನೆಯೊಂದನ್ನು ಹಮ್ಮಿಕೊಂಡಲ್ಲಿ ಕ್ಷೇತ್ರದ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಎಲ್ಲಾ ನೆರವು ನೀಡಲು ಸಿದ್ಧ ಎಂದು ಕೆಲ ದಿನಗಳ ಹಿಂದೆ ಸಲಹೆ ರೂಪದ ಪತ್ರ ಬರೆದು ಮನವಿ ಮಾಡಿದ್ದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಚಿಂತನೆ ಶ್ಲಾಘನೀಯ ಅದ್ದರಿಂದ ಅವರ ಕೋರಿಕೆಯನ್ನು ಮನ್ನಿಸಿ ಈ ಕುರಿತು ಹೆಚ್ಚಿನ ಮುತುವರ್ಜಿಯಿಂದ ಅದನ್ನು ಅನುಷ್ಠಾನಗೊಳಿಸಲು ಸಭೆಯನ್ನು ಕರೆದಿರುವುದಾಗಿ ಪರಿಸರ ಜೀವೀಶಾಸ್ರ್ತ ಮತ್ತು ಅರಣ್ಯ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.ಅವರು ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳದ ಸನ್ನಿಧಿ ಅತಿಥಿ ಗೃಹದಲ್ಲಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಸ್ಥಳೀಯ ಶಾಸಕರು ಹಾಗೂ ಅರಣ್ಯ ಇಲಾಖೆಯ ಎಲ್ಲಾ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿ ಮಾತನಾಡಿದರು.

ಸಸ್ಯಾಹಾರಿ ವನ್ಯಜೀವಿಗಳ ಉಪಟಳವನ್ನು ತಡೆಯಲು ತಾಲೂಕಿನ 100 ಎಕರೆ ಅರಣ್ಯ ಭೂಮಿಯಲ್ಲಿ ಫಲವೃಕ್ಷಗಳನ್ನು ನೆಡುವ ಯೋಜನೆಯನ್ನು ಬೆಳ್ತಂಗಡಿ ತಾಲೂಕಿನಲ್ಲಿ ಮೊದಲಾಗಿ ಅನುಷ್ಠಾನಗೊಳಿಸಿ, ಬಳಿಕ ರಾಜ್ಯಾದ್ಯಂತ ಅದನ್ನು ವಿಸ್ತರಿಸಲಾಗುವುದು. ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ನೂರು ಎಕ್ರೆ ಅರಣ್ಯ ಪ್ರದೇಶದಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸುವ ಯೋಜನೆ ಇದೇ ಜೂನ್ 5 ರಂದು ಪ್ರಾರಂಭಗೊಳ್ಳಲಿದೆ ಎಂದರು. ಸಚಿವರು ಸ್ಪಂದಿಸಿರುವುದಕ್ಕೆ ಸಂತಸ ತಂದಿದೆ: ವೀರೇಂದ್ರ ಹೆಗ್ಗಡೆ.

ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಅರಣ್ಯದಲ್ಲಿ ಪ್ರಾಣಿಗಳಿಗೆ ಆಹಾರದ ಕೊರತೆ ಉಂಟಾಗಿದೆ. ಇದಕ್ಕಾಗಿ ಹಣ್ಣು ನೀಡುವ ಗಿಡಗಳನ್ನು ನೆಡುವ ಯೋಜನೆಯೊಂದನ್ನು ಹಮ್ಮಿಕೊಳ್ಳಬೇಕು ಎಂದು ಸಚಿವರಿಗೆ ಪತ್ರ ಬರೆದಿದ್ದೆ. ಈ ಪತ್ರಕ್ಕೆ ಶೀಘ್ರವಾಗಿ ಸಚಿವರು ಸ್ಪಂದಿಸಿರುವುದು ಸಂತಸ ತಂದಿದೆ. ನಾವು ನಮ್ಮ ಮುಂದಿನ ಪೀಳಿಗೆಯಿಂದ ಈ ಭೂಮಿಯನ್ನು ಎರವಲು ಪಡೆದಿದ್ದೇವೆ. ಹೀಗಾಗಿ ಅವನ್ನು ಸುರಕ್ಷಿತವಾಗಿ ಮುಂದಿನ ಪೀಳಿಗೆಗಾಗಿ ವರ್ಗಾಯಿಸಬೇಕಾಗಿದೆ. ಹೀಗಾಗಿ ಪರಿಸರದ ಕಾಳಜಿ ಅತಿ ಅಗತ್ಯ. ಇಂದು ವಿಶ್ವವೇ ನಮ್ಮ ಮನೆಯಾಗಿ ಪರಿವರ್ತನೆಯಾಗಿದೆ. ವಿಶ್ವದ ಯಾವುದೇ ಭೂ ಭಾಗದಲ್ಲಿ ಪ್ರಾಕೃತಿಕವಾಗಿ ವ್ಯತಿರಿಕ್ತ ಘಟನೆಯಾದರೆ ಅದರ ಇನ್ನೊಂದು ಪರಿಣಾಮ ಇಲ್ಲಿಯೂ ಆಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇಂದು ಹಸಿರು ಕಡಿಮೆಯಾಗಿ ನಾಡಿನ ವ್ಯಾಪ್ತಿ ಹೆಚ್ಚಿದೆ. ಕಾಡು ಭಾಗದ ರಸ್ತೆಗಳಲ್ಲಿ ಸಂಚರಿಸಿದಾಗಿ ಪ್ರಾಣಿಗಳಿಗಿಂತ ಮನುಷ್ಯರೇ ಹೆಚ್ಚಾಗಿ ಕಾಣಸಿಗುತ್ತಾರೆ. ವನಗಳು ಕಡಿಮೆಯಾಗಿ ಕೃಷಿ ಭೂಮಿ ಹೆಚ್ಚಾಗುತ್ತಿದೆ. ಈ ಭೂಮಿಯ ರಕ್ಷಣೆ ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಅರಣ್ಯದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮನ್ನು ಇಲಾಖೆ ಕೈಗೆತ್ತಿಕೊಂಡರೆ ಧರ್ಮಸ್ಥಳ ಯೋಜನೆ, ವಿಪತ್ತು ನಿರ್ವಹಣಾ ತಂಡದ ಸದಸ್ಯರ ಮೂಲಕ ರಾಜ್ಯದ ಎಲ್ಲೆಡೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು, ತಾಲೂಕಿನಲ್ಲಿ 5 ರಿಂದ 10 ಎಕರೆಯವರೆಗಿನ ಖಾಲಿ ಅರಣ್ಯ ಪ್ರದೇಶವನ್ನು ಗುರುತಿಸಿ ಅಲ್ಲಿ ಇಂತಹ ಕೆಲಸವನ್ನು ಮಾಡಿ ಅದಕ್ಕೆ ಬೇಕಾಗುವ ರಕ್ಷಣೆಯನ್ನು ಮಾಡಿಕೊಂಡರೆ ಉಪಯುಕ್ತವಾಗಬಲ್ಲುದು. ಮಾಡಿದ ಕೆಲಸ ಕಾಣುವ ಹಾಗೆ ಇರಬೇಕು. ಪ್ರತೀ ವರ್ಷ ಇದೇ ರೀತಿ ಬೇರೆ ಬೇರೆ ಕಡೆ ಮಾಡುತ್ತಾ ಹೋದರೆ ಸಮಸ್ಯೆ ಪರಿಹಾರ ಕಾಣಬಹುದು. ಶಿಶಿಲ, ಶಿಬಾಜೆ, ನೆರಿಯ, ಚಾರ್ಮಾಡಿ ಇತ್ಯಾದಿ ಪ್ರದೇಶಗಳನ್ನು ಗುರುತಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಎಂಎಲ್‌ಸಿ ಪ್ರತಾಪಸಿಂಹ ನಾಯಕ್ ಅವರು, ತಾಲೂಕಿನಲ್ಲಿ ಆನೆಗಳ ಸಮಸ್ಯೆ ಇದೆ. ತೋಟ- ಕಾಡು ಇದರ ಮಧ್ಯೆ ಪರಿಹಾರ ಕಾಣಬೇಕು. ಅದಕ್ಕಾಗಿ ದೀರ್ಘಕಾಲಿನ ಯೋಜನೆಯೊಂದನ್ನು ಹಾಕಿಕೊಳ್ಳಬೇಕಾದ ಅವಶ್ಯಕತೆ ಇದೆ. ದೊಡ್ಡ ಪ್ರಮಾಣದಲ್ಲಿ ಬೀಜಗಳನ್ನು ಕಾಡಿನೊಳಗೆ ಪಸರಿಸುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.

