ದೆಹಲಿ: ರಾಜಧಾನಿ ದೆಹಲಿಯಲ್ಲಿ ಕೊರೊನಾ ಎರಡನೇ ಅಲೆಯಿಂದ ಹೆಚ್ಚುತ್ತಿರುವ ಕೊರೊನಾ ಕೇಸ್ಗಳನ್ನು ಗಮನದಲ್ಲಿಟ್ಟುಕೊಂಡು ಒಂದು ವಾರದ ಕಾಲ ಸಂಪೂರ್ಣ ಲಾಕ್ಡೌನ್ ವಿಧಿಸಿ ದೆಹಲಿ ಸರ್ಕಾರ ಆದೇಶ ಹೊರಡಿಸಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಸಭೆ ನಡೆಸಿದ್ದು, ಇಂದು ರಾತ್ರಿಯಿಂದ ಏಪ್ರಿಲ್ 26ರ ಮಧ್ಯರಾತ್ರಿಯವರೆಗೆ ಲಾಕ್ಡೌನ್ ಜಾರಿ ಮಾಡಲು ನಿರ್ಧರಿಸಿದ್ದಾರೆ. ಈ ವಿಚಾರವನ್ನು ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಸಿಎಂ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ.
ಆಹಾರ, ವೈದ್ಯಕೀಯ ಸೇವೆಗಳು ಸೇರಿದಂತೆ ಅಗತ್ಯ ಸೇವೆಗಳು ಮುಂದುವರಿಯಲಿವೆ. ಕೇವಲ 50 ಜನರು ಮಾತ್ರ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು. ಇದಕ್ಕಾಗಿಯೇ ಪ್ರತ್ಯೇಕವಾಗಿ ಪಾಸ್‌ಗಳನ್ನು ನೀಡಲಾಗುತ್ತದೆ. ವಿವರವಾದ ಆದೇಶವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.