ಶಾಸಕ ಹರೀಶ್ ಪೂಂಜ ಮೂಲ್ಯರ ಯಾನೆ ಕುಂಬಾರ ಸಮುದಾಯದ “ದೇವರಾಜ ಅರಸು”: ಹರೀಶ್ ಕಾರಿಂಜ

ಗುರುವಾಯನಕೆರೆ: ನಮ್ಮ ಸಂಘಕ್ಕೆ ಕೊಟ್ಟ ಭರವಸೆಯಂತೆ ನವೀಕರಣ ಕಟ್ಟಡಕ್ಕೆ ತಮ್ಮ ನಿಧಿಯಿಂದ 5 ಲಕ್ಷ ರೂ, ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ರೂ 25 ಲಕ್ಷ ಒಟ್ಟು ರೂ 30 ಲಕ್ಷ ಅನುದಾನವನ್ನು ಮಂಜೂರು ಮಾಡುವ ಮೂಲಕ ತಮ್ಮ ಮಾತನ್ನು ಉಳಿಸಿಕೊಂಡು ಸಮುದಾಯದ ಬಗ್ಗೆ ಸದಾ ಚಿಂತನೆ ಮಾಡುತ್ತಾ ಸಂಘದೊಂದಿಗೆ ನಿಕಟ ಸಂಪರ್ಕದಲ್ಲಿರುವ ತಾಲೂಕಿನ ಏಕೈಕ ನಾಯಕ ಹರೀಶ್ ಪೂಂಜ ಮೂಲ್ಯರ ಯಾನೆ ಕುಂಬಾರರ ಸಮುದಾಯದವರಿಗೆ “ದೇವರಾಜ ಅರಸು” ಆಗಿರುತ್ತಾರೆ ಎಂದು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ತಾಲೂಕು ಅಧ್ಯಕ್ಷ ಹರೀಶ್ ಕಾರಿಂಜ ಹೇಳಿದರು.

ಅವರು ಗುರುವಾಯನಕೆರೆ ಕುಲಾಲ ಮಂದಿರದಲ್ಲಿ ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

1981 ಫೆ15 ರಂದು ಸಮಾಜದ ಸಂಘಟನೆಯ ಹಿತದೃಷ್ಟಿಯಿಂದ ಹಿರಿಯರಾದ ಸೇಸಪ್ಪ ಮೂಲ್ಯ ಮಡಂತ್ಯಾರ್, ಇವರ ಅಧ್ಯಕ್ಷತೆಯಲ್ಲಿ ಮತ್ತು ಉಪಾಧ್ಯಕ್ಷ ವಾಸುದೇವ ಪೆರಾಜೆ ಹಾಗೂ ಕಾರ್ಯದರ್ಶಿ ಯದುಚಂದ್ರ ಮಾಲಾಡಿ ಹಾಗೂ ಹಲವಾರು ಸಮುದಾಯದ ಹಿರಿಯರ ಪರಿಶ್ರಮದಿಂದ ಸಂಘ ಸ್ಥಾಪನೆಯಾಗಿದೆ. 1987 ನೇ ಇಸವಿಯಲ್ಲಿ ಸಂಘಗಳ ನೋಂದಾವಣಾ ಕಾಯಿದೆ 1960 ಅಡಿ ನೋಂದಾಯಿತವಾಗಿರುತ್ತದೆ. ಕುಲಾಲ ಮಂದಿರವನ್ನು 1992 ನೇ ಫೆ 12 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದ್ದರು. ಇದೀಗ ಕುಲಾಲ ಮಂದಿರವನ್ನು ಮರು ನವೀಕರಣ ಮಾಡುತಿದ್ದು, ಧರ್ಮಸ್ಥಳದಿಂದ 2.50 ಲಕ್ಷ ಅನುದಾನ ಮಂಜೂರಾಗಿರುತ್ತದೆ.ನವೀಕರಣ ಕಟ್ಟಡದ ಉದ್ಘಾಟನೆಗೆ ಶ್ರೀ ಕ್ಷೇತ್ರದ ಧರ್ಮಾಧಿಕಾರಿಯವರನ್ನು ಆಹ್ವಾನಿಸಲಾಗುವುದು ಎಂದರು.