ಶ್ರೀಕ್ಷೇತ್ರ ಧ.ಗ್ರಾ.ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್.ಮಂಜುನಾಥ ಅವರು, ಬೆಳ್ತಂಗಡಿ ಭಾಗದಲ್ಲಿ ಹಂದಿ, ನವಿಲುಗಳ ಕಾಟದಿಂದ ಭತ್ತದ, ತರಕಾರಿ ಕೃಷಿ ವ್ಯಾಪಕ ಹಾನಿಗೊಳಗಾಗಿ ನಷ್ಟವಾಗಿದೆ. ಹೀಗಾಗಿ ಜಂಬೂ, ನೇರಳೆ, ಪೇರಳೆ ಇತ್ಯಾದಿ ಗಿಡಗಳನ್ನೂ ನೆಡುವ ಅವಶ್ಯಕತೆ ಇದೆ ಎಂದು ಅಭಿಪ್ರಾಯ ಪಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಅವರು, ಹಿಂದೆಯೂ ಇಂತಹ ಪ್ರಯತ್ನ ನಡೆದಿತ್ತು. ಆದರೆ, ಹಾಕಿದ ಬೀಜಗಳನ್ನು ಅಥವಾ ನೆಟ್ಟ ಗಿಡಗಳನ್ನು ಪ್ರಾಣಿಗಳು ತಿಂದು ಹಾಕಿದ, ನಾಶ ಮಾಡಿದ ಉದಾಹರಣೆಗಳು ಸಾಕಷ್ಟಿವೆ. ಆದರೂ ಈ ಬಾರಿ ಆಧುನಿಕ ರೀತಿಯ ಹಾಗೂ ಸಿಬ್ಬಂದಿಗಳ ಮೂಲಕ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಅನುಸರಿಸಿಕೊಂಡು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಬಹುದು ಎಂದರು.

ಮಂಗಳೂರು ವೃತ್ತ ಸಿಸಿಎಫ್ ಪ್ರಕಾಶ್ ನೆಟಲ್‌ಕರ್ ಅವರು, ಹಣ್ಣಿನ ಗಿಡಗಳನ್ನು ಕೂಡಲೇ ಸಿದ್ಧ ಮಾಡುವ ಮುಂಗಾರು ಬಿತ್ತನೆ ಪ್ರಕ್ರಿಯೆ ಆರಂಭಿಸಿದರೆ ಈ ವರ್ಷವೇ ಇದನ್ನು ಅನುಷ್ಠಾನಗೊಳಿಸಬಹುದು. ನೆಟ್ಟ ಗಿಡಗಳ ಆರೈಕೆ ಮುಖ್ಯವಾಗುತ್ತದೆ. ಅದು ಆರೇಳು ಅಡಿ ಎತ್ತರಕ್ಕೆ ಬರುವಾಗ ನೋಡಿಕೊಂಡರೆ ನಮ್ಮ ಪ್ರಯತ್ನ ಸಾರ್ಥಕವಾಗುತ್ತದೆ ಎಂದರು.

