ಬೆಳ್ತಂಗಡಿ: ಐತಿಹಾಸಿಕ ಕಳಿಯ ಗ್ರಾಮದ ಬದಿನಡೆ ಮಂಜಲಡ್ಕ ಪರಿವಾರ ದೈವಗಳ ಪ್ರತಿಷ್ಠೆ- ಕಲಾಶೋತ್ಸವ ಮೇ.1 ರಿಂದ 6 ರವರೆಗೆ ನಡೆಯಲಿದ್ದು, ಇದರ ಅಂಗವಾಗಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ವೇ.ಮೂ. ರಾಘವೇಂದ್ರ ಭಾಂಗಿಣ್ಣಾಯ ಅವರ ನೇತೃತ್ವದಲ್ಲಿ ವೈದಿಕ- ವಿಧಿ-ವಿಧಾನ ಗಳೊಂದಿಗೆ ಚಪ್ಪರ ಮೂಹೂರ್ತ ಎ.17 ರಂದು ಬದಿನಡೆ ದೈವಗಳ ಸನ್ನಿ ದಾನದ ವಠಾರದಲ್ಲಿ ನಡೆಯಿತು.
ಕಳಿಯ ಬೀಡು ವ್ಯಾಪ್ತಿಯ ಬಂಗಾಡಿ ದೈವಗಳೆಂದೇ ಪ್ರಸಿದ್ದ ಪಡೆದಿರುವ ಉಳ್ಳಾಕುಲು ಉಳ್ಳಾಲ್ತಿ ಪರಿವಾರ ಸಾನಿಧ್ಯ, ದೈವ ಕೊಡಮಣಿತ್ತಾಯ ಪರಿವಾರ ಸಾನಿಧ್ಯ ಹೊಂದಿರುವ ಕ್ಷೇತ್ರ. ತುಳುನಾಡಿನ ಪ್ರಸಿದ್ದ ಹಾಗೂ ವೈಭವದ ಬಂಗಾಡಿ ರಾಜಮನೆತನದ ಬಂಗರಸರ ಕಾಲದಿಂದಲೂ ಉಳ್ಳಾಕುಲು ಉಳ್ಳಾಲ್ತಿ ಪರಿವಾರ ಸಾನಿಧ್ಯ, ದೈವ ಕೊಡಮಣಿತ್ತಾಯ ಪರಿವಾರ ಸಾನಿಧ್ಯದ ಆರಾಧನೆ ಇಲ್ಲಿ ನಡೆದಿದೆ ಎಂಬ ಐತಿಹ್ಯವಿದೆ.
ಬಂಗಾಡಿ ಸೀಮೆಯ ರಾಜಮನೆತನದ ಅಧೀನದಲ್ಲಿ ಕಳಿಯಬೀಡು ಕೂಡ ವ್ಯಾಪ್ತಿ ಹೊಂದಿರುವುದರಿಂದ ಕಳಿಯಬೀಡಿನ ಬಳ್ಳಾಲ ಮನೆತನದ ಮುಖ್ಯಸ್ಥಿಕೆಯಲ್ಲಿ ಉಳ್ಳಾಕುಲು ಉಳ್ಳಾಲ್ತಿ ಪರಿವಾರ ಸಾನಿಧ್ಯ, ದೈವ ಕೊಡಮಣಿತ್ತಾಯ ಪರಿವಾರ ಸಾನಿಧ್ಯದಲ್ಲಿ ಪೂಜಾ ವಿಧಿವಿದಾನ ನೆರವೇರಿಸಲಾಗಿತ್ತು. ಆದರೆ ಕಾಲಕ್ರಮೇಣ ರಾಜಾಡಳಿತ ಅಸ್ಥಿತ್ವ ಕಳೆದುಕೊಂಡಿದ್ದರಿಂದ ರಾಜಾಶ್ರಯದಲ್ಲಿ ನಡೆಯುತ್ತಿದ್ದ ಪೂಜಾ ವಿಧಿವಿದಾನವೂ ಸ್ಥಗಿತಗೊಂಡಿತ್ತು. ಹಿಂದಿನ ಕಾಲದಲ್ಲಿ ಇಡೀ ಕಳಿಯ ವ್ಯಾಪ್ತಿಯ ಸಂಭೃದ್ದತೆಗಾಗಿ (ಈಗಿನ ನ್ಯಾಯತರ್ಪು, ಕಳಿಯ ಹಾಗೂ ಓಡಿಲ್‌ನಾಳ) ಜನರು ಇಲ್ಲಿನ ಸತ್ಯಧರ್ಮ ನಡೆಯಲ್ಲಿ ನಿಂತು ದೈವಕ್ಕೆ ಪ್ರರ್ಥನೆ ಸಲ್ಲಿಸುತ್ತಿದ್ದರು ಎಂಬ ಇತಿಹಾಸವಿದೆ.
ರಾಜಾಶ್ರಯವಿಲ್ಲದೆ ಕಳೆದ 80 ವರ್ಷಗಳಿಂದ ಕಳಿಯ ಬೀಡು ಬದಿನಡೆ ಮಂಜಲಡ್ಕ ದೈವಗಳ ಪೂಜಾ ಕೈಂಕರಿಯವಿಲ್ಲದೆ ಪಾಳು ಬಿದ್ದಿತ್ತು. ಪ್ರಸ್ಥುತ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುವರ್ಣೇಂದ್ರ ಜೈನ್ ಕಳಿಯಬೀಡು, ಜೀರ್ಣೋದ್ಧಾರ ಸಮಿತಿ ಕಾರ್ಯಧ್ಯಕ್ಷ ಸುರೇಂದ್ರ ಕುಮಾರ್ ಕಳಿಯಬೀಡು, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಸತ್ಯೇಂದ್ರ ಜೈನ್ ಕಳಿಯಬೀಡು, ಕಲಶಾಭೀಷೇಕ ಸಮಿತಿ ಕಾರ್ಯಾಧ್ಯಕ್ಷ ವಸಂತ ಮಜಲು ಮುಂದಾಳುತ್ವದಲ್ಲಿ ಸುಮಾರು 90 ಲಕ್ಷ ರೂ. ವೆಚ್ಚದಲ್ಲಿ ಕ್ಷೇತ್ರದ ಅಭಿವೃದ್ದಿಗೆ ಮುಂದಡಿಯಿಲಾಗಿದೆ.
ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಕೂಸಪ್ಪ ಗೌಡ ಹೀರ್ಯ, ಕಲಶಾಭಿಷೇಕ ಸಮಿತಿ ಕೋಶಾಧಿಕಾರಿ ಬಾಲಕೃಷ್ಣ ಗೌಡ ಬಿರ್ಮೋಟ್ಟು, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿಗಳಾದ ಸುರೇಶ್ ಕುಮಾರ್ ಆರ್.ಎನ್,ಯಶೋಧರ ಶೆಟ್ಟಿ ಕೆ, ಸಂಘಟನ ಕಾರ್ಯದರ್ಶಿಗಳಾದ ರಾಜೇಶ್ ಪೆಂರ್ಬುಡ, ರಾಘವ ಹೆಚ್, ನಾಳ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭುವನೇಶ್ ಗೇರುಕಟ್ಟೆ, ಕಲಾಶಾಭೀಷೇಕ ಸಮಿತಿ ಅಧ್ಯಕ್ಷ ಕೇಶವ ಬಂಗೇರ ಬಿ., ನಾಳ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಮುದ್ದುಂಜ ಸೇರಿದಂತೆ ಹಲವರು ಉಪಸ್ಥಿತರಿದ್ದರು.