ಬೆಳ್ತಂಗಡಿ ತಾಲೂಕು ಕ್ರೀಡಾಂಗಣದಲ್ಲಿ ಕಳೆದ 2018 ನೇ ಫೆ 04 ರಂದು ನಡೆದ ಬೃಹತ್ ಹಕ್ಕೊತ್ತಾಯ ಮತ್ತು ಸಮಾವೇಶದಲ್ಲಿ ಹಲವಾರು ನಾಯಕರುಗಳು ಭಾಗವಹಿಸಿದ ಸಂದರ್ಭದಲ್ಲಿ ಮೊದಲ ಬಾರಿ ನಮ್ಮ ಸಮುದಾಯದವರನ್ನು ಉದ್ಧೇಶಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ ನಮ್ಮ ಸಮುದಾಯಕ್ಕೆ ಭರವಸೆಗಳ ಸುರಿಮಳೆಯನ್ನು ಕೊಟ್ಟಿರುತ್ತಾರೆ.‌ ಕೊಟ್ಟ ಭರವಸೆಯಂತೆ ನವೀಕರಣ ಕಟ್ಟಡಕ್ಕೆ 30 ಲಕ್ಷ ಅನುದಾನ ತಮ್ಮ ನಿಧಿಯಿಂದ ನೀಡಿ ತಾಲೂಕಿನ ಹಿಂದುಳಿದ ವರ್ಗದ ಸಮುದಾಯದವರ ಪಾಲಿಗೆ ಪ್ರಾಮಾಣಿಕ ಸೇವೆ ನೀಡುತ್ತಿರುವ ಇಂತಹ ಶಾಸಕರನ್ನು ಪಡೆದ ನಾವು ಧನ್ಯರು ಈ ಮೂಲಕ ನಾವು ಅವರಿಗೆ ಚಿರ ಋಣಿಗಳು ಎಂದ ಅವರು  ಕರ್ನಾಟಕ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ನಮ್ಮ ಸಂಘದ ವತಿಯಿಂದ ಅಭಿನಂದನೆ ಸ್ವೀಕರಿಸಿ ರೂ 5 ಲಕ್ಷ ಅನುದಾನ ಮಂಜೂರು ಮಾಡಿದ್ದಾರೆ ಇವರಿಗೂ ನಾವು ಅಭಾರಿಯಾಗಿರುತ್ತೇವೆ ಎಂದರು.

ನಾಳೆ ಫೆ 18 ಆದಿತ್ಯವಾರ ನಮ್ಮ ಸಂಘದಲ್ಲಿ ವಿದ್ಯಾರ್ಥಿ ವೇತನ ಹಾಗೂ ನಮ್ಮ ಸಮಾಜದಿಂದ ಆಯ್ಕೆಯಾದ ನೂತನ ಗ್ರಾಮ ಪಂಚಾಯತ್ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ನೆರವೇರಲಿದೆ‌. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪ್ ಸಿಂಹ ನಾಯಕ್ ಭಾಗವಹಿಸಲಿದ್ದಾರೆ. ಸರಕಾರದ ಕೋವಿಡ್-19 ನಿಯಮದಂತೆ ಕಾರ್ಯಕ್ರಮ ಸರಳ ರೀತಿಯಲ್ಲಿ ನಡೆಯಲಿದೆ ಎಂದರು.ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕೋಶಾಧಿಕಾರಿ ವಸಂತ ಕುಲಾಲ್ ಸಂಜಯನಗರ,ಜೊತೆ ಕಾರ್ಯದರ್ಶಿ ಉಮೇಶ್ ಕುಲಾಲ್ ಗುರುವಾಯನಕೆರೆ, ಸದಸ್ಯರುಗಳಾದ ಪುಷ್ಪರಾಜ್ ಕುಲಾಲ್ ಲಾಯ್ಲ, ವಕೀಲ ಉದಯ ಬಿ.ಕೆ. ಬಂದಾರು, ಹರೀಶ್ ಮೂಲ್ಯ ನಾರಾವಿ ಉಪಸ್ಥಿತರಿದ್ದರು.

error: Content is protected !!