ಮಾದ್ಯಮದವರೊಂದಿಗೆ ಮಾತನಾಡಿದ ಸಚಿವ ಅರವಿಂದ ಲಿಂಬಾವಳಿ, ಡಾ. ಹೆಗ್ಗಡೆಯವರ ಯೋಚನೆಗೆ ಇಲಾಖೆ ಸಂಪೂರ್ಣ ಬೆಂಬಲ ನೀಡಲಿದೆ. ಇದಕ್ಕಾಗಿ ತಾಲೂಕನ್ನು ಪೈಲಟ್ ಆಗಿ ತೆಗೆದುಕೊಂಡು ನೂರು ಎಕರೆ ಪ್ರದೇಶದಲ್ಲಿ ಫಲನೀಡುವ ಗಿಡಗಳನ್ನು ನೆಡುವ ಯೋಜನೆಯನ್ನು ಅತಿ ಶೀಘ್ರವಾಗಿ ಅನುಷ್ಠಾನಗೊಳಿಸಲಾಗುವುದು. ಮೇ 15 ರೊಳಗೆ ಈ ಕುರಿತು ಅರಣ್ಯ ಇಲಾಖೆ ವತಿಯಿಂದ ತರಬೇತಿ ನೀಡಿ, ಜೂನ್ 5 ರಂದು ಸಾಂಕೇತಿಕವಾಗಿ ಯೋಜನೆಗೆ ಚಾಲನೆ ನೀಡಲಾಗುವುದು. ಬೆಳ್ತಂಗಡಿಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ ಈ ಯೋಜನೆಯನ್ನು ಮುಂದಿನ ವರ್ಷ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ಸಚಿವರು ಪ್ರಕಟಿಸಿದರು.

ಮಂಗಳೂರು ಡಿಸಿಎಫ್ ಕರಿಕ್ಕಲನ್ ಅವರನ್ನು ಯೋಜನೆಗೆ ಮಾರ್ಗದರ್ಶಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುವಂತೆ ಸಚಿವರು ನಿರ್ದೇಶನ ನೀಡಿದರು. ಬೇಡಿಕೆಗನುಗುಣವಾಗಿ ಹಣ್ಣಿನ ಗಿಡಗಳನ್ನು ಮತ್ತು ಬೀಜಗಳನ್ನು ಪೂರೈಸುವಂತೆ ಸಲಹೆ ನೀಡಿದರು.

ಸಚಿವರ ನಿರ್ಧಾರ ಹೆಮ್ಮೆ ತಂದಿದೆ, ಹರೀಶ್ ಪೂಂಜ 

ಧರ್ಮಾಧಿಕಾರಿ ಡಾ.ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ರಾಜ್ಯದಲ್ಲೇ ಮೊದಲ ಬಾರಿಗೆ ಬೆಳ್ತಂಗಡಿಯಲ್ಲಿ ಅರಣ್ಯ ಇಲಾಖಾ ವತಿಯಿಂದ ಸಚಿವರು ವಿನೂತನ ಕಾರ್ಯಕ್ರಮ ನಡೆಸಲು ನಿರ್ಧರಿಸಿರುವುದು ಹೆಮ್ಮೆ ತಂದಿದೆ. ಇದಕ್ಕೆ ಸಚಿವರಿಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಸಭೆಯಲ್ಲಿ ಮಂಗಳೂರು ಡಿಸಿಎಫ್ ಕರಿಕಲನ್, ಕೆಎಫ್‌ಡಿಸಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕಮಲಾ, ಸಾಮಾಜಿಕ ಅರಣ್ಯ ಡಿಸಿಎಫ್ ಶ್ರೀಧರ್, ಎಸಿಎಫ್ ಸುಬ್ರಹ್ಮಣ್ಯ ರಾವ್, ಸುಳ್ಯ ಎಸಿಎಫ್ ಅಸ್ಟಿನ್ ಸೋನ್ಸ್, ಬೆಳ್ತಂಗಡಿ ತಹಶೀಲ್ದಾರ್ ಮಹೇಶ್ ಜೆ., ಜಾಗೃತಿ ವೇದಿಕೆ ರಾಜ್ಯ ಕಾರ್ಯದರ್ಶಿ ವಿನ್ಸೆಂಟ್ ಪಾಯಸ್, ಧರ್ಮಸ್ಥಳ ಕೃಷಿ ವಿಭಾಗದ ಪ್ರಬಂಧಕ ಬಾಲಕೃಷ್ಣ ಪೂಜಾರಿ ಹಾಗೂ ರೆಗ್ಯೂಲರ್, ವನ್ಯಜೀವಿ